ರಾಯಚೂರು: ಭಾರತದಲ್ಲಿ ವಹಿವಾಟು ನಡೆಸುವ ಮೂಲಕ ಲಕ್ಷಾಂತರ ಕೋಟಿ ರೂ. ಲಾಭ ಮಾಡಿಕೊಳ್ಳುವುದರ ಜತೆಗೆ ಪಾಕಿಸ್ತಾನವನ್ನು ನಮ್ಮ ದೇಶದ ವಿರುದ್ಧ ಎತ್ತಿ ಕಟ್ಟುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸುವ ಅಗತ್ಯವಿದೆ. ಹೀಗಾಗಿ ಚೀನಾದಿಂದ ಬರುವ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ಸ್ವದೇಶಿ ಜಾಗರಣ ಮಂಚ್ -ಕರ್ನಾಟಕ ಮತ್ತು ತೆಲಂಗಾಣದ ಸಂಘಟನಾ ಸಂಚಾಲಕ ಜಗದೀಶ ಜೀ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹುರಾಷ್ಟ್ರೀಯ ಒಪ್ಪಂದದನ್ವಯ ಚೀನಾದಿಂದ ಭಾರತಕ್ಕೆ ಆಮದಾಗುವ ಯಾವುದೇ ಉತ್ಪನ್ನಗಳನ್ನು ತಡೆಯಲು ಆಗುವುದಿಲ್ಲ. ಆದರೆ, ದೇಶದ ಪ್ರಜೆಗಳು ಆ ವಸ್ತುಗಳನ್ನು ಬಹಿಷ್ಕರಿಸಿದಲ್ಲಿ ಚೀನಾಕ್ಕೆ ದೊಡ್ಡ ಮಟ್ಟದ ಆರ್ಥಿಕ ಪೆಟ್ಟು
ಕೊಟ್ಟಂತಾಗುತ್ತದೆ. ಈ ಕಾರಣಕ್ಕೆ ದೇಶದ ನಾಗರಿಕರನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಹಲವು ಹಂತದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ದೇಶದ ಮನೆ ಮನೆಗೆ ತೆರಳಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಜಾಗೃತಿ ಮೂಡಿಸುವ ಉದ್ದೇಶವಿದೆ. 2001-02ರಲ್ಲಿ ಕೇವಲ 6500 ಕೋಟಿ ವ್ಯವಹಾರ ನಡೆಸುತ್ತಿದ್ದ ಚೀನಾ, ಈಗ ಮೂರರಿಂದ ನಾಲ್ಕು ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. ನಮ್ಮ ದೇಶದಿಂದ ಲಾಭ ಪಡೆಯುತ್ತಿದ್ದರೂ ಪಾಕಿಸ್ತಾನಕ್ಕೆ ಪರೋಕ್ಷ ಬೆಂಬಲ ನೀಡುವುದರ ಜತೆಗೆ ದೇಶದ ಮೇಲೆ ಆಕ್ರಮಣಾಕಾರಿ ಧೋರಣೆ ತಾಳುತ್ತಿದೆ. ಇದನ್ನು ಕಂಡು ಸುಮ್ಮನಿರಲು ಸಾಧ್ಯವಿಲ್ಲ. ಹೀಗಾಗಿ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕಾದರೆ ಅದರ ಆರ್ಥಿಕ ಮೂಲಕ್ಕೆ ಕೊಡಲಿ ಪೆಟ್ಟು ಬೀಳಬೇಕಿದೆ ಎಂದರು.
ದೇಶದ ಗಡಿಯಲ್ಲಿ ಪದೇಪದೆ ಸೀಮೋಲ್ಲಂಘನೆ ಮಾಡುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಅವರು ತಯಾರಿಸಿದ ವಸ್ತುಗಳನ್ನು ಬಹಿಷ್ಕರಿಸುವುದೊಂದೇ ಇದಕ್ಕೆ ದಾರಿ. ಈ ಕಾರಣಕ್ಕೆ ರಾಷ್ಟ್ರೀಯ ಸ್ವದೇಶಿ-ಸುರಕ್ಷಾ ಅಭಿಯಾನವನ್ನು ಆಯೋಜಿಸಲಾಗಿದೆ. ಕಳೆದ ಹತ್ತು
ವರ್ಷಗಳ ಅವ ಧಿಯಲ್ಲಿ ಅಗ್ಗದ ವಸ್ತುಗಳು ಹರಿದು ಬರುತ್ತಿವೆ. ಇದರಿಂದ ದೇಶದ ಉತ್ಪನ್ನಗಳ ಮೇಲೆ ದುಷ್ಪರಿಣಾಮವಾಗುತ್ತಿದೆ. ನಿರುದ್ಯೋಗ ಸಮಸ್ಯೆ ಜತೆಗೆ ಪರಾವಲಂಬನೆ ಹೆಚ್ಚಾಗುತ್ತಿದೆ ಎಂದರು.
ಚೀನಾ ವಸ್ತುಗಳನ್ನು ಬಹಿಷ್ಕರಿಸೋಣ ಎಂಬ ನಿನಾದದೊಂದಿಗೆ ಎಲ್ಲ ಶಾಲಾ-ಕಾಲೇಜು, ಊರುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಆ.29ರಂದು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಏರ್ಪಡಿಸಲಾಗಿದೆ. ದೇಶದ ಪ್ರತಿ ನಾಗರಿಕರು ಕೂಡ ಈ ಅಭಿಯಾನಕ್ಕೆ ಜತೆಗೂಡಬೇಕು ಎಂದು ವಿನಂತಿಸಿದರು. ಚೀನಾ ಹಾಗೂ ಪಾಕಿಸ್ತಾನ ಎರಡೂ ಕುತಂತ್ರದಿಂದ ದೇಶದೊಳಕ್ಕೆ ನುಗ್ಗುತ್ತಿವೆ. ಇವುಗಳಿಗೆ ಪರೋಕ್ಷವಾಗಿ ನಾವೇ ಹಣಕಾಸಿನ ನೆರವು ನೀಡಿದಂತಾಗುತ್ತಿದೆ. ಅಲ್ಲದೇ, ಚೀನಾಕ್ಕೆ ಹೆಚ್ಚು ಮಿತ್ರ ರಾಷ್ಟ್ರಗಳಿಲ್ಲ. ಯುದ್ಧಕ್ಕೆ ಬಂದಲ್ಲಿ ಅದು ಪಾಕಿಸ್ತಾನದೊಟ್ಟಿಗೆ ಬರಬೇಕು. ಆದರೆ, ಭಾರತಕ್ಕೆ ಸಾಕಷ್ಟು ರಾಷ್ಟ್ರಗಳು ನೆರವು ನೀಡಲು ಸಿದ್ಧವಿದ್ದು, ಚೀನಾವನ್ನು ಸದೆ ಬಡೆಯಲು ಎಲ್ಲರೂ
ಕೈಜೋಡಿಸಬೇಕು ಎಂದರು. ಮಂಚ್‌ನ ಸದಸ್ಯರಾದ ರಾಜೇಂದ್ರ ಶಿವಳ್ಳಿ, ರಾಜೇಂದ್ರ ಕುಮಾರ, ಶರಣಪ್ಪ ಇತರರಿದ್ದರು.