ಬಣ್ಣದ ಲೋಕದಲ್ಲಿ ಕಪ್ಪು ಚುಕ್ಕೆಯಂತೆ ಇರುವ ಕಾಸ್ಟಿಂಗ್ ಕೌಚ್ ( ಲೈಂಗಿಕ ದೌರ್ಜನ್ಯ) ಬಗ್ಗೆ ಈಗಾಗಲೇ ಸಾಕಷ್ಟು ನಟಿಯರು ಹೇಳಿಕೊಂಡಿದ್ದಾರೆ. ಇದೀಗ ಬಿಟೌನ್ ಬೆಡಗಿ ನರ್ಗಿಸ್ ಫಖ್ರಿ ಅವರು ತಮಗಾದ ಕರಾಳ ಅನುಭವ ಮಾಧ್ಯಮಗಳ ಎದುರು ಹಂಚಿಕೊಂಡಿದ್ದಾರೆ.
ನರ್ಗಿಸ್ ಫಖ್ರಿ 2011ರಲ್ಲಿ ಬಿಡುಗಡೆಯಾದ ‘ರಾಕ್‌ಸ್ಟಾರ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ನರ್ಗಿಸ್ ಅವರಿಗೆ ಖ್ಯಾತಿ ತಂದುಕೊಟ್ಟ ಚಿತ್ರ. ಇದರಲ್ಲಿನ ಅಭಿನಯಕ್ಕಾಗಿ ಫಿಲಂ ಫೇರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ನಂತರ ಬಂದ ಮದ್ರಾಸ್ ಕೆಫೆ ಸಿನಿಮಾ ಕೂಡ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಸ್ಪೈ, ಹೌಸ್‌ಫುಲ್–3 ಸೇರಿದಂತೆ ಮೂರು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನರ್ಗಿಸ್ ನಂತರದ ದಿನಗಳಲ್ಲಿ ಸಿನಿಮಾಗಳಿಂದ ದೂರ ಉಳಿದರು.
ನಾನು ಸಿನಿಮಾದಿಂದ ದೂರ ಉಳಿಯಲು ಕಾರಣ ಏನು ಎಂಬುದನ್ನು ಸದ್ಯ ರಿವೀಲ್ ಮಾಡಿರುವ ಈ ನಟಿ, ಇದಕ್ಕೆಲ್ಲ ಕಾರಣ ಕಾಸ್ಟಿಂಗ್ ಕೌಚ್ ಎಂದಿದ್ದಾರೆ. ನಿರ್ದೇಶಕನೋರ್ವನ ಜೊತೆ ಮಂಚ ಏರಲು ನಾನು ನಿರಾಕರಿಸಿದೆ. ಅಲ್ಲಿಂದ ನನಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಕಡಿಮೆಯಾದವು. ಇದರಿಂದ ನಾನು ಕೆಲಸ ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ ನರ್ಗಿಸ್.
ನಾನು ನನ್ನ ಸುತ್ತಲು ಮೌಲ್ಯಗಳ ಚೌಕಟ್ಟು ಹಾಕಿಕೊಂಡು ಬದುಕುತ್ತಿದ್ದೇನೆ. ನಾನು ಫೇಮಸ್ ಆಗಬೇಕೆಂಬ ಕಾರಣಕ್ಕೆ ಮೌಲ್ಯಗಳನ್ನು ದಾಟುವುದಿಲ್ಲ. ಇದೆ ಕಾರಣಕ್ಕಾಗಿ ನಿರ್ದೇಶಕರ ಎದುರು ಬೆತ್ತಲೆಯಾಗಲು, ಅವರ ಜೊತೆ ಅಡ್ಜೆಸ್ಟ್ ಮಾಡಿಕೊಳ್ಳಲು ಒಪ್ಪಿಕೊಳ್ಳಲಿಲ್ಲ. ಹೀಗಾಗಿ ಸಿನಿಮಾಗಳ ಅವಕಾಶಗಳಿಂದ ವಂಚಿತಳಾದೆ ಎಂದಿದ್ದಾರೆ.
ನಾನು ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾಗೆ ಬಂದೇ, ಈ ಎರಡು ಕ್ಷೇತ್ರಗಳಲ್ಲೂ ಕಾಸ್ಟಿಂಗ್ ಕೌಚ್ ಜೀವಂತವಾಗಿದೆ. ಬೆತ್ತಲೆ ಅಥವಾ ಟಾಪ್‌ಲೆಸ್ ಆಗಿ ಫೋಟೊ ಶೂಟ್ ಮಾಡಿಸಿಕೊಳ್ಳಲು ನಿರ್ದೇಶಕರು ಹೇಳುತ್ತಿದ್ದರು. ಕೆಲವರಂತೂ ನೆರವಾಗಿಯೇ ಮಲಗಲು ಹೇಳುತ್ತಿದ್ದರು. ಇದಕ್ಕೆ ನಾನು ಒಪ್ಪದಿದ್ದಾಗ ಅವಕಾಶಗಳ ಕಡಿಮೆ ಆದವು. ಕೊನೆಗೆ ಈ ಉದ್ಯಮದಿಂದ ದೂರ ಉಳಿಯಬೇಕಾಯಿತು ಎಂದು ನರ್ಗಿಸ್ ಹೇಳಿದ್ದಾರೆ.