Advertisement

ಪಠ್ಯೇತರ ಚಟುವಟಿಕೆಗಳಿಂದ ಜೀವನ ಮೌಲ್ಯ ಅರಿವು

09:20 PM Jul 30, 2019 | Lakshmi GovindaRaj |

ಮೈಸೂರು: ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ನಡೆಯುವ ಪಠ್ಯಗಳಷ್ಟೇ, ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿದ್ದು ಅವು ಜೀವನ ಮೌಲ್ಯವನ್ನು ಕಲಿಸಿಕೊಡುತ್ತವೆ ಎಂದು ಯುವನಟ ಚಂದನ್‌ ಆಚಾರ್‌ ಹೇಳಿದರು. ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

Advertisement

ನಾನು ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದಿದರೂ ನನಗೆ ಜೀವನ ಪಾಠ ಕಲಿಸಿದ್ದು ಮಹಾರಾಜ ಕಾಲೇಜು. ಮಹಾಜನ ಕಾಲೇಜಿನಲ್ಲಿ ಪಿಯುಸಿ ಓದಿದ ನಂತರ ನನ್ನ ಅಪ್ಪ ಒತ್ತಾಯ ಮಾಡಿ ಮಹಾರಾಜ ಕಾಲೇಜಿಗೆ ಸೇರಿಸಿದರು. ನಾನು ಕಟ್ಟಿಕೊಂಡ ಸ್ನೇಹಿತರ ಗುಂಪಿನಲ್ಲಿ ಎಲ್ಲರೂ ಒಂದಲ್ಲ ಒಂದು ಕೆಲಸ ಮಾಡಿಕೊಂಡೇ ಹಣ ಸಂಪಾದಿಸಿ ಶಿಕ್ಷಣ ಪಡೆಯುತ್ತಿದ್ದರು. ಇದೆಲ್ಲ ತಿಳಿದ ಮೇಲೆ ನಾನೂ ಅವರಂತಾಗಿ, ನಟನೆಯಲ್ಲಿ ತೊಡಗಿಕೊಂಡೆ ಎಂದು ಸ್ಮರಿಸಿದರು.

ಮಹಾರಾಜ ಕಾಲೇಜಿನಲ್ಲಿ ಗ್ರಂಥಾಲಯವಿದೆ. ಪ್ರತಿಯೊಬ್ಬರು ಗುರುತಿನ ಚೀಟಿ ಮಾಡಿಸಿಕೊಂಡು ಓದಬೇಕು. ಸಾಂಸ್ಕೃತಿಕ ಕ್ಷೇತ್ರಕ್ಕೆ ಈ ಕಾಲೇಜು ನೀಡಿರುವ ಕೊಡುಗೆ ಅಪಾರ. ನಮ್ಮಲ್ಲಿ ಸೂಕ್ಷ್ಮ ಪ್ರಜ್ಞೆ ಮತ್ತು ಶಿಸ್ತು ಇದ್ದರೆ ಅಧ್ಯಾಪಕರು ನಮ್ಮ ಬೆನ್ನ ಹಿಂದೆ ನಿಂತು ಮಾರ್ಗದರ್ಶನ ಮಾಡುತ್ತಾರೆ. ಗುರುಗಳ ಮಾರ್ಗದರ್ಶನದಲ್ಲಿ ಜ್ಞಾನ ಪಡೆದರೆ ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ಬದುಕಬಹುದು. ಇಲ್ಲಿಗೆ ಬರುವ ವಿದ್ಯಾರ್ಥಿಗಳು ಕಡುಕಷ್ಟದಿಂದ ಬಂದವರಾದ್ದರಿಂದ ಸಾಧಿಸುವ ಛಲ ಇದ್ದೆ ಇರುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಮುಂದೆ ಬರಬಹುದು ಎಂ ಹೇಳಿದರು.

ಮೂರು ವರ್ಷಗಳ ಪದವಿ ಹಂತ ಜೀವನದಲ್ಲಿ ಬಹಳ ಮುಖ್ಯವಾದ ಘಟ್ಟವಾಗಿದೆ. ಈ ಸಂದರ್ಭ ಸಮಯವನ್ನು ವ್ಯರ್ಥ ಮಾಡದೇ ಜ್ಞಾನ ಸಂಪಾದನೆಗೆ ಒತ್ತು ನೀಡಬೇಕು. ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಕಲ್ಲಿ ಪಾಲ್ಗೊಂಡು ಒತ್ತಡಗಳನ್ನು ನಿವಾರಿಸಿಕೊಳ್ಳಬೇಕು. ಮೌಲ್ಯಯುತ ಜೀವನ ನಡೆಸುವ ಮೂಲಕ ಇತರರಿಗೆ ಮಾದರಿಯಾಗಿ ಎಂದು ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ. ಮಹದೇವನ್‌ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಜೀವನಾಸಕ್ತಿ ಬಹಳ ಮುಖ್ಯ. ಪದವಿ ಮುಗಿದ ಬಳಿಕ ಸ್ನಾತಕೋತ್ತರ, ಪಿಎಚ್‌.ಡಿ. ಸಂಶೋಧನಾ ಕಾರ್ಯ ಹೀಗೆ ಅನೇಕ ಅವಕಾಶಗಳನ್ನು ಈಗಿನಿಂದಲೇ ಪಡೆಯಲು ಪ್ರಯತ್ನಿಸಬೇಕು. ಒಂದು ವೇಳೆ ಫೇಲಾದವರು ಕುಟುಂಬದಿಂದ, ಸಮಾಜದಿಂದ ದೂರವಾಗುತ್ತಾರೆ. ಅಂತಹ ಸ್ಥಿತಿಗೆ ತಲುಪಬಾರದೆಂದರೆ ಈಗನಿಂದಲೇ ಉತ್ತಮ ಶಿಕ್ಷಣ ಪಡೆಯಲು ಮನಸ್ಸು ಮಾಡಬೇಕು ಎಂದು ಹೇಳಿದರು.

Advertisement

ಪ್ರಾಂಶುಪಾಲೆ ಪ್ರೊ.ಸಿ.ಪಿ. ಸುನೀತಾ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ. ಅನಿಟಾ ವಿಮಲಾ ಬ್ರಾಗ್ಸ್‌, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕಿ ಡಾ.ಡಿ. ವಿಜಯಲಕ್ಷ್ಮೀ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next