ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಘೋಷಣೆ ಮಾಡಿದ್ದಾರೆ.
ಬುಧವಾರ ಬೆಳಗ್ಗೆ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಹುಬ್ಬಳ್ಳಿಗೆ ತೆರಳಿ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ.
ನಾಳೆ ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ಯಾವ ಪಕ್ಷದಿಂದ ಸ್ಪರ್ಧೆ ಎಂಬುದನ್ನು ಮಧ್ಯಾಹ್ನದ ಬಳಿಕ ತಿಳಿಸುವೆ ಎಂದು ಸ್ಪಷ್ಟಪಡಿಸಿದರು.
ನನ್ನ ಮೂಲ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಅದಕ್ಕೆ ನಾನು ಬದ್ಧ. ಪರಿಷತ್ ಸದಸ್ಯನಾಗಿ ಎಲ್ಲಾ ವರ್ಗದ ಪರವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಗಿಲ್ಲ. ಹಾಗಾಗೀ ಕಾನೂನು ಸಿದ್ಧವಾಗುವ ಕೆಳಮನೆ ಪ್ರವೇಶ ಮಾಡಲು ನಿರ್ಧಾರ ಮಾಡಿದ್ದೇ.ಶ್ರಮಿಕ ವರ್ಗಗಳಿಗೆ ನ್ಯಾಯ ಕೊಡಲು ವಿಧಾನಸಭೆಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಮನಸ್ಸಿಗೆ ಬಂದಂತೆ ಮಾತನಾಡುವ ಬಾಯಿಗೆ ಹೊಲಿಗೆ ಬೀಳಲಿ ಎಂದು ಫ್ಲೆಕ್ಸ್ ಹಾಕಿಸಿದ್ದೇ. ಈ ಬೆಳವಣಿಗೆಗಳ ನಂತರ ಕೆಲವರ ಮಾತಿನಲ್ಲಿ ಬದಲಾವಣೆ ಆಗಿದ್ದು, ಗೊತ್ತಾಗುತ್ತಿದೆ. ಎಲ್ಲಾ ಸೌಕರ್ಯಗಳು ಇದ್ದರೂ ಶಿವಮೊಗ್ಗದಲ್ಲಿ ಬಂಡವಾಳ ಹೂಡಿಕೆಗೆ ಯಾರು ಮುಂದೆ ಬರುತ್ತಿಲ್ಲ. ಈ ಎಲ್ಲಾ ಕಾರಣಕ್ಕಾಗಿ ಸ್ಫರ್ಧೆಯ ನಿರ್ಧಾರ ಮಾಡಿದ್ದೇನೆ.ನನಗೆ ಗೊತ್ತಿದೆ ನಾನು ಸಾಮಾನ್ಯರ ಎದುರು ಸ್ಫರ್ಧೆ ಮಾಡುತ್ತಿಲ್ಲ. ಕುಬೇರರ ಎದುರು, ಲಕ್ಷ್ಮೀಪುತ್ರರ ಎದುರು ಸ್ಫರ್ಧೆ ಮಾಡುತ್ತಿದ್ದೇನೆ.ಟಿಕೆಟ್ ಗೋಸ್ಕರ ನಾನು ಪಕ್ಷವನ್ನು ಬಿಡುತ್ತಿಲ್ಲ. ನಾನು ನನ್ನ ಗುರಿ ಸಾಧನೆಗಾಗಿ ಹೊರಬರುತ್ತಿದ್ದೇನೆ ಎಂದರು.
ನಾನು ಹುಟ್ಟಿರುವುದೇ ದೀಪಾವಳಿಯ ಅಮಾವಾಸ್ಯೆ ದಿನ. ಹಾಗಾಗಿ ನಾಳೆ ಅಮಾವಾಸ್ಯೆ ಇದ್ದರೂ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡು ಒಂದು ವರ್ಷಕ್ಕೆ ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂತೋಷ್ ಪಾಟೀಲ್ ಮನೆಯಲ್ಲಿ ವರ್ಷದ ತಿಥಿ ನಡೆಯುತ್ತಿದ್ದರೆ ಇತ್ತ ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ.