ಹೊಸದಿಲ್ಲಿ : 1984ರ ಸಿಕ್ಖ ವಿರೋಧಿ ದೊಂಬಿ ಪ್ರಕರಣಕ್ಕೆ ಸಂಬಂಧಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿ ಪ್ರಶ್ನಿಸಬೇಕು ಎಂದು ಪಂಜಾಬಿನ ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಇಂದು ಬುಧವಾರ ಆಗ್ರಹಿಸಿದ್ದಾರೆ.
ವಿಶೇಷ ತನಿಖಾ ತಂಡ ಸೋನಿಯಾ ಗಾಂಧಿಗೆ ಸಮನ್ಸ್ ಜಾರಿ ಮಾಡಿ ಆಕೆಯನ್ನು ತನಿಖೆಗೆ ಗುರಿಪಡಿಸಬೇಕು ಎಂದು ಸುಖಬೀರ್ ಒತ್ತಾಯಿಸಿದ್ದಾರೆ.
‘ಸೋನಿಯಾ ಗಾಂಧಿ ಅವರ ಪತಿ (ರಾಜೀವ್ ಗಾಂಧಿ) ಅಧಿಕಾರದಲ್ಲಿದ್ದಾಗ ಸೋನಿಯಾ ನಿವಾಸದಲ್ಲೇ 1984ರ ಸಿಕ್ಖ ವಿರೋಧಿ ದೊಂಬಿಯ ಸಂಚನ್ನು ರೂಪಿಸಲಾಗಿತ್ತು. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸೋನಿಯಾಗೆ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡುವಂತೆ ಕೇಳಿಕೊಳ್ಳಬೇಕು’ ಎಂದು ಬಾದಲ್ ಹೇಳಿರುವುದನ್ನು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
1984ರ ಸಿಕ್ಖ ವಿರೋದಿ ದೊಂಬಿಯ ಇಬ್ಬರು ಅಪರಾಧಿಗಳಾದ ಯಶ್‌ಪಾಲ್ ಸಿಂಗ್‌ಗೆ ಮರಣ ದಂಡನೆ ಮತ್ತು ನರೇಶ್ ಸೆಹರಾವತ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ದಿಲ್ಲಿ ಕೋರ್ಟ್ ತೀರ್ಪು ನೀಡಿದ ಮರು ದಿನವೇ ಸುಖಬೀರ್ ಈ ಹೇಳಿಕೆ ನೀಡಿದ್ದಾರೆ.
ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಬಾದಲ್ ಅವರು 34 ವರ್ಷಗಳ ಬಳಿಕ ಹೊರಬಂದಿರುವ ಕೋರ್ಟ್ ತೀರ್ಪಿಗೆ ತೃಪ್ತಿ ವ್ಯಕ್ತಪಡಿಸಿ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ಮಾಡಿದರು.