ಮುಂಬಯಿ: ಮಹಾರಾಷ್ಟ್ರ ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಕಳಪೆ ಸಾಧನೆ ಮಾಡಿರುವ ಕುರಿತು ನೈತಿಕ ಹೊಣೆ ಹೊತ್ತಿರುವ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಪಕ್ಷ ಉಪಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಫಲಿತಾಂಶ ಪ್ರಕಟವಾದ ಮರುದಿನ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫಡ್ನವಿಸ್”ಮಹಾರಾಷ್ಟ್ರದಲ್ಲಿ ನಾನು ಪಕ್ಷವನ್ನು ಮುನ್ನಡೆಸುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ಪಕ್ಷಕ್ಕಾಗಿ ಶ್ರಮಿಸುವ ಸಲುವಾಗಿ ನನ್ನನ್ನು ಸರ್ಕಾರದ ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ನಾನು ಬಿಜೆಪಿ ಹೈಕಮಾಂಡ್ ಗೆ ವಿನಂತಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
” ನಮ್ಮ ಸ್ಥಾನಗಳು ಕಡಿಮೆಯಾಗಿದೆ, ಸೋಲಿನ ಸಂಪೂರ್ಣ ಜವಾಬ್ದಾರಿ ಜವಾಬ್ದಾರಿಯನ್ನು ನಾನು ಸ್ವೀಕರಿಸುತ್ತೇನೆ. ಏನೇ ಕೊರತೆಯಿದ್ದರೂ ಅದನ್ನು ಪೂರೈಸಲು ಪ್ರಯತ್ನಿಸುತ್ತೇನೆ. ನಾನು ಒಬ್ಬ ಓಡಿಹೋಗುವ ವ್ಯಕ್ತಿಯಲ್ಲ. ಹೊಸ ತಂತ್ರವನ್ನು ಸಿದ್ಧಪಡಿಸುತ್ತೇವೆ ಮತ್ತು ಹೊಸ ತಂತ್ರವನ್ನು ಸಿದ್ಧಪಡಿಸಿದ ನಂತರ ನಾವು ಸಾರ್ವಜನಿಕರ ನಡುವೆ ಹೋಗುತ್ತೇವೆ” ಎಂದರು.
48 ಸ್ಥಾನಗಳ ಪೈಕಿ ಬಿಜೆಪಿ 9, ಶಿವಸೇನೆ ಶಿಂಧೆ ಬಣ 7 ಮತ್ತು ಅಜಿತ್ ಪವಾರ್ ಬಣದ ಎನ್ ಸಿಪಿ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿ ಭಾರೀ ಹಿನ್ನಡೆ ಅನುಭವಿಸಿದೆ.
ಏಕನಾಥ್ ಶಿಂಧೆ ಅವರು ಶಿವಸೇನೆಯಿಂದ ಹೊರಬಂದು ಬಿಜೆಪಿಯೊಡನೆ ಕೈಜೋಡಿಸಿ ಸರಕಾರ ರಚಿಸಿದ ಬಳಿಕ ಮುಖ್ಯಮಂತ್ರಿಯಾಗಿ ಅನುಭವ ಹೊಂದಿದ್ದ ಫಡ್ನವಿಸ್ ಪಕ್ಷದ ಆಜ್ಞೆ ಮೀರದೆ ಉಪಮುಖ್ಯಮಂತ್ರಿಯಾಗಲು ಒಪ್ಪಿಕೊಂಡಿದ್ದರು.