Advertisement
ಕೇರಳದ ಆಲಪ್ಪಿ ಜಿಲ್ಲೆಯ ಚೇರ್ತಲಾ ತಾಲೂಕಿನ ಪೆರುಂಬಲಂ ದ್ವೀಪದಲ್ಲಿ ಹುಟ್ಟಿದವರು ಈ ಅಮಚಡಿ ತೇವನ್. ಇವರು ಇಲ್ಲಿನ ಪುಲಯಾ ಸಮುದಾಯಕ್ಕೆ ಸೇರಿದವರು. ಅಸ್ಪೃಶ್ಯರಾದ ಈ ಸಮುದಾಯದ ಬದುಕು ಆ ದಿನಗಳಲ್ಲಿ ಅತ್ಯಂತ ಶೋಚನೀಯವಾಗಿತ್ತು. ಆದರೆ ಇತರ ಪುಲಯ ಮಕ್ಕಳಿಗಿಂತ ಭಿನ್ನವಾಗಿ, ಅವರು ಕ್ರಾಂತಿಕಾರಿ ಮಹಿಳೆ ಅಚ್ಚುಕುಟ್ಟಿ ಅಮ್ಮನ ಸಹಾಯದಿಂದ ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ಭಾಗ್ಯ ಪಡೆದರು.
Related Articles
Advertisement
ಪ್ರಬಲ ಕಾಂಗ್ರೆಸ್ಸಿಗರಾಗಿ, ತೇವನ್ ಅವರು ವೈಕ್ಕಂ ಸತ್ಯಾಗ್ರಹವನ್ನು ಸೇರಿದರು. ಸತ್ಯಾಗ್ರಹದ ಸಮಯದಲ್ಲಿ ಕೆ.ಪಿ.ಕೇಶವ ಮೆನನ್ ಮತ್ತು ಟಿ.ಕೆ.ಮಾಧವನ್ ಅವರು ತೇವನ್ ಅವರನ್ನು ಬೆಂಬಲಿಸಿದರು. ಅಲ್ಲದೆ ಗಾಂಧೀಜಿಯನ್ನು ಭೇಟಿಯಾಗಲು ತೇವನ್ ಗೆ ಸಹಾಯ ಮಾಡಿದವರು ಕೆ.ಪಿ.ಕೇಶವ ಮೆನನ್. ಕೆಳವರ್ಗದ ಜನರಲ್ಲಿ ಮದ್ಯ ವ್ಯಸನದ ವಿರುದ್ಧ ಪ್ರಚಾರ ಮಾಡಬೇಕು ಎಂದು ಗಾಂಧೀಜಿ ತೇವನ್ ಗೆ ಸಲಹೆ ನೀಡಿದ್ದರು. ಅಲ್ಲದೆ ಈ ಕೆಳ ಜಾತಿ ಜನರು ಎಲೆಗಳು ಮತ್ತು ಕಲ್ಲುಗಳಿಂದ ಮಾಡಿದ ಆಭರಣಗಳನ್ನು ಧರಿಸುವುದನ್ನು ಬಿಡುವಂತೆ ಮಾಡಬೇಕು ಎಂದು ತೇವನ್ ಗೆ ಗಾಂಧೀಜಿ ಸೂಚಿಸಿದ್ದರು.
ವೈಕ್ಕಂ ಸತ್ಯಾಗ್ರಹದ ಸಮಯದಲ್ಲಿ ಅಮಚಡಿ ತೇವನ್ ಮೇಲೆ ಉನ್ನತ ಜಾತಿಯ ಹಲವರು ದಾಳಿ ಮಾಡಿದ್ದರು. ಈ ವೇಳೆ ತೇವನ್ ಅವರ ಕಣ್ಣುಗಳಿಗೆ ಸುಣ್ಣದ ದ್ರಾವಣವನ್ನು ಸುರಿದು, ಚಿತ್ರಹಿಂಸೆ ನೀಡಿದ್ದರು. ಇದರಿಂದ ಅವರು ಬಹುತೇಕ ಕುರುಡರಾಗಿದ್ದರು. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕೆ.ಪಿ.ಕೇಶವ ಮೆನನ್, ಗಾಂಧೀಜಿಯವರು ತೇವನ್ ಗೆ ಔಷಧಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿದರು. ಇದು ತೇವನ್ ಅವರಿಗೆ ದೃಷ್ಟಿ ಮರಳಿ ಪಡೆಯಲು ನೆರವಾಯಿತು.
ವೈಕ್ಕಂ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಕಾರಣಕ್ಕೆ ಅಮಚಡಿ ತೇವನ್ ಮತ್ತು ಇತರ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಚಿತ್ರಹಿಂಸೆ ನೀಡಿದರು. 1925 ರಲ್ಲಿ ಅಮಚಡಿ ತೇವನ್ ಜೈಲಿನಿಂದ ಬಿಡುಗಡೆ ಹೊಂದಿ ಊರಿಗೆ ಮರಳಿದಾಗ, ಅವರ ಮನೆಯನ್ನು ಧ್ವಂಸ ಮಾಡಲಾಗಿತ್ತು. ಮೇಲ್ಜಾತಿಯವರು ಈ ರೀತಿ ತಮ್ಮ ಆಕ್ರೋಶ ಹೊರಹಾಕಿದ್ದರು. ಆದರೆ ಟಿ.ಕೆ ಮಾಧವನ್ ಅವರ ಸಹಾಯದಿಂದ ಅದೇ ದ್ವೀಪದಲ್ಲಿ ತೇವನ್ ಅವರಿಗೆ ಒಂದು ಎಕರೆ ಜಮೀನು ಸಿಕ್ಕಿತು.
ಕೊನೆಯವರೆಗೂ ಸಮಾಜಕ್ಕಾಗಿ, ದೇಶಕ್ಕಾಗಿ ಹೋರಾಡಿದ ಅಮಚಡಿ ತೇವನ್ ಅವರ ನೆನಪಿಗಾಗಿ ಅಮಚಡಿ ತುರುತ್ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ.