Advertisement

Ayodhya ಶ್ರೀರಾಮನ ಪ್ರಾಣಪ್ರತಿಷ್ಠೆ: ವಿದೇಶಗಳಲ್ಲೂ ಕಳೆಗಟ್ಟಿದ ಸಂಭ್ರಮ

12:22 AM Jan 21, 2024 | Team Udayavani |

ಹೊಸದಿಲ್ಲಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಹೊಸದಾಗಿ ನಿರ್ಮಾಣ ಗೊಂಡಿರುವ ಬೃಹತ್‌ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮಲಲ್ಲಾನ ವಿಗ್ರಹದ ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭಗೊಂಡಿರುವಂತೆಯೇ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಸಂಭ್ರಮ ಮನೆ ಮಾಡಿದೆ. ವಿಶ್ವದ ವಿವಿಧೆಡೆಗಳಲ್ಲಿ ನೆಲೆಸಿರುವ ಹಿಂದೂ ಸಮುದಾಯ ದವರು ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದು, ಈ ಸಂಭ್ರಮವನ್ನಾಚರಿಸಲು ಸನ್ನದ್ಧರಾಗಿದ್ದಾರೆ.

Advertisement

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರವು ಜಾಗತಿಕವಾಗಿ ಧಾರ್ಮಿಕ ಸಂಪ್ರದಾಯವನ್ನು ಸಾಕಾರಗೊಳಿಸುವಲ್ಲಿ ಮತ್ತು ಹಿಂದೂ ಮತ್ತು ಭಾರತೀಯ ನಾಗರಿಕತೆಯ ಸಂಕೇತವಾಗಿದೆ. ಈ ನೂತನ ಮಂದಿರದಲ್ಲಿ ಶ್ರೀರಾಮಲಲ್ಲಾ ವಿಗ್ರಹದ ಪ್ರಾಣಪ್ರತಿಷ್ಠೆಯು ಒಂದು ಐತಿಹಾಸಿಕ ಕ್ಷಣವಾಗಿದ್ದು, ಅಸಂಖ್ಯಾತ ಭಕ್ತರು ಕಳೆದ 5 ಶತಮಾನಗಳಿಂದ ನಿರಂತರವಾಗಿ ನಡೆಸುತ್ತ ಬಂದ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಬ್ರಿಟನ್‌ನ 200ಕ್ಕೂ ಅಧಿಕ ಹಿಂದೂ ಸಂಘಟನೆಗಳು ಜಂಟಿಯಾಗಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿವೆ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನಡೆಯಲಿರುವ ದಿನದಂದು ಬ್ರಿಟನ್‌ನಲ್ಲಿರುವ ಪ್ರತಿಯೊಂದು ಹಿಂದೂ ಕುಟುಂಬವು ತಮ್ಮ ಮನೆಯಲ್ಲಿ ದೀಪಾವಳಿ ಸಂಭ್ರಮವನ್ನಾಚರಿಸಲಿದೆ. ಶ್ರೀ ರಾಮ ಮಂದಿರವು ಪ್ರಪಂಚದಾದ್ಯಂತ ರಾಮರಾಜ್ಯದ ಸಿದ್ಧಾಂತಗಳನ್ನು ಪ್ರತಿಧ್ವನಿಸುವ ಜತೆಯಲ್ಲಿ ಭರವಸೆ, ಶಾಂತಿಯುತ ಸಹಜೀವನದ ಹೊಂಬೆಳಕಾಗಲಿ ಎಂದು ಹೇಳಿಕೆಯಲ್ಲಿ ಹಾರೈಸಲಾಗಿದೆ.

ಅಮೆರಿಕದಲ್ಲಿನ ಸಣ್ಣಪುಟ್ಟ ಮಂದಿರಗಳ ಸಹಿತ ಸುಮಾರು 1,000 ದೇವಾಲಯಗಳಲ್ಲಿ ಅಯೋಧ್ಯಾ ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ವಿಶೇಷ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದ್ದು, ವಿವಿಧೆಡೆಗಳಲ್ಲಿ ಜ. 22ರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ನ್ಯೂಯಾರ್ಕ್‌, ಟೆಕ್ಸಾಸ್‌, ಹ್ಯೂಸ್ಟನ್‌, ಮೇರಿಲ್ಯಾಂಡ್‌, ವಾಷಿಂಗ್ಟನ್‌ ಡಿಸಿ, ಕ್ಯಾಲಿಫೋರ್ನಿಯಾ, ಸ್ಯಾನ್‌ಫ್ರಾನ್ಸಿಸ್ಕೋ, ಚಿಕಾಗೋ, ಲಾಸ್‌ ಏಂಜಲೀಸ್‌, ಇಲಿನಾಯಿಸ್‌, ನ್ಯೂಜೆರ್ಸಿ, ಜಾರ್ಜಿಯಾ ಸಹಿತ ದೇಶದ ವಿವಿಧ ನಗರಗಳಲ್ಲಿ ಸಂಭ್ರಮ ಮನೆಮಾಡಿದೆ.

ಯುರೋಪಿಯನ್‌ ರಾಷ್ಟ್ರಗಳಲ್ಲೂ ಸಂಭ್ರಮ
ಶ್ರೀರಾಮಲಲ್ಲಾ ನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ ದಿನವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಯುರೋಪಿಯನ್‌ ರಾಷ್ಟ್ರಗಳು ಮತ್ತು ಕೆನಡಾದಲ್ಲಿನ ಹಿಂದೂ ಸಮುದಾಯ ದವರು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ವಿಶ್ವದ ವಿವಿಧೆಡೆಗಳಲ್ಲಿನ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಶ್ರೀರಾಮ ಭಕ್ತರು ಭಜನೆ, ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸುವ ಮೂಲಕ ಪ್ರಾರ್ಥನೆ ಸಲ್ಲಿಸತೊಡಗಿದ್ದಾರೆ.

Advertisement

ಫ್ರಾನ್ಸ್‌ನ ಪ್ಯಾರಿಸ್‌ ಸಹಿತ ದೇಶದ ಹಲವೆಡೆ ಹಿಂದೂ ಬಾಂಧವರು ಜ.22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದಾರೆ. ಬೆಲ್ಜಿಯಂ, ನಾರ್ವೆ, ಪೋಲಂಡ್‌ನ‌ ಹಿಂದೂ ದೇಗುಲಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದ್ದು. ಜ. 22ರ ಕಾರ್ಯಕ್ರಮದ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸ್ವಿಟ್ಸರ್ಲೆಂಡ್‌, ಜರ್ಮನಿ, ನೆದರ್‌ಲ್ಯಾಂಡ್ಸ್‌, ಕೆನಡಾ, ಆಸ್ಟ್ರೇಲಿಯಾ, ಆಫ್ರಿಕನ್‌ ದೇಶಗಳು, ನೇಪಾಲ, ಇಂಡೋನೇಷ್ಯಾ, ಸಿಂಗಾಪುರ, ಮಾರಿಷಸ್‌, ಸಿಂಗಾಪುರ, ಥೈಲ್ಯಾಂಡ್‌ಗಳಲ್ಲೂ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾನ ಪ್ರಾಣಪ್ರತಿಷ್ಠೆ ನಡೆಯಲಿರುವ ಸಂದರ್ಭದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ದೀಪಾವಳಿ ಮಾದರಿಯಲ್ಲಿ ದೀಪಗಳನ್ನು ಬೆಳಗಿ ಶ್ರೀರಾಮನ ಆರಾಧನೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಸೀದಾ ಓದಿದರೆ ರಾಮಕಥಾ; ಉಲ್ಟಾ ಓದಿದರೆ ಕೃಷ್ಣ ಕಥಾ

1650ರ ಹೊತ್ತಿಗೆ ತಮಿಳುನಾಡಿನ ಕಂಚಿಯಲ್ಲಿ ವೇಂಕಟಾಧ್ವರಿನ್‌ ಎಂಬ ಕವಿ ಶ್ರೀರಾಘವ ಯಾದವೀಯಮ್‌ ಎಂಬ ಸಂಸ್ಕೃತ ಪದ್ಯ ಬರೆದರು. ಬರೀ 30 ಚರಣಗಳಿರುವ ಇದು, ಶ್ರೀರಾಮ ಮತ್ತು ಶ್ರೀಕೃಷ್ಣನ ಚರಿತ್ರೆಯನ್ನು ವಿಶೇಷ ರೀತಿಯಲ್ಲಿ ವರ್ಣಿಸುತ್ತದೆ. ಪದ್ಯದ ಸಾಲುಗಳನ್ನು ಆರಂಭದಿಂದ ಓದಿಕೊಂಡರೆ ಅಲ್ಲಿ ರಾಮನ ಕಥೆಯಿದೆ. ಎರಡು ಸಾಲುಗಳಿರುವ ಚರಣದ ಕೊನೆಯಿಂದ ಉಲ್ಟಾಕ್ರಮದಲ್ಲಿ ಅಕ್ಷರಗಳನ್ನು ಓದಿದರೆ, ಅಲ್ಲಿ ಶ್ರೀಕೃಷ್ಣನ ಕಥೆಯಿದೆ! ಇಲ್ಲಿ ರಾಮನ ಜನ್ಮಸ್ಥಾನ ಅಯೋಧ್ಯೆಯನ್ನು ಸಾಕೇತ ನಗರಿ ಎನ್ನಲಾಗಿದೆ. ಕೃಷ್ಣ ಆಳಿದ ದ್ವಾರಕಾ ನಗರಿಯನ್ನೂ ಪ್ರಸ್ತಾವಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next