Advertisement
ಜನಸಾಗರವೇ ಸೇರಿದ್ದ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಪಿಎಂ ರೋಡ್ ಶೋ ನಡೆಸಿದ್ದು, ಸಿಎಂ ಯೋಗಿ ಆದಿತ್ಯನಾಥ ಕೂಡ ಸಾಥ್ ನೀಡಿದ್ದಾರೆ. ಫೈಜಾಬಾದ್‌ನ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಲಲ್ಲು ಸಿಂಗ್ ಪರವಾಗಿ ಮೋದಿ ಮತಯಾಚಿಸಿದ್ದು, ಜನರು ಪ್ರಧಾನಿ ಮೇಲೆ ಪುಷ್ಪವೃಷ್ಟಿಗರೆದಿದ್ದಾರೆ. ಸುಗ್ರೀವಾ ಫೋರ್ಟ್ ನಿಂದ ಲತಾ ಮಂಗೇಶ್ಕರ್ ಚೌಕ್ ವರೆಗೆ 2 ಕಿ.ಮೀ. ದೂರದವರೆಗೆ ರೋಡ್ ಶೋ ನಡೆದಿದೆ. ಇದರಲ್ಲಿ ಭಾಗಿಯಾಗಿದ್ದ ಜನರಿಗೆ ಪ್ರಧಾನಿ ಎಕ್ಸ್ ನಲ್ಲಿ ಧನ್ಯವಾದ ತಿಳಿಸಿದ್ದು, “ಅಯೋಧ್ಯಾ ಜನರ ಹೃದಯ ಶ್ರೀರಾಮನಷ್ಟೇ ವಿಶಾಲವಾದುದು. ನಮ್ಮನ್ನು ಬೆಂಬಲಿಸಲು ನೆರೆದಿರುವ ಎಲ್ಲರಿಗೂ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ. 3ನೇ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರವೂ ರವಿವಾರ ಅಂತ್ಯಗೊಂಡಿದೆ.
ಐತಿಹಾಸಿಕ ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆ ನೆರವೇರಿಸಿದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಬಾಲಕರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ರಾಮನ ಪಾದಕ್ಕೆ ಪುಷ್ಪಗಳನ್ನು ಅರ್ಪಿಸಿ, ದೀರ್ಘದಂಡ ನಮಸ್ಕಾರ ಮಾಡಿ, ಬಾಲಕರಾಮನ ಆಶೀರ್ವಾದ ಕೋರಿದ್ದಾರೆ. ಪ್ರಧಾನಿ ಆಗಮನಕ್ಕೆ ಮಂದಿರವನ್ನು ಸಂಪೂರ್ಣವಾಗಿ ಸಿಂಗರಿಸಲಾಗಿತ್ತು. ಮಂದಿರದ ಆವರಣದಲ್ಲಿ ಪ್ರಧಾನಿ ಅವರನ್ನು ಕಂಡ ಭಕ್ತರು ಪುಳಕಿತರಾಗಿದ್ದಾರೆ.
Related Articles
ಮೋದಿ ಆಗಮನಕ್ಕೆ ಸ್ವಾಗತ ಕೋರಲು ರವಿವಾರ ಇಡೀ ಅಯೋಧ್ಯಾನಗರಿ ಸಜ್ಜು ಗೊಂಡಿತ್ತು. ಎಲ್ಲೆಡೆ ಪುಷ್ಪಾಲಂಕಾರ ಮತ್ತು ದೀಪಾಲಂಕಾರಗಳನ್ನು ಮಾಡಲಾಗಿತ್ತು. ಸಿಎಂ ಯೋಗಿ ಮತ್ತು ಮೋದಿ ಅವರ ಕಟೌಟ್‌ಗಳು ನಗರದ ಎಲ್ಲೆಡೆ ರಾರಾಜಿಸಿದವು. ಮಂದಿರದ ಉದ್ಘಾಟನೆ ಸಂದರ್ಭದಲ್ಲಿ ಅಯೋಧ್ಯೆ ಸಜ್ಜುಗೊಂಡಿದ್ದ ಮಾದರಿಯಲ್ಲೇ ರಸ್ತೆ ಬದಿಯಲ್ಲಿ ಸಂಪೂರ್ಣ ಕೇಸರಿ ಬಾವುಟಗಳು, ಹೂವುಗಳಿಂದ ಅಲಂಕರಿಸಲಾಗಿತ್ತು. ರೋಡ್ ಶೋ ನಡೆಯುವ 2 ಕಿ.ಮೀ. ಮಾರ್ಗದ ಉದ್ದಕ್ಕೂ ಜನರು ಪ್ರಧಾನಿಯನ್ನು ಸ್ವಾಗತಿಸಲು ಕಿಕ್ಕಿರಿದು ನಿಂತಿದ್ದರು. ನಗರದಾದ್ಯಂತ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿತ್ತು.
Advertisement