Advertisement

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

05:51 PM Nov 16, 2024 | Team Udayavani |

ರಾಂಚಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ, ಆದರೆ ಬಿಜೆಪಿ ಮಾತ್ರ ತನ್ನ ಭರವಸೆಗಳನ್ನು ಪೂರೈಸುತ್ತದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Advertisement

ದಿಯೋಘರ್ ಜಿಲ್ಲೆಯ ಮಧುಪುರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ‘ಜಾರ್ಖಂಡ್ ಚುನಾವಣೆ ಶಾಸಕರು, ಮುಖ್ಯಮಂತ್ರಿ ಅಥವಾ ಸರ್ಕಾರವನ್ನು ಬದಲಾಯಿಸಲು ಅಲ್ಲ, ಆದರೆ ಯುವಕರು ಮತ್ತು ಬಡವರ ಭವಿಷ್ಯವನ್ನು ರೂಪಿಸಲು ಮತ್ತು ಭ್ರಷ್ಟಾಚಾರವನ್ನು ತಡೆಯಲು’ ಎಂದರು.

“ನುಸುಳುಕೋರರು ಉದ್ಯೋಗಗಳನ್ನು ಕಸಿದುಕೊಳ್ಳುವ ಮತ್ತು ಅಪರಾಧವನ್ನು ಉತ್ತೇಜಿಸುವ ಮೂಲಕ ಬುಡಕಟ್ಟು ಜನಾಂಗದವರಿಗೆ ಮಾತ್ರವಲ್ಲದೆ ರಾಜ್ಯದ ಯುವಕರಿಗೂ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ನುಸುಳುಕೋರರನ್ನು ಗುರುತಿಸಿ ಗಡಿಪಾರು ಮಾಡುವಂತೆ ಜಾರ್ಖಂಡ್ ಹೈಕೋರ್ಟ್ ಸೂಚಿಸಿತ್ತು. ಕೇಂದ್ರ ಒಪ್ಪಿಗೆ ನೀಡಿದ್ದರೂ ರಾಜ್ಯದ ಹೇಮಂತ್‌ ಸೊರೇನ್‌ ಸರಕಾರ ಒಪ್ಪಲಿಲ್ಲ”ಎಂದು ಶಾ ಆರೋಪಿಸಿದರು.

‘ಯುಪಿಎ ಆಡಳಿತದಲ್ಲಿ ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಿದ್ದು ಮಾತ್ರವಲ್ಲದೆ ಜನರನ್ನು ಕೊಂದು ಬಿರಿಯಾನಿ ಸವಿಯುತ್ತಿದ್ದರು. ಮತ್ತೊಂದೆಡೆ, ಪ್ರಧಾನಿ ಮೋದಿ ಅವರು ಸರ್ಜಿಕಲ್ ಮತ್ತು ವೈಮಾನಿಕ ದಾಳಿಯ ಮೂಲಕ ಭಯೋತ್ಪಾದಕರನ್ನು ನಾಶಪಡಿಸಿದರು’ ಎಂದರು.

ಹಿಂಬಾಗಿಲ ಮೂಲಕ ಮುಸ್ಲಿಮರಿಗೆ ಮೀಸಲಾತಿ

Advertisement

ದುಮ್ಕಾದಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ ‘ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಕಾಂಗ್ರೆಸ್ ನೆರವಿನೊಂದಿಗೆ ಹಿಂಬಾಗಿಲ ಮೂಲಕ ಮುಸ್ಲಿಮರಿಗೆ ಮೀಸಲಾತಿ ನೀಡಲು ಪಿತೂರಿ ನಡೆಸುತ್ತಿದ್ದಾರೆ. ಅಂತಹ ಯಾವುದೇ ಪ್ರಯತ್ನವನ್ನು ಬಿಜೆಪಿ ವಿಫಲಗೊಳಿಸುತ್ತದೆ’ ಎಂದು ಶಾ ವಾಗ್ದಾಳಿ ನಡೆಸಿದರು.

ಕ್ಷೀಣಿಸುತ್ತಿರುವ ಬುಡಕಟ್ಟು ಜನಸಂಖ್ಯೆಗೆ ಸೊರೇನ್ ಜವಾಬ್ದಾರರು ಎಂದು ಕಿಡಿ ಕಾರಿದರು. ‘ಡಿಸೆಂಬರ್ 2027 ರ ಮೊದಲು ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ’ ಎಂದು ಶಾ ಪ್ರತಿಪಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next