ಮುಂಬಯಿ, ಡಿ. 22: ಆರ್ಥಿಕವಾಗಿ ಹಿಂದುಳಿದ ಸಮಾಜದವರನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು. ಸಮಾಜದಲ್ಲಿಂದು ಆರ್ಥಿಕವಾಗಿ ಹಿಂದುಳಿದವರು ಸಾಕಷ್ಟು ಮಂದಿ ಇದ್ದಾರೆ. ಅಂತವರನ್ನು ಗುರುತಿಸಿ ಅವರಿಗೆ ಸಹಕಾರ ನೀಡುವತ್ತ ಗಮನ ಹರಿಸಬೇಕು. ವಿಶೇಷ ಚೇತನರಿಗೆ ನಮ್ಮ ಸಂಘ-ಸಂಸ್ಥೆಗಳು ಸದಾ ಬೆನ್ನೆಲುಬಾಗಿ ಇರಬೇಕು ಎಂದು ಭವಾನಿ ಶಿಪ್ಪಿಂಗ್ ಸರ್ವಿಸಸ್ ಪ್ರೈ. ಇದರ ಕಾರ್ಯಾಧ್ಯಕ್ಷ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿ ಚೆಲ್ಲಡ್ಕ ಅವರು ತಿಳಿಸಿದರು.
ಡಿ. 20ರಂದು ಸುರತ್ಕಲ್ ಬಂಟರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಸಮಾವೇಶ, ಅಭಿನಂದನೆ, ಸಹಾಯಹಸ್ತ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನನಗೆ ಸಿಕ್ಕಿದ ಪುರಸ್ಕಾರವು ಸಮಸ್ತ ಹೊರನಾಡ ಕನ್ನಡಿಗರಿಗೆ ದೊರೆತ ಗೌರವವಾಗಿದೆ. ನಿಮ್ಮೆಲ್ಲರ ಪ್ರೀತಿ, ಗೌರವಗಳಿಗೆ ಋಣಿಯಾಗಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.
ಮೂಲ್ಕಿ-ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಎ. ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಉದಾ^ಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪುರಸ್ಕೃತ ಕುಸುಮೋದರ ದೇರಣ್ಣ ಶೆಟ್ಟಿ ಚೆಲ್ಲಡ್ಕ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ರೀಡಾರತ್ನ ಪುರಸ್ಕೃತ ಖಂಡಿಗೆ ಗೋಪಾಲಕೃಷ್ಣ ಸರ್ವೋತ್ತಮ ಪ್ರಭು ಮಾಧವನಗರ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪದ್ಮನಾಭ ಕೆ ಸುರತ್ಕಲ್, ಯೋಗೀಶ್ ಕಾಂಚನ್ ಬೈಕಂಪಾಡಿ ಹಾಗೂ ಲಾಕ್‌ಡೌನ್ ಸಂದರ್ಭದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ ಡಾ| ಸುರೇಶ್ ಸುರತ್ಕಲ್, ಕಾನ ಮಿಸ್ಕಿತ್ ಆಸ್ಪತ್ರೆಯ ನಿರ್ದೇಶಕ ಡಾ| ಜಿ. ಕ್ಲಿಪರ್ಡ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಡಾ| ಪಿ. ವಿ ಶೆಟ್ಟಿ ಮುಂಬಯಿ ಇವರಿಂದ ವರ್ಷಂಪ್ರತಿ ನೀಡಲ್ಪಡುವ ವಿದ್ಯಾರ್ಥಿವೇತನವನ್ನು ಹಾಗೂ ವಿಶೇಷಚೇತನರಿಗೆ ಸಹಾಯಹಸ್ತ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ| ವೈ. ಭರತ್ ಶೆಟ್ಟಿ, ಮಂಗಳೂರು ಸಣ್ಣ ನೀರಾವರಿ ವಿಭಾಗದ ಕಾರ್ಯಪಾಲಕ ಅಭಿಯಂತ ಗೋಕುಲ್‌ದಾಸ್, ಮುಂಬಯಿ ಬಂಟರ ಸಂಘ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಕರ್ನೂರ್ ಮೋಹನ್ ರೈ, ಮಂಗಳೂರು ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಕೆ. ಭಂಡಾರಿ, ಬಂಟರ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಶೆಟ್ಟಿ, ಸಂಘದ ಉಪಾಧ್ಯಕ್ಷ ನವೀನ್ ಶೆಟ್ಟಿ ಪಡ್ರೆ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಂಘಟನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜತೆ ಕಾರ್ಯ ದರ್ಶಿ ಪ್ರವೀಣ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುಧಾಕರ್ ಎಸ್. ಪೂಂಜ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಲೋಕಯ್ಯ ಶೆಟ್ಟಿ ಪ್ರಸ್ತಾವಿಸಿದರು. ರಾಜೇಶ್ವರಿ ಡಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.