ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ದೆಹಲಿಗೆ ತೆರಳಿದ್ದಾರೆ. ಅವರ ದಿಢೀರ್ ದೆಹಲಿ ಭೇಟಿ ರಾಜಕೀಯ ವಲಯದಲ್ಲಿ ಹಲವು ಊಹಾಪೋಹಗಳಿಗೆಕಾರಣವಾಗಿದೆ.
ಇತ್ತೀಚೆಗೆ ನಾಯಕತ್ವ ಬದಲಾವಣೆಯ ಕುರಿತು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವರದಿ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇದೇ ಬೆಳವಣಿಗೆಗಳ ಕುರಿತು ಸಿಎಂ ಯಡಿಯೂರಪ್ಪ ಅವರೇ ದೆಹಲಿಗೆ ತೆರಳಿ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚಿಸಲು ಮುಂದಾಗಿದ್ದರು ಎಂದು ಹೇಳಲಾಗಿತ್ತು.
ಇದನ್ನೂ ಓದಿ:ತಪ್ಪು ತಿದ್ದಿಕೊಳ್ಳದೇ ಇದ್ದರೆ ನಿಮ್ಮ ಹಡಗುಗಳ ಮೇಲೆ ಬಾಂಬ್ ಬೀಳುತ್ತದೆ: ಬ್ರಿಟನ್ ಗೆ ರಷ್ಯಾ
ಇದರ ನಡುವೆಯೇ ವಿಜಯೇಂದ್ರ ದೆಹಲಿಗೆ ದಿಢೀರ್ ತೆರಳಿರುವುದು ಹಲವು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ವಿಜಯೇಂದ್ರ ಖಾಸಗಿ ವಿಷಯದ ಮೇಲೆ ದೆಹಲಿಗೆ ತೆರಳಿರುವುದಾಗಿ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಿಎಂ ಭೇಟಿ ಮಾಡಿದ ಭೂಪೇಂದ್ರ ಯಾದವ್?: ಈ ನಡುವೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಅವರು ಬುಧವಾರ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ರೆಸಾರ್ಟ್‌ವೊಂದರಲ್ಲಿ ಭೇಟಿ ಮಾಡಿದ್ದಾರೆ. ಅಮಿತ್ ಶಾ ಅವರ ನಿರ್ದೇಶನದ ಮೇರೆಗೆ ಸಿಎಂರನ್ನು ಭೇಟಿ ಮಾಡಿ ಪ್ರಸಕ್ತ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.