Advertisement
ಉತ್ತಮ ಫಲಿತಾಂಶದ ಸಂಭ್ರಮದ ಜೊತೆಗೆಯೇ ಭವಿಷ್ಯದ ಸವಾಲು ಎದುರಾಯಿತು. ಉದ್ಯೋಗ ದೊರಕುವ ದಾರಿಗಳ ಪರಿಚಯವಿರಲಿಲ್ಲ. ವಿಜಯಾ ಬ್ಯಾಂಕಿನಲ್ಲಿ ನೇರವಾಗಿ ದೊರೆಯುತ್ತಿದ್ದ ಅಧಿಕಾರಿ ಹುದ್ದೆಯನ್ನು, ಅಧ್ಯಾಪನ ಬೇಕು ಎಂಬ ಕಾರಣಕ್ಕೆ ನಿರಾಕರಿಸಿದೆ. ಪುತ್ತೂರು ವಿವೇಕಾನಂದ ಕಾಲೇಜಿಗೆ ಸಂದರ್ಶನಕ್ಕೆ ಹೋದೆ. ನನ್ನ ಅರ್ಹತೆ ಹೆಚ್ಚಾಯಿತೆಂದು ಆಯ್ಕೆಯಾಗಲಿಲ್ಲ.
Related Articles
Advertisement
ಆಗಸ್ಟ್ 3, 1970: ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರ ವಿಳಾಸಕ್ಕೆ ನನ್ನ ಹೆಸರಿನ ಆದೇಶ ಕೈಸೇರಿತು. ಮೈಸೂರು ವಿವಿಯ ಜುಲೈ 30, 1970ರ ಆದೇಶದಲ್ಲಿ ನನ್ನನ್ನು ತಾತ್ಕಾಲಿಕ ನೆಲೆಯಲ್ಲಿ ಕನ್ನಡ ಉಪನ್ಯಾಸಕ ಆಗಿ ನೇಮಕ ಮಾಡಿ, “ನಿರ್ದೇಶಕರು, ಸ್ನಾತಕೋತ್ತರ ಕೇಂದ್ರ, ಕರಂಗಲಪಾಡಿ, ಮಂಗಳೂರು’ ಇವರಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ತಿಳಿಸಲಾಗಿತ್ತು. ಸಂಬಳ ತಿಂಗಳಿಗೆ 300 ರೂಪಾಯಿ ಮತ್ತು ಇತರ ಭತ್ಯೆಗಳು. ಪ್ರೊಫೆಸರ್ ಎಸ್ವಿಪಿ ಅವರೇ ನಿರ್ದೇಶಕರು ಆಗಿದ್ದರಿಂದಲೇ ಆ ದಿನವೇ ಎಲ್ಲ ದಾಖಲೆ ಸಲ್ಲಿಸಿ ಕನ್ನಡ ಉಪನ್ಯಾಸಕ ಹುದ್ದೆಗೆ ಸೇರಿಕೊಂಡೆ. ಪ್ರೊಫೆಸರ್ ಎಸ್‌ವಿಪಿ ಬಹಳ ಸಂಭ್ರಮಪಟ್ಟರು. ಗುರುಗಳಾದ ಲಕ್ಕಪ್ಪ ಗೌಡರು ಮತ್ತು ಐತಾಳರು ಸಂತೋಷಪಟ್ಟು ಪ್ರೀತಿಯ ಅಭಿನಂದನೆ ಸಲ್ಲಿಸಿದರು. ನನಗಂತೂ ಮೂವರು ಗುರುಗಳ ಜೊತೆಗೆ ಸಹೋದ್ಯೋಗಿಯಾಗಿ ಕನ್ನಡ ಕಾಯಕವನ್ನು ಮುನ್ನಡೆಸುವ ಉತ್ಸಾಹ.
ಕರಂಗಲಪಾಡಿಯ ನಮ್ಮ ಕನ್ನಡವಿಭಾಗದ ಹಳೆಯ ಕಟ್ಟಡದ ಕಾರಿಡಾರ್‌ನಲ್ಲಿ ನಿಂತುಕೊಂಡು ಒಂದು ಕ್ಷಣ ಭಾವಪರವಶನಾದೆ. ಅಗ್ರಾಳದ ನನ್ನ ಮನೆ ಗದ್ದೆ , ಕೆರೆ ಗುಡ್ಡೆಗಳು, ನನ್ನ ಊರು ಪುಣಚ, ಪರಿಯಾಲ್ತಡ್ಕ ಶಾಲೆ, ಪುತ್ತೂರು ಬೋರ್ಡ್ ಹೈಸ್ಕೂಲು, ಸೈಂಟ್ ಫಿಲೋಮಿನಾ ಕಾಲೇಜು, ನಾನು ಪಾಠಮಾಡಿದ ಮಕ್ಕಳು, ಎಸ್ವಿಪಿ ಕರ್ಣಧಾರತ್ವದ ಕನ್ನಡ ನೋಂಪಿ- ಎಲ್ಲವೂ ಅಲೆಯುವ ಮನದಲ್ಲಿ ಸುಳಿದಾಡಿದವು.
ಭಾವನಾಲಹರಿಯ ಬಿಡುವಿಗೆ ಸಮಯ ಇರಲಿಲ್ಲ. ಎರಡನೆಯ ಎಂಎ ತರಗತಿ ಆರಂಭ ಆಗಿತ್ತು. ಮೊದಲನೆಯ ಎಂಎಯ ಪ್ರವೇಶಾತಿ ಮುಗಿದು 37 ಮಂದಿ ಉತ್ಸಾಹಿಗಳು ಕಾಯುತ್ತಿದ್ದರು. ಹಿಂದಿನ ವರ್ಷದ 31 ಮಂದಿ ಸೇರಿ, ಒಟ್ಟು 68 ಮಂದಿ ನಮ್ಮ ಕನ್ನಡ ವಿಭಾಗದ ಇಡಿಕಿರಿದಾದ ಕೋಣೆ ಕಾರಿಡಾರ್‌ಗಳಲ್ಲಿ ತುಂಬಿಕೊಂಡಿದ್ದರು. ಎಸ್ವಿಪಿ ಅಧ್ಯಾಪಕರಿಗೆ ಪಾಠಗಳನ್ನು ಹಂಚಿದರು. “ಯಾವುದನ್ನು ಕೊಟ್ಟರೂ ಮಾಡುತ್ತೇನೆ’ ಎಂದು ಹೇಳಿದೆ. ಮೊದಲನೆಯ ಎಂಎಗೆ ಪಂಪಭಾರತ ಮತ್ತು ಕನ್ನಡ ಛಂದಸ್ಸು, ಎರಡನೆಯ ಎಂಎಗೆ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ವಚನಸಾಹಿತ್ಯದ ಪಠ್ಯಗಳು-ದೇವರ ದಾಸಿಮಯ್ಯನ ವಚನಗಳು ಮತ್ತು ಕುವೆಂಪು ಅವರ ಕಿಂಕಿಣಿ ವಚನ ಸಂಕಲನ- ಇವನ್ನು ಪಾಠಮಾಡಲು ನನಗೆ ಒಪ್ಪಿಸಿದರು. ಇವು ಕಳೆದ ಎರಡು ವರ್ಷ ನಾನು ಎಂಎ ವಿದ್ಯಾರ್ಥಿಯಾಗಿ ಅಧ್ಯಯನ ಮಾಡಿದ ವಿಷಯಗಳು. ಈಗಿನ ಸವಾಲು ಎಂದರೆ ಅವುಗಳನ್ನು ಮೊದಲು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು, ಆಮೇಲೆ ವಿದ್ಯಾರ್ಥಿಗಳಿಗೆ ಪಾಠಮಾಡಬೇಕು. ಅದಕ್ಕೆ ಹೊತ್ತು ಬೇಕು. ಆದರೆ ಹೊತ್ತು ಸಾಗಿಸಲು ಸಮಯ ಇಲ್ಲ. ವಿದ್ಯಾರ್ಥಿಗಳು ತರಗತಿಯಲ್ಲಿ ಕಾಯುತ್ತಿದ್ದಾರೆ !
ಎರಡನೆಯ ಎಂಎ ವಿದ್ಯಾರ್ಥಿಗಳು ನನ್ನ ಜೂನಿಯರ್ ತಂಡದವರು. ಹಿಂದಿನ ವರ್ಷ ಅವರ ಜೊತೆಗೆ ಕಲೆತು ವಿಭಾಗದಲ್ಲಿ ಕಾರ್ಯಕ್ರಮಗಳಲ್ಲಿ ಹಾಸ್ಟೆಲ್‌ನಲ್ಲಿ ಒಟ್ಟಿಗೆ ಕೆಲಸಮಾಡಿ ಮಾತುಕತೆ ಆಡಿ, ಕೆಲವೊಮ್ಮೆ ತಮಾಷೆ ಮಾಡಿದ ನೆನಪುಗಳು ನನ್ನಲ್ಲೂ ಇದ್ದುವು, ಅವರಲ್ಲೂ ಇದ್ದುವು. ಈಗ ನಾನು ಅವರಿಗೆ ಅಧ್ಯಾಪಕನಾಗಿ ತರಗತಿಯಲ್ಲಿ ಪಾಠಮಾಡುವ ಸರದಿ. ಇದರ ಜೊತೆಗೆ ಆ ವಿದ್ಯಾರ್ಥಿಗಳಲ್ಲಿ ಸುಮಾರು ಅರ್ಧದಷ್ಟು ಮಂದಿ ವಯಸ್ಸಿನಲ್ಲಿ ನನಗಿಂತ ಹಿರಿಯರು ಅಥವಾ ನನ್ನದೇ ಸಮವಯಸ್ಕರು. ಅವರ ತರಗತಿಗೆ ಮೊದಲ ಬಾರಿ ಪ್ರವೇಶಿಸಿದಾಗ ಸಂಕೋಚ-ಮುಜುಗರದ ಜೊತೆಗೆ ಸಂತೋಷದ ಎಳೆ ಸುತ್ತಿಕೊಂಡಿತ್ತು. ಆದರೆ, ನನಗೆ ಈಗಲೂ ನೆನಪಿರುವುದು ಆ ತಂಡದ ವಿದ್ಯಾರ್ಥಿಗಳು ತೋರಿಸಿದ ಪ್ರೀತಿ ಮತ್ತು ಗೌರವ. ಹಿರಿಯ ಸ್ನೇಹಿತನ ಬಗೆಗಿನ ಪ್ರೀತಿ ಮತ್ತು ಪ್ರಕೃತದ ಅಧ್ಯಾಪಕನ ಬಗ್ಗೆ ಗೌರವ-ಸ್ನೇಹ ಮತ್ತು ಗೌರವಗಳು ಒಟ್ಟುಸೇರಿ ವಿಶ್ವಾಸದ ಭಾವನೆಯನ್ನು ಹೇಗೆ ಉಂಟುಮಾಡಬಹುದು ಎನ್ನುವುದನ್ನು ಆ ಹಿರಿಯ ವಿದ್ಯಾರ್ಥಿಗಳಿಂದ ನಾನು ಕಲಿತೆ.
ಎರಡನೆಯ ಎಂಎ ವಿದ್ಯಾರ್ಥಿಗಳಿಗೆ ದೇವರದಾಸಿಮಯ್ಯನ ವಚನಗಳನ್ನು ಪಾಠ ಮಾಡುವಾಗ ಆಗ ಉಪಲಬ್ಧ ಇದ್ದ ಪಠ್ಯ ಫ.ಗು. ಹಳಕಟ್ಟಿಯವರ ಸಂಪಾದನೆ. ನಾನು “ದೇವರದಾಸಿಮಯ್ಯನ ವಚನಗಳಲ್ಲಿ ಛಂದೋಲಯ’ ಎಂಬ ಪ್ರಬಂಧವನ್ನು ಎಂಎ ವಿದ್ಯಾರ್ಥಿಯಾಗಿ ಇರುವಾಗ ಬರೆದಿದ್ದ ಕಾರಣ, ಆ ವಚನಗಳನ್ನು ಪಾಠ ಮಾಡುವುದು ಕಷ್ಟ ಆಗಲಿಲ್ಲ. ಆದರೆ, ಪ್ರಾಚೀನ ಕನ್ನಡ ಕಾವ್ಯಗಳನ್ನು ಪಾಠ ಮಾಡುವ ಅಧ್ಯಾಪಕರಿಗೆ ಇದ್ದ/ಇರುವ ಮುಖ್ಯ ಸವಾಲು ಎಂದರೆ ತಾವು ಬಳಸುವ ಪಠ್ಯಗ್ರಂಥದಲ್ಲಿ ಸರಿಯಾದ ಪಾಠಗಳನ್ನು ಗುರುತಿಸಿ ನಿರ್ಧರಿಸಿಕೊಂಡು ಅರ್ಥಮಾಡಿಕೊಳ್ಳುವುದು. ಪಠ್ಯದ ಪಾಠಪರಿಷ್ಕರಣ ಸರಿಯಾಗಿ ಇಲ್ಲದಿದ್ದರೆ ಅಧ್ಯಾಪಕರು ಎಷ್ಟೇ ವಿದ್ವಾಂಸರಾಗಿದ್ದರೂ ಸರಿಯಾಗಿ ಅರ್ಥಗ್ರಹಣ ಸಾಧ್ಯವಾಗದೆ, ಸಮರ್ಪಕವಾಗಿ ಪಾಠಮಾಡಲು ಆಗುವುದಿಲ್ಲ. ಆದ್ದರಿಂದ, ಪ್ರಾಚೀನ ಕನ್ನಡ ಕಾವ್ಯಗಳನ್ನು ಪಾಠಮಾಡುವ ಅಧ್ಯಾಪಕರು ಒಳ್ಳೆಯ ಗ್ರಂಥಸಂಪಾದನಕಾರರೂ ಆಗಿರಬೇಕು.
“ಕನ್ನಡ ಸಾಹಿತ್ಯ ಚರಿತ್ರೆ’ ವಿಷಯವನ್ನು ನನ್ನ ಅಧ್ಯಾಪನದ ಆರಂಭದಲ್ಲೇ ಪಾಠಮಾಡಲು ಅವಕಾಶ ಸಿಕ್ಕಿದ್ದು ನನ್ನ ಸಾಹಿತ್ಯಬದುಕಿನಲ್ಲಿ ಬಹಳ ಪ್ರಯೋಜನವಾಯಿತು. “ಕನ್ನಡ ಸಾಹಿತ್ಯ ಚರಿತ್ರೆ’ ವಿಷಯವನ್ನು ಪಾಠ ಮಾಡಲಿಕ್ಕೆ 1970ರ ಕಾಲಕ್ಕೆ ಉಪಲಬ್ದವಿದ್ದ ಆಕರಗ್ರಂಥಗಳು: ರಂಶ್ರೀ ಮುಗಳಿ ಅವರ ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಕನ್ನಡ ಸಾಹಿತ್ಯ ಇತಿಹಾಸ; ತಸು ಶಾಮರಾಯರ ಕನ್ನಡ ಸಾಹಿತ್ಯ ಚರಿತ್ರೆ, ಎಂ. ಮರಿಯಪ್ಪ ಭಟ್ಟರ ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ; ಆರ್. ನರಸಿಂಹಾಚಾರ್ಯರ ಕರ್ಣಾಟಕ ಕವಿಚರಿತೆ (3 ಸಂಪುಟಗಳು); ಬಿಎಂಶ್ರೀ ಅವರ ಕನ್ನಡ ಕೈಪಿಡಿ ಸಂಪುಟ 2. ಈ ಎಲ್ಲ ಗ್ರಂಥಗಳನ್ನು ಪಡೆದುಕೊಂಡು ಕವಿಗಳ ಕಾಲ ದೇಶ ಕೃತಿಗಳ ಬಗ್ಗೆ ವಿಷಯಗಳನ್ನು ಕ್ರೋಢೀಕರಿಸುವಾಗ ಇನ್ನಷ್ಟು ವಿವರಗಳನ್ನು ಪಡೆಯಲು ಆಯಾ ಕವಿಗಳ ಮೂಲಕೃತಿಗಳನ್ನು ಓದಲು ಸುರುಮಾಡಿದೆ. ಇದರಿಂದಾಗಿ ಅನೇಕ ಪ್ರಸಿದ್ಧ ಮತ್ತು ಪ್ರಸಿದ್ಧರಲ್ಲದ ಕವಿಗಳ ಕೃತಿಗಳ ವ್ಯಾಪಕ ಅಧ್ಯಯನದ ಪ್ರಯೋಜನ ದೊರೆಯಿತು. ತರಗತಿಯ ಪಾಠಕ್ಕಿಂತ ಹೆಚ್ಚಾಗಿ ನನ್ನ ತಿಳುವಳಿಕೆಯನ್ನು ಹೆಚ್ಚಿಸಲು ಈ ವಿಷಯದ ಓದನ್ನು ಬಳಸಿಕೊಂಡೆ. ಈ ವಿಷಯವನ್ನು ಬೋಧಿಸಲು ತರಗತಿಗೆ ಹೋಗುವಾಗ ಎರಡು ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೆ: ಒಂದು, ಕವಿಗಳ ಕಾಲ, ದೇಶ, ವ್ಯಕ್ತಿ ವಿವರಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ, ಅವುಗಳನ್ನು ಕಾಗದದ ಹಾಳೆಗಳ 1/4 ಗಾತ್ರದ ಚೀಟಿಗಳಲ್ಲಿ ಬರೆದುಕೊಂಡು, ಅವನ್ನು ತರಗತಿಯಲ್ಲಿ ಇಟ್ಟುಕೊಂಡು ವಿವರಿಸುವುದು. ಇನ್ನೊಂದು, ಪ್ರಾಚೀನ ಕೃತಿಗಳ ಪಠ್ಯಗಳನ್ನು ತರಗತಿಗೆ ಕೊಂಡುಹೋಗಿ, ಅವುಗಳಿಂದ ಕಾವ್ಯದ ಮೂಲಭಾಗಗಳನ್ನು ಆಯ್ಕೆಮಾಡಿಕೊಂಡು ಉದ್ಧರಿಸಿ ವಿವರಿಸುವುದು. ಇದಕ್ಕಾಗಿ ತರಗತಿಗೆ ಹೋಗುವಾಗ ಎರಡೂ ಕೈಗಳಲ್ಲಿ ಕೆಲವೊಮ್ಮೆ ಎಂಟು-ಹತ್ತು ಪುಸ್ತಕಗಳನ್ನು ಹೊತ್ತುಕೊಂಡು ಹೋಗುತ್ತಿದ್ದೆ! ಇದನ್ನು ಕುರಿತು 1971-73 ತಂಡದ ನನ್ನ ವಿದ್ಯಾರ್ಥಿನಿ ವನಮಾಲಾ ಮಾಡಿದ ಸ್ವಾರಸ್ಯದ ಪ್ರತಿಕ್ರಿಯೆ ಈಗಲೂ ನೆನಪಿನಲ್ಲಿದೆ. ವರ್ಷದ ಕೊನೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅಧ್ಯಾಪಕರ ಬಗ್ಗೆ ಹೇಳುವಾಗ ವನಮಾಲಾ ಹೇಳಿದ್ದು: “ವಿವೇಕ ರೈ ಸರ್ ತರಗತಿಗೆ ಬರುವಾಗ ಎರಡೂ ಕೈಗಳಲ್ಲಿ ಪುಸ್ತಕಗಳ ಹೊರೆಯನ್ನು ಹೊತ್ತುಕೊಂಡು ಬರುವುದನ್ನು ಕಂಡು ನಮಗೆ ಅವರ ಬಗ್ಗೆ ಕನಿಕರವಾಗುತ್ತದೆ. ಅದಕ್ಕಾಗಿ ಅವರಿಗೆ ನಾವು ಒಂದು ಕೈಗಾಡಿಯನ್ನು ಉಡುಗೊರೆಯಾಗಿ ಕೊಡಬೇಕೆಂದು ಯೋಚಿಸುತ್ತಿದ್ದೇವೆ!’
ಮೊದಲ ಎಂಎಗೆ ಬಂದ 37 ವಿದ್ಯಾರ್ಥಿಗಳು ಎಲ್ಲರೂ ನನಗೆ ಹೊಸಬರು: 7 ಹುಡುಗಿಯರು ಮತ್ತು 30 ಹುಡುಗರು. ಮೈಸೂರು ವಿವಿಯ ಮಂಗಳೂರು ಸ್ನಾತಕೋತ್ತರ ಕೇಂದ್ರದಲ್ಲಿ ಅಧ್ಯಾಪಕನಾಗಿ ಸೇರಿದ್ದರಿಂದ ನನಗೆ ಅಖೀಲ ಕರ್ನಾಟಕ ವ್ಯಾಪ್ತಿಯ ವಿದ್ಯಾರ್ಥಿಗಳ ಜೊತೆಗೆ ನೇರ ಸಂಪರ್ಕ ದೊರೆತು ಅವರ ಭಾಷೆ ಮತ್ತು ಬದುಕಿನ ವೈಶಿಷ್ಟ್ಯಗಳನ್ನು ಕಲಿಯಲು ಅನುಕೂಲ ಆಯಿತು. ಆಗ ಮಂಗಳೂರು ಕೇಂದ್ರದ ಕನ್ನಡ ಎಂಎಗೆ ಹೆಚ್ಚಾಗಿ ಬರುತ್ತಿದ್ದ ವಿದ್ಯಾರ್ಥಿಗಳು ಮೈಸೂರು ವಿವಿ ವ್ಯಾಪ್ತಿಯ ಮೈಸೂರು, ಮಂಡ್ಯ, ಹಾಸನ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳವರು. ದಕ್ಷಿಣಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ಕೆಲವೊಮ್ಮೆ ಮೂರನೆಯ ಒಂದರಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು. ಕೊಡಗಿನಿಂದ ಒಬ್ಬಿಬ್ಬರು ವಿದ್ಯಾರ್ಥಿಗಳು ಬರುತ್ತಿದ್ದರು. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳಲ್ಲಿ ಅವರ ಪ್ರದೇಶದ ಮಣ್ಣಿನ ಗುಣವಿಶೇಷವಾಗಿ ಪ್ರಕಟವಾಗುತ್ತಿತ್ತು. ಮಂಡ್ಯ-ಹಾಸನ- ತುಮಕೂರು ವಿದ್ಯಾರ್ಥಿಗಳಲ್ಲಿ ಅಪ್ಪಟ ಕೃಷಿ ಮತ್ತು ಜಾನಪದದ ಸೊಗಡು, ಶಿವಮೊಗ್ಗದವರಲ್ಲಿ ಲೋಹಿಯಾ ಸಮಾಜವಾದದ ವೈಚಾರಿಕತೆ, ಚಿಕ್ಕಮಗಳೂರಿನವರಲ್ಲಿ ಮಲೆನಾಡಿನ ಬದುಕಿನ ಛಾಪು, ಚಿತ್ರದುರ್ಗದವರಲ್ಲಿ ಸಾಹಿತ್ಯ ಸಂಸ್ಕೃತಿ ಸಾಹಸಗಳ ಸಂಗಮ, ಮೈಸೂರಿನವರಲ್ಲಿ ಸಾಹಿತಿಗಳ ನೇರ ಸಂಪರ್ಕದ ಅನುಭವ, ದಕ್ಷಿಣಕನ್ನಡದವರಲ್ಲಿ ಯಕ್ಷಗಾನ ಮತ್ತು ಪಂಡಿತಪರಂಪರೆಯ ನೆಲೆಗಟ್ಟು: ಬಹುಸಂಸ್ಕೃತಿಯ ಈ ವಿದ್ಯಾರ್ಥಿಗಳ ಸಂಪರ್ಕದಿಂದ ತರುಣ ಅಧ್ಯಾಪಕನಾದ ನಾನು ಮಂಗಳೂರಿನಲ್ಲಿ ಇದ್ದುಕೊಂಡೇ ಕರ್ನಾಟಕವನ್ನು ನನ್ನೊಳಗೆ ಸೇರಿಸಿಕೊಂಡೆ. ನನ್ನ ಕನ್ನಡ ಭಾಷೆ ನನಗೆ ಗೊತ್ತಿಲ್ಲದೆಯೇ ಕವಿರಾಜಮಾರ್ಗಕಾರ ಹೇಳುವ “ಕನ್ನಡಂಗಳ್’ ನುಡಿಗಟ್ಟನ್ನು ನಿಜಮಾಡಿತು.
ಒಂದು ದಿನ ನಾವು ನಾಲ್ವರು ಅಧ್ಯಾಪಕರು ಒಟ್ಟಿಗೆ ಸೇರಿದ್ದಾಗ ಪ್ರೊಫೆಸರ್ ಎಸ್ವಿಪಿ ಒಂದು ಹೊಸ ಪ್ರಸ್ತಾವ ಮಾಡಿದರು: ನಾವು ನಾಲ್ವರು ಅಧ್ಯಾಪಕರು ಹಣ ಹಾಕಿಕೊಂಡು ಒಂದು ಪ್ರಕಾಶನ ಸಂಸ್ಥೆಯನ್ನು ಆರಂಭಿಸುವುದು, ಅದರ ಮೂಲಕ ಆರಂಭದಲ್ಲಿ ನಮ್ಮ ಪುಸ್ತಕಗಳನ್ನು ಪ್ರಕಟಿಸುವುದು. ನಾವು ಸಂತೋಷದಿಂದ ಸೈಗುಟ್ಟಿದೆವು. ಪ್ರತಿಯೊಬ್ಬರೂ ತಲಾ 250 ರೂಪಾಯಿ ವಂತಿಗೆ ಕೊಡುವುದೆಂದು ನಿರ್ಧಾರ ಆಯಿತು. ಮುಂದಿನ ಪ್ರಶ್ನೆ-ಪ್ರಕಾಶನದ ಹೆಸರು.
ಎಸ್ವಿಪಿ ಯೋಚಿಸಿ ಹೇಳಿದರು: “ನಾವು ನಾಲ್ವರು ಅಧ್ಯಾಪಕರ ಹೆಸರುಗಳ ಆರಂಭದ ಅಕ್ಷರಗಳನ್ನು ಸೇರಿಸಿ, ಹೊಸಪದವೊಂದನ್ನು ಸೃಷ್ಟಿಮಾಡೋಣ. ಪ (ಪರಮೇಶ್ವರ ಭಟ್ಟ), ಲ (ಲಕ್ಕಪ್ಪ ಗೌಡ), ಚಂ (ಚಂದ್ರಶೇಖರ ಐತಾಳ), ವಿ (ವಿವೇಕ ರೈ)- ಹೀಗೆ ನಾಲ್ಕು ಅಕ್ಷರ ಸೇರಿಸಿ “ಪಲಚಂವಿ ಪ್ರಕಾಶನ’ ಎಂದು ಹೆಸರು ಇಡೋಣ ಎಂದರು. ನಮಗಂತೂ ಪರಮಾನಂದ-ಹೊಸ ಪ್ರಕಾಶನ, ಹೊಸ ಹೆಸರು, ಹೆಸರಿನೊಳಗೆ ನಮ್ಮ ಹೆಸರು!
“ಪಲಚಂವಿ ಪ್ರಕಾಶನ’ದ ಮೊದಲನೆಯ ಪ್ರಕಟಣೆ: “ತ್ರಿಪದಿಯ ಚತುರ್ಮುಖ’ ಸಂಪಾದಕರು: ಎಸ್.ವಿ. ಪರಮೇಶ್ವರ ಭಟ್ಟ, 1970. ಇದರಲ್ಲಿ ನಮ್ಮ ನಾಲ್ಕು ಮಂದಿ ಅಧ್ಯಾಪಕರ ಒಂದೊಂದು ಲೇಖನ ಇದೆ. ನನ್ನ ಲೇಖನ: ವಚನಕಾರರು ಮತ್ತು ತ್ರಿಪದಿ. 1970ರಲ್ಲಿ ಇನ್ನು ಎರಡು ಪುಸ್ತಕಗಳು ಪ್ರಕಟವಾದುವು: ಹೊನ್ನಾರು (ಕಥಾಸಂಕಲನ): ಎಚ್.ಜೆ. ಲಕ್ಕಪ್ಪ ಗೌಡ. ಸಮಾರಾಧನ (ವಿಮಶಾìತ್ಮಕ ಪ್ರಬಂಧಗಳು): ಗುಂಡ್ಮಿ ಚಂದ್ರಶೇಖರ ಐತಾಳ. ಹೀಗೆ ಮೂರು ಪುಸ್ತಕಗಳು ಬಂದ ಹಾಗೆಲ್ಲ ಅನೇಕರು “ಪಲಚಂವಿ’ ಪದಕ್ಕೆ ಏನಾದರೂ ಅರ್ಥವಿದೆಯೇ ಎಂದು ಕೇಳಲು ತೊಡಗಿದರು. ನಮ್ಮಲ್ಲಿ ಉತ್ತರವಿರಲಿಲ್ಲ. ಕೊನೆಗೆ ನಮ್ಮ ಸಂಸ್ಕೃತ ಪ್ರಾಧ್ಯಾಪಕ ಮಂಜುನಾಥ ಭಟ್ಟರ ಮೊರೆಹೋದೆವು. ಅವರು ನಮಗೆ ತರಗತಿಯಲ್ಲಿ ಹೇಳುತ್ತಿದ್ದ ನೆನಪು- ಸಂಸ್ಕೃತದಲ್ಲಿ ಯಾವುದೇ ಶಬ್ದಕ್ಕಾದರೂ ನಿಷ್ಪತ್ತಿ ಹೇಳಲು ಸಾಧ್ಯ ಎಂದು. “ಪಲಚಂವಿ’ ಪದಕ್ಕೆ ಮಂಜುನಾಥ ಭಟ್ಟರು ಸಂಸ್ಕƒತದಲ್ಲಿ ಹೊಸ ಅರ್ಥವೊಂದನ್ನು ಶೋಧಿಸಿದರು. ಅವರು ಹೇಳಿದ್ದು: “ಪಲ’=ಮಾಂಸ. “ಚಂ’=ತಿನ್ನುವುದು.’ “ವಿ’=ವಿನಾ; ಹೊರತಾಗಿ. ಒಟ್ಟಿನಲ್ಲಿ “ಪಲಚಂವಿ’=”ಮಾಂಸವನ್ನು ತಿನ್ನದಿರುವುದು’. ನಮಗಂತೂ ಸಂತೋಷ ಮತ್ತು ಸಂತೃಪ್ತಿ. ನಾವು ನಾಲ್ಕು ಮಂದಿ ಅಧ್ಯಾಪಕರು ಒಟ್ಟಿಗೆ ತಿಂಡಿ ತಿನ್ನಲು ಹೋಗುತ್ತಿದ್ದದ್ದು “ಮೋಹಿನಿವಿಲಾಸ’ ಮತ್ತು “ವುಡ್‌ಲ್ಯಾಂಡ್ಸ್’ ಹೊಟೇಲ್‌ಗಳಿಗೆ !
(ಫೊಟೊ ಕೃಪೆ : ಶಾರದಾ ಶೆಟ್ಟಿ, ಮಂಗಳೂರು)
ಬಿ. ಎ. ವಿವೇಕ ರೈ