ಅಯೋಧ್ಯೆ/ಉಡುಪಿ: ನೂತನ ಭವ್ಯ ಮಂದಿರದಲ್ಲಿ ರಾಮಲಲ್ಲಾನ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಲಿರುವ 48 ದಿನಗಳ ಮಂಡಲೋತ್ಸವ ಮಂಗಳವಾರದಿಂದ ಆರಂಭಗೊಂಡಿದೆ.
ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ, ಚಾಮರಸೇವೆ ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು.
ಇದಕ್ಕೂ ಮೊದಲು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ , ವಿಷ್ಣುಮೂರ್ತಿ ಆಚಾರ್ಯ , ಶಶಾಂಖ ಭಟ್ ಲಕ್ಷ್ಮೀನಾರಾಯಣ ಭಟ್ ಮೊದಲಾದವರ ನೇತೃತ್ವದಲ್ಲಿ ವಿವಿಧ ಹೋಮ ಹವನಾದಿಗಳು ಕಲಶಾರಾಧನೆ ಇತ್ಯಾದಿಗಳು ನೆರವೇರಿದವು.
ಭಕ್ತ ಸಾಗರ
ಮಂಗಳವಾರ ಅಯೋಧ್ಯೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ರಾಮಲಲ್ಲಾನ ದರ್ಶನ ಪಡೆದಿದ್ದಾರೆ. ಭಾರಿ ಸಂಖ್ಯೆಯ ಭಕ್ತರನ್ನು ನಿಯಂತ್ರಿಸಲು ಅಪಾರ ಸಂಖ್ಯೆಯ ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗಿದೆ. ವರದಿಗಳ ಪ್ರಕಾರ ಮಂಗಳವಾರ ಬೆಳಗ್ಗಿನಿಂದ ಸಂಜೆಯವರೆಗೆ ಬರೋಬ್ಬರಿ 3 ಲಕ್ಷಕ್ಕೂ ಹೆಚ್ಚು ಮಂದಿ ದರ್ಶನ ಪಡೆದಿದ್ದಾರೆ.
ಅಯೋಧ್ಯೆಗೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಬಾರದು ಎಂದು ಅಧಿಕಾರಿಗಳು ಮತ್ತು ಪೊಲೀಸರಿಗೆ ಸೂಚನೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು.