Advertisement
ಬಾಬು ಕೃಷ್ಣಮೂರ್ತಿ ಬಿಎಸ್ಸಿ ಆದಮೇಲೆ ವಿದ್ಯಾಭ್ಯಾಸ ಮುಂದುವರಿಸಲಿಲ್ಲ. ಮೆಡಿಕಲ್ ರೆಪ್ ಆಗುವ ಅವಕಾಶ ಬಂದಿತ್ತು. ಅದರ ಬದಲು ಅವರು ತಮ್ಮ ಓದಿನ ಬಲ, ದೇಶಭಕ್ತರನ್ನು ಸಾಹಿತ್ಯದ ಮೂಲಕ, ದೊಡ್ಡ ದೊಡ್ಡ ಕಾದಂಬರಿಗಳನ್ನು ಬರೆಯುವ ಮೂಲಕ ಕನ್ನಡದ ಓದುಗರಿಗೆ ಪರಿಚಯಿಸಲು ಮನಸ್ಸು ಮಾಡಿದರು. ಇದಕ್ಕೆ ಅವರಿಗೆ ಮಧ್ವರಾವ್ ಎಂಬ ಹಿರಿಯ ಹಿತೈಷಿಗಳ ನಿರಂತರ ಪ್ರೋತ್ಸಾಹವಿತ್ತು.
Related Articles
Advertisement
ಅವರು ಬಹಳ ತಿರುಗಾಟ ಮಾಡಿ ತಮ್ಮ ಕೃತಿಗಳನ್ನು ಬರೆದಿಲ್ಲ. ಆದರೆ ಅಜೇಯ ಮತ್ತು ಅದಮ್ಯದಂಥ ಉತ್ತರಭಾರತ ಮತ್ತು ಮರಾಠಿ ನೆಲೆಗಳಿಗೆ ಹೋಗಿ ಬಂದಿದ್ದಾರೆ. ಒಂದು ವಸ್ತು ಅಲ್ಲೇ ಇರುತ್ತದೆ, ಅದನ್ನು ಕಾಣುವವರು ಬಂದಾಗ ಅದು ಅವರ ಕಣ್ಣಿಗೆ ಬೀಳುತ್ತದೆ. ಉದಾಹರಣೆಗೆ ದೇಸಿ ಸಮಾಜವಿಜ್ಞಾನಿ ಧರ್ಮಪಾಲ್ ಇಂಗ್ಲೆಂಡಿನ ಗ್ರಂಥಾಲಯಗಳಲ್ಲಿ ದಶಕಗಳಗಟ್ಟಲೆ ಕುಳಿತು ತಪಸ್ಸು ಮಾಡಿದ್ದರಿಂದ, ಅವರಿಗೆ ಹತ್ತಾರು ಲೈಬ್ರರಿಗಳಲ್ಲಿ ಇರುವ 17, 18, 19ನೇ ಶತಮಾನದ ದಾಖಲೆಗಳನ್ನು ನೋಡಲು ಸಾಧ್ಯವಾಯಿತು. ಇನ್ನೂ ಮುಖ್ಯವಾದ ವಿಷಯವೆಂದರೆ, ಅವುಗಳ ನಡುವೆ ಇರುವ ಲಿಂಕ್ ಜೋಡಿಸಿ ಬ್ರಿಟಿಷರ ಕಣ್ಣಲ್ಲಿ ಭಾರತ ಹೇಗಿತ್ತು ಎಂಬುದನ್ನು ಸಮಗ್ರವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಾಯಿತು. ಕೃಷ್ಣಮೂರ್ತಿಯವರ ವಿಷಯದಲ್ಲೂ ಹೆಚ್ಚು ಕಮ್ಮಿ ಹೀಗೆ ಆಯಿತು. ಅಜೇಯ ಕಾದಂಬರಿಗಾಗಿ ಅವರು ಮಾಡಿರುವ ವಿಷಯ ಸಂಗ್ರಹಣೆಯ ಅಗಾಧತೆ, ವಿಪುಲತೆ ನೋಡಿದರೆ ಆಶ್ಚರ್ಯವಾಗುತ್ತದೆ. ದಕ್ಷಿಣಭಾರತದ, ಕರ್ನಾಟಕದ ಯುವ ಲೇಖಕರೊಬ್ಬರು ಕಾಶಿ ಮುಂತಾದ ಕಡೆಗಳಲ್ಲಿ ಸಂಚರಿಸಿ, ಅಲ್ಲಿ ದೊರೆತ ಮಾಹಿತಿಗಳನ್ನು ಕಲೆಹಾಕಿ ತಮ್ಮ ಕೃತಿಯೊಳಗೆ ಅದನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿರುವುದು ಸೋಜಿಗ ಹುಟ್ಟಿಸುತ್ತದೆ.
ರಷ್ಯನ್ ಭಾಷೆಯಲ್ಲಿ ತೊಲ್ಸ್‌ತಾಯ್ ಕುರಿತು ಬೃಹತ್ ಗ್ರಂಥವಿರದಿದ್ದಿದ್ದರೆ ಹೇಗಿರುತ್ತಿತ್ತು ಹಾಗೆ ಒಂದು ಪರಿಸ್ಥಿತಿ ಈಗಲೂ ಹಿಂದಿ ಸಾಹಿತ್ಯದಲ್ಲಿದೆ. ಅದೆಂದರೆ ಭಗತ್ ಸಿಂಗ್, ವಿಶ್ವನಾಥ ವೈಶಂಪಾಯನ, ಸುಖದೇವ್, ರಾಜಗುರು ಮುಂತಾದವರಿಗೆ ನಾಯಕನಾಗಿದ್ದ ಚಂದ್ರಶೇಖರ ಆಜಾದನ ಜೀವನ ಕುರಿತು 700-800 ಪುಟಗಳ ಉತ್ಕೃಷ್ಟ ಗ್ರಂಥ ಹಿಂದಿಯಲ್ಲಿ ಈವತ್ತಿಗೂ ಇಲ್ಲ. ಆದರೆ, ಕೃಷ್ಣಮೂರ್ತಿಯವರ ಅನ್ವೇಷಣೆಯ ಕಾರಣದಿಂದ ಕನ್ನಡದಲ್ಲಿ ಆಜಾದ್ ದೊರೆತ. ಸಾಂಸ್ಕತಿಕ ಫೆನಾಮಿನಾ ಏನು ಎಂಬುದಕ್ಕೆ ಇದೊಂದು ಉದಾಹರಣೆ. ಭಗತ್ ಸಿಂಗ್ ಪ್ರಸಿದ್ಧನಾದಷ್ಟು ಉತ್ತರಭಾರತದಲ್ಲಿ ಅಜಾದ್ ಬೇರೆ ಬೇರೆ ಕಾರಣಗಳಿಂದ ಎಷ್ಟು ಪ್ರಸಿದ್ಧನಾಗಬಹುದಿತ್ತೋ ಅಷ್ಟು ಪ್ರಸಿದ್ಧನಾಗಲಿಲ್ಲ. ಬಾಲಿವುಡ್‌ನ ಪ್ರಸಿದ್ಧ ನಟ, ನಿರ್ದೇಶಕ, ನಿರ್ಮಾಪಕ ಮನೋಜ್ ಕುಮಾರ್ ಒಮ್ಮೆ ಬಾಬು ಅವರನ್ನು ಉತ್ತರದಲ್ಲಿ ಭಗತ್‌ಸಿಂಗ್ ಮನೆಮಾತು. ಆಜಾದ್ ಅವನಷ್ಟು ಪ್ರಸಿದ್ಧನಲ್ಲ. ಕರ್ನಾಟಕದಲ್ಲಿ ಆಜಾದ್ ಇಷ್ಟು ಪ್ರಸಿದ್ಧ ಹೇಗಾದ? ಎಂದು ಪ್ರಶ್ನಿಸಿದ್ದುಂಟು. ಇದಕ್ಕೆ ಕಾರಣ ಬಾಬು ಅವರ ಅಜೇಯ ಕೃತಿ ಎಂಬುದರಲ್ಲಿ ಅನುಮಾನಗಳಿಲ್ಲ. ಆದರೆ ಕೃಷ್ಣಮೂರ್ತಿಯವರ ಜ್ಞಾನಾನ್ವೇಷಣೆ, ಕ್ರಾಂತಿಕಾರಿಗಳ ಜೀವನ ಅವರು ದೇಶಕ್ಕಾಗಿ ಪಟ್ಟ ಕಷ್ಟ, ಬಲಿದಾನದ ಮೇಲಿನ ಅಪಾರ ಗೌರವದ ಕಾರಣದಿಂದ ಝಾನ್ಸಿ ರಾಣಿ, ತಾತ್ಯಾ ಟೋಪಿ, ಕುವರಸಿಂಹ, ಆಜಾದ್, ಭಗತ್, ಫಡಕೆ, ಬಾಘಾ ಜತಿನ್, ಚಿದಂಬರ ಪಿಳೈ ಸುಬ್ರಹ್ಮಣ್ಯ ಭಾರತಿ, ಸಾವರ್ಕರ್ ಇವರ ಜೀವನದ ಚಿತ್ರಣ ಕನ್ನಡಿಗರಿಗೆ ದೊರೆತಿದೆ. ಕುವೆಂಪು ಇರದಿದ್ದರೆ ಮಲೆನಾಡಿನ ಅಪೂರ್ವ ಲೋಕ, ಅದರದ್ದೇ ಘನ ವ್ಯಕ್ತಿತ್ವ ಕನ್ನಡಕ್ಕೆ ಸಿಗುತ್ತಿರಲಿಲ್ಲ. ಬಾಬು ಅವರು ಬರೆಯದಿದ್ದರೆ ಈ ವಿಷಯವನ್ನು ಇಷ್ಟು ದೀರ್ಘವಾಗಿ ಬೇರೆಯವರು ಬರೆಯುತ್ತಿರಲಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಇನ್ನೊಂದು ವಿಷಯವೆಂದರೆ ಅವರು ಬಾಲ್ಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಗಳಿಗೆಗೆ ಸಾಕ್ಷಿಯಾದವರು. ಆಗಿನ ಮಲ್ಲೇಶ್ವರದಲ್ಲಿ ಎಲ್ಲೆಲ್ಲಿ ಆಗಸ್ಟ್ 15ರಂದು ಭಾರತದ ಧ್ವಜ ಹಾರುತ್ತಿತ್ತು ಎಂದು ಖಚಿತವಾಗಿ ಹೇಳಬಲ್ಲವರು!
ಜಿ. ಬಿ. ಹರೀಶ