ಉಡುಪಿ: ಹಿಂದೂ ಮತ್ತು ಜೈನ ಗ್ರಂಥಗಳ ಸಮಗ್ರ ಅಧ್ಯಯನಕ್ಕೆ ಸಂಸ್ಕೃತ ಮತ್ತು ಪ್ರಾಕೃತ ಭಾಷೆಯ ಜ್ಞಾನ ಅವಶ್ಯ ಎಂದು ಇತಿಹಾಸ ತಜ್ಞ ಡಾ| ವೈ. ಉಮಾನಾಥ ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಎಂಜಿಎಂ ಕಾಲೇಜಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ 2021ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಡೆ ಮತ್ತು ಎಸ್.ಆರ್. ಹೆಗ್ಡೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಹಿಂದೂ ಧರ್ಮದ ಅನೇಕ ಗ್ರಂಥಗಳು ಸಂಸ್ಕೃತದಲ್ಲಿ ಇರುವಂತೆ, ಜೈನ ಧರ್ಮದ ಗ್ರಂಥಗಳು ಪ್ರಾಕೃತ ಭಾಷೆಯಲ್ಲಿವೆ. ಹಾಗೆಯೇ ಬೌದ್ಧಧರ್ಮದ ಸಾಹಿತ್ಯಗಳು ಪಾಲಿ ಭಾಷೆಯಲ್ಲಿವೆ. ಸಂಸ್ಕೃತ ಹಾಗೂ ಪ್ರಾಕೃತ ಭಾಷೆಗೆ ಸಾಕಷ್ಟು ಸಾಮ್ಯವಿದೆ. ಈ ಎರಡೂ ಭಾಷೆ ಬಲ್ಲವರು ವಿದ್ವಾಂಸರಾಗಲು ಸಾಧ್ಯ ಎಂದರು.
ಹಿಂದೂ ಧರ್ಮದ ಪ್ರಮುಖ ಗ್ರಂಥಗಳಾದ ವೇದ, ಪುರಾಣ, ಉಪನಿಷತ್,ಷಡ್‌ದರ್ಶನಗಳ ಬಗ್ಗೆ ಬರೆಯುವ ಯೋಜನೆಯನ್ನು ಹಾಕಿಕೊಂಡಿದ್ದೇನೆ. ಎಲ್ಲ ಕಾರ್ಯಕ್ಕೂ ಆಸಕ್ತಿ ಮತ್ತು ಪರಿಶ್ರಮ ಅವಶ್ಯ. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ನಿವೃತ್ತ ಪ್ರಾಧ್ಯಾಪಕಿ ಡಾ| ಮಾಲತಿ ಕೆ. ಮೂರ್ತಿ “ತುಳುನಾಡಿನ ಇತಿಹಾಸದ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳು’ ಎಂಬ ವಿಷಯದ ಮೇಲೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ಎಸ್. ನಾಯ್ಕ ತ್ತೈಮಾಸಿಕ ಪತ್ರಿಕೆ “ತುಳುವ’ ಬಿಡುಗಡೆ ಮಾಡಿದರು.
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಸಂಸ್ಥೆಯ ಆಡಳಿತಾಧಿ ಕಾರಿ ಡಾ| ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಶಸ್ತಿ ಸಮಿತಿಯ ಡಾ| ಇಂದಿರಾ ಹೆಗ್ಡೆ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ನವ್ಯಾಶ್ರೀ ಶೆಟ್ಟಿ ನಿರೂಪಿಸಿದರು.