Advertisement

ಹಬ್ಬದ ಸಡಗರದಲ್ಲಿದ್ದ ಅಯೋಧ್ಯೆ ನಿನ್ನೆ ರಾತ್ರಿ ನಿದ್ರಿಸಲೇ ಇಲ್ಲ

11:53 AM Sep 10, 2020 | Karthik A |

ಅಯೋಧ್ಯೆ: ಇಂದು ಭೂಮಿ ಪೂಜೆಗೊಂಡಿರುವ ಅಯೋಧ್ಯೆಯಲ್ಲಿ ಹಬ್ಬದ ವಾತಾವರಣ.

Advertisement

ಮದುಮಗಳಂತೆ ಶೃಂಗಾರಗೊಂಡಿರುವ ನಗರದಲ್ಲಿ ಸಂಭ್ರಮ ಮೇಳೈಸಿದೆ.

ನಗರವನ್ನು ಮತ್ತು ಸರಾಯು ನದಿಯ ತಟವನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಮನೆ ಮನೆಗಳಲ್ಲಿ ಭಜನೆಗಳು, ರಾಮ, ಹನುಮ ಸಂಕೀರ್ತನೆಗಳು ಅನುರಣಿಸುತ್ತಿವೆ.

ಮಂಗಳವಾರ ರಾತ್ರಿ ಇಡೀ ಅಯೋಧ್ಯೆಯ ಪ್ರಜೆಗಳು ನಿದ್ರಿಸಲೇ ಇಲ್ಲ. ಬುಧವಾರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುವ ಹಿನ್ನೆಲೆಯಲ್ಲಿ ನಗರವನ್ನು ಸುಂದರವಾದ ಕಲಾಕೃತಿಗಳು ಮತ್ತು ಹೂವುಗಳಿಂದ ಶೃಂಗಾರಗೊಳಿಸಲಾಗಿದೆ.

ಬುಧವಾರ ಬೆಳಗ್ಗೆ 4 ಗಂಟೆಯಿಂದ ಅಯೋಧ್ಯೆಯಲ್ಲಿ ತುಸು ಮಳೆಯಾಗುತ್ತಿತ್ತು. ಇದರ ಹೊರತಾಗಿಯೂ ಅಲಂಕಾರ ಕಾರ್ಯವು ಭರದಿಂದ ಸಾಗಿತ್ತು. ನಗರವನ್ನು ಶುಚಿಗೊಳಿಸಲಾಗಿದ್ದು, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಸ್ಥಳೀಯ ಮಹಾನಗರ ಪಾಲಿಕೆಯ 125ಕ್ಕೂ ಹೆಚ್ಚು ಉದ್ಯೋಗಿಗಳು ನಗರದ ಅಲಂಕಾರಕ್ಕೆ ತೊಡಗಿಸಿಕೊಂಡಿದ್ದಾರೆ. ಇವರ ಜತೆ ವಿವಿಧ ಸಂಘ-ಸಂಸ್ಥೆಗಳ ನೂರಾರು ಜನರು ಭಾಗವಹಿಸಿದ್ದು, ಸುಮಾರು 500 ಕ್ವಿಂಟಾಲ್‌ ಹೂವುಗಳನ್ನು ಬಳಸಲಾಗಿದೆ.

Advertisement

ದೇವಾಲಯದಲ್ಲಿ ಮತ್ತು ಮನೆಗಳಲ್ಲಿ ರಾತ್ರಿಯೂ ಭಜನಾ ಕೀರ್ತನೆ ಮುಂದುವರೆದಿತ್ತು. ಅದನ್ನು ಪೂರೈಸಿ ಜನರು ಬೆಳಿಗ್ಗಿನ ಪೂಜೆಗೆ ಸಿದ್ಧಗೊಂಡಿದ್ದಾರೆ. ಆದರೆ ಇಲ್ಲಿನ ಪ್ರಜೆಗಳಿಗೆ ಪೂಜೆಯನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಮಾಡಿಕೊಡಲಾಗಿಲ್ಲ. ಕೊರೊನಾ ಕಾರಣದಿಂದ ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ನಗರವನ್ನು ಸಂದರ್ಶಿಸುತ್ತಿರುವವರನ್ನು ತಡೆಯಲಾಗುತ್ತದೆ. ಪಾಸ್‌ ಇದ್ದವರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಹನುಮಾನ್‌ ಗಢಿ ಒಳಗೆ ಕರ್ತವ್ಯ ನಿರ್ವಹಿಸುವವರಿಗೆ ಐಡಿ ಕಾರ್ಡ್‌ ನೀಡಲಾಗಿದ್ದು, ಅವರು ಮಾತ್ರ ಒಳ ಪ್ರವೇಶಿಸಬಹುದಾಗಿದೆ.  ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿದ್ದು, ಕೊರೊನಾ ನೆಗೆಟಿವ್‌ ಇದ್ದವರಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಸೋಮವಾರದಿಂದ ಆರಂಭವಾದ ಅಯೋಧ್ಯೆಯ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಿದ ಬಳಿಕ ಪೂರ್ಣಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next