Advertisement

ಸರಕಾರಿ ಶಾಲೆ:ಟ್ರ್ಯಾಕ್‌ ರೆಕಾರ್ಡ್‌ ಆನ್‌ಲೈನ್‌ನಲ್ಲಿ ಲಭ್ಯ

01:23 PM Nov 05, 2017 | Team Udayavani |

ಬೆಂಗಳೂರು: ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳ ಭಾವಚಿತ್ರ ಸಹಿತ ಶೈಕ್ಷಣಿಕ ದಾಖಲೆ ಮಾಹಿತಿ ಇನ್ನು ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ. ಹೌದು, ರಾಜ್ಯದ ಸರಕಾರಿ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳ ಮಾಹಿತಿ ಆನ್‌ಲೈನ್‌ನಲ್ಲಿ ಕ್ರೋಡೀಕರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಲಸ್ಟರ್‌ ಸಂಪನ್ಮೂಲ ವ್ಯಕ್ತಿಗಳಿಗೆ (ಸಿಆರ್‌ಪಿ) ಟ್ಯಾಬ್ಲೆಟ್‌ ವಿತರಿಸುತ್ತಿದ್ದು, ವಿದ್ಯಾರ್ಥಿಯ ಶೈಕ್ಷಣಿಕ “ಟ್ರ್ಯಾಕ್‌ ರೆಕಾರ್ಡ್‌’ ದಾಖಲಾಗಲಿದೆ.

Advertisement

ಸಿಆರ್‌ಪಿಗಳಿಗೆ 12 ಸಾವಿರ ರೂ. ಮೌಲ್ಯದ ಉತ್ತಮ ಗುಣಮಟ್ಟದ ಟ್ಯಾಬ್‌ ಒದಗಿಸಲು ಇಲಾಖೆಯಿಂದ ತೀರ್ಮಾನತೆಗೆದುಕೊಳ್ಳಲಾಗಿದೆ. ಸಿಆರ್‌ಪಿಗಳಿಗೆ ನೀಡುವ ಟ್ಯಾಬ್‌ ಹಾಗೂ ಶಾಲಾ ಕಂಪ್ಯೂಟರ್‌ನಲ್ಲೂ ಈ ಸಾಫ್ಟ್ವೇರ್‌ ಅಳವಡಿಸಲಾಗಿದೆ. ಎಲ್ಲ ಸರಕಾರಿ ಶಾಲೆಗೂ ಪ್ರತ್ಯೇಕ ಐಡಿ ಹಾಗೂ ಪ್ರತಿ ವಿದ್ಯಾರ್ಥಿಗೂ ಒಂದೊಂದು ಆನ್‌ಲೈನ್‌ ಐಡಿ ನೀಡಲಾಗುತ್ತಿದೆ.

ಸರಕಾರಿ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಮೌಲ್ಯಾಂಕನ ಮತ್ತು ಕಿರುಪರೀಕ್ಷೆ (ತರಗತಿಯಲ್ಲಿ ನಡೆಯುವ ಪರೀಕ್ಷೆ), ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕವೂ ಅಪ್‌ಡೇಟ್‌ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಟ್ರ್ಯಾಕ್‌ ರೆಕಾರ್ಡ್‌ ಮೂಲಕ ಶೈಕ್ಷಣಿಕವಾಗಿ ಹಿಂದುಳಿದವರಿಗೆ ವಿಶೇಷ ತರಬೇತಿ ನೀಡಲು ಇದು ಅನುಕೂಲವಾಗಲಿದೆ ಎಂಬುದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾದ. ಪ್ರಸ್ತಕ ಸಾಲಿನಲ್ಲಿ ಒಂದನೇ ತರಗತಿಗೆ ಸೇರಿದ ವಿದ್ಯಾರ್ಥಿಗಳಿಂದ ಹಿಡಿದು 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳ ಆನ್‌ಲೈನ್‌ ಟ್ರ್ಯಾಕ್‌ ರೆಕಾರ್ಡ್‌ ಸಿದ್ಧವಾಗುತ್ತಿದ್ದು, ಇದಕ್ಕಾಗಿ ಸ್ಟೂಡೆಂಟ್‌ ಅಚೀವ್‌ಮೆಂಟ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಅಳವಡಿಸಿಕೊಳ್ಳಲಾಗಿದೆ.

ದತ್ತಾಂಶ ಸಂಗ್ರಹಣೆ
ಸಿಆರ್‌ಪಿ ವ್ಯಾಪ್ತಿಯಲ್ಲಿ 15ರಿಂದ 30 ಶಾಲೆಗಳು ಇರುತ್ತದೆ. ಟ್ಯಾಬ್‌ ಮೂಲಕ ತಮ್ಮ ವ್ಯಾಪ್ತಿಯ ಎಲ್ಲ ಶಾಲೆಗಳ ಮಕ್ಕಳ ಹಾಜರಾತಿಯನ್ನು ಪ್ರತಿ ತಿಂಗಳು ಅಪ್‌ ಡೇಟ್‌ ಮಾಡಬೇಕು. ಜತೆಗೆ ಸರಕಾರದ ಯೋಜನೆಯ ಅನುಷ್ಠಾನದ ಮಾಹಿತಿಯನ್ನು ಆನ್‌ಲೈನ್‌ನಲ್ಲೇ ಒದಗಿಸಬೇಕು. ಬಿಸಿಯೂಟ, ಶೂ, ಸಾಕ್ಸ್‌, ಹಾಲು, ಸಮವಸ್ತ್ರ ವಿತರಣೆ,
ಸೈಕಲ್‌ ವಿತರಣೆ, ಪಠ್ಯಪುಸ್ತಕದ ಮಾಹಿತಿಯನ್ನು ತಪ್ಪಿಲ್ಲದೇ ಅಂಕಿಅಂಶ ಸಹಿತವಾಗಿ ಅಪ್‌ಡೇಟ್‌ ಮಾಡಬೇಕು ಎಂಬ ಸೂಚನೆ ನೀಡಲಾಗಿದೆ.

ಆನ್‌ಲೈನ್‌ನಲ್ಲೇ ವರ್ಗಾವಣೆ ಪತ್ರ
ಸರಕಾರಿ ಶಾಲೆಯ ಮಕ್ಕಳು ಒಂದು ಶಾಲೆ ಯಿಂದ ಇನ್ನೊಂದು ಶಾಲೆಗೆ, ಒಂದು ಜಿಲ್ಲೆ ಯಿಂದ ಇನ್ನೊಂದು ಜಿಲ್ಲೆಗೆ ವರ್ಗಾವಣೆ ಸುಲಭವಾಗಿ ಪಡೆಯಬಹುದು. ವರ್ಗಾವಣೆ ಪ್ರಮಾಣ ಪತ್ರಕ್ಕಾಗಿ ಕಾದು ಕೂರಬೇಕಾಗಿಲ್ಲ. ಮುಖ್ಯಶಿಕ್ಷಕರು ವರ್ಗಾವಣೆ ಪತ್ರವನ್ನು ಕೈಯಲ್ಲಿ ಬರೆದು ಕೊಡುವ ವ್ಯವಸ್ಥೆಯೂ ಇರುವುದಿಲ್ಲ. ವಿದ್ಯಾರ್ಥಿ ವರ್ಗಾವಣೆ ಹೊಂದುವ ಶಾಲೆಗೆ ನೇರವಾಗಿ ಆನ್‌ಲೈನ್‌ ಮೂಲಕ ಕಳುಹಿಸಲಾಗುತ್ತದೆ. ವಿದ್ಯಾರ್ಥಿ ವಿದ್ಯಾಭ್ಯಾಸ ಮಾಡಿದ ಶಾಲೆ ಯಿಂದ ವರ್ಗಾವಣೆ ಪಡೆದ ಶಾಲೆಗೆ ವರ್ಗಾವಣೆ ಪತ್ರ ಒಂದೇ ದಿನದಲ್ಲಿ ತಲು ಪಿಸಲು ಬೇಕಾದ ವ್ಯವಸ್ಥೆ ಇಲಾಖೆಯಲ್ಲಿ ಸಿದ್ಧವಾಗುತ್ತಿದೆ. 

Advertisement

ರಾಜು ಖಾರ್ವಿ ಕೊಡೇರಿ

ಶಾಲೆಯ ವಿದ್ಯಾರ್ಥಿ, ಶಿಕ್ಷಕರ ಮಾಹಿತಿ, ಹಾಜರಾತಿ, ಸರಕಾರಿ ಯೋಜನೆಯ ಅನುಷ್ಠಾನದ ದತ್ತಾಂಶವನ್ನು ಆನ್‌ಲೈನ್‌ ಮೂಲಕ ಪಡೆಯಲು ಸಿಆರ್‌ಪಿಗಳಿಗೆ ಟ್ಯಾಬ್‌ ನೀಡಲಾಗುತ್ತಿದೆ. ಸಿಆರ್‌ಪಿಯೊಬ್ಬ ತಿಂಗಳಿಗೆ 20 ಶಾಲೆಗೆ ಭೇಟಿ ನೀಡಿ, ಎಲ್ಲ ಮಾಹಿತಿಗಳನ್ನು ಅಪ್‌ಡೇಟ್‌ ಮಾಡಬೇಕು.
-ಡಾ| ಎಂ.ಟಿ. ರೆಜು, ರಾಜ್ಯ ಯೋಜನಾ ನಿರ್ದೇಶಕ, ಸರ್ವಶಿಕ್ಷಾ ಅಭಿಯಾನ

Advertisement

Udayavani is now on Telegram. Click here to join our channel and stay updated with the latest news.

Next