Advertisement
ಆರಂಭಕಾರ ಜಾಸನ್ ರಾಯ್ 180 ರನ್ ಬಾರಿಸಿ ಇಂಗ್ಲೆಂಡ್ ಪರ ನೂತನ ದಾಖಲೆ ಸ್ಥಾಪಿ ಸಿದ್ದು ಈ ಪಂದ್ಯದ ವಿಶೇಷವಾಗಿತ್ತು. ಡೇ-ನೈಟ್ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ ಆರನ್ ಫಿಂಚ್ ಅವರ 9ನೇ ಶತಕದ ನೆರವಿನಿಂದ 8 ವಿಕೆಟಿಗೆ 304 ರನ್ ಪೇರಿಸಿದರೆ, ಇಂಗ್ಲೆಂಡ್ 48.5 ಓವರ್‌ಗಳಲ್ಲಿ 5 ವಿಕೆಟಿಗೆ 308 ರನ್ ಬಾರಿಸಿ ಗೆಲುವಿನ ಸಂಭ್ರಮ ಆಚರಿಸಿತು.
ಎಂದಿನ ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟ್ ಬೀಸಿ ಆಸೀಸ್ ಬೌಲರ್‌ಗಳ ಮೇಲೆರಗಿ ಹೋದ ಜಾಸನ್ ರಾಯ್ 4ನೇ ಶತಕದೊಂದಿಗೆ ಇಂಗ್ಲೆಂಡ್ ಗೆಲುವನ್ನು ಸುಲಭಗೊಳಿಸಿದರು. ದ್ವಿಶತಕ ಬಾರಿಸುವ ಎಲ್ಲ ಸಾಧ್ಯತೆಗಳನ್ನು ಹೊಂದಿದ್ದ ರಾಯ್ 43ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡು 180 ರನ್ನುಗಳ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶನವಿತ್ತರು. ಇದು ಏಕದಿನದಲ್ಲಿ ಇಂಗ್ಲೆಂಡ್ ಆಟಗಾರನೊಬ್ಬನ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 2016ರ ಪಾಕಿಸ್ಥಾನ ವಿರುದ್ಧದ ನಾಟಿಂಗಂ ಪಂದ್ಯದಲ್ಲಿ ರಾಯ್ ಜತೆಗಾರ ಅಲೆಕ್ಸ್ ಹೇಲ್ಸ್ 171 ರನ್ ಬಾರಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಅದೇ ವರ್ಷ ಶ್ರೀಲಂಕಾ ವಿರುದ್ಧದ ಓವಲ್ ಪಂದ್ಯದಲ್ಲಿ ಅಜೇಯ 162 ರನ್ ಹೊಡೆದದ್ದು ರಾಯ್ ಅವರ ಸರ್ವಾಧಿಕ ಗಳಿಕೆಯಾಗಿತ್ತು.
Related Articles
Advertisement
ಫಿಂಚ್ ಶತಕ ಸಂಭ್ರಮಆಸ್ಟ್ರೇಲಿಯದ ಸ್ಕೋರ್ ಮುನ್ನೂರರ ಗಡಿ ದಾಟುವಲ್ಲಿ ನೆರವಾದದ್ದು ಆರಂಭಕಾರ ಆರನ್ ಫಿಂಚ್ ಅವರ ಆಕರ್ಷಕ ಶತಕ. ವಾರ್ನರ್ (2) ಅವರನ್ನು 10 ರನ್ ಆಗುವಷ್ಟರಲ್ಲಿ ಕಳೆದುಕೊಂಡ ಆಸೀಸ್‌ಗೆ ಫಿಂಚ್ ಅಗತ್ಯ ರಕ್ಷಣೆ ಒದಗಿಸುತ್ತ ಹೋದರು. ಬಳಿಕ ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಅರ್ಧ ಶತಕದ ಕೊಡುಗೆ ಸಲ್ಲಿಸಿದರು. 86ನೇ ಏಕದಿನ ಪಂದ್ಯ ಆಡಲಿಳಿದ ಫಿಂಚ್ 36ನೇ ಓವರ್ ತನಕ ಕ್ರೀಸಿನಲ್ಲಿ ನಿಂತು 107 ರನ್ ಬಾರಿಸಿದರು (119 ಎಸೆತ, 10 ಬೌಂಡರಿ, 3 ಸಿಕ್ಸರ್). ಸ್ಮಿತ್ (23), ಹೆಡ್ (5) ವಿಫಲರಾದ ಬಳಿಕ ಮಾರ್ಷ್-ಸ್ಟೊಯಿನಿಸ್ ಭರ್ಜರಿ ಬ್ಯಾಟಿಂಗ್ ಪರಾಕ್ರಮ ತೋರಿದರು. ಮಾರ್ಷ್ 68 ಎಸೆತ ಎದುರಿಸಿ 50 ರನ್ ಮಾಡಿದರೆ (2 ಬೌಂಡರಿ, 2 ಸಿಕ್ಸರ್), ಸಿಡಿದು ನಿಂತ ಸ್ಟೊಯಿನಿಸ್ 40 ಎಸೆತಗಳಿಂದ 60 ರನ್ ಬಾರಿಸಿದರು (5 ಬೌಂಡರಿ, 2 ಸಿಕ್ಸರ್). 2ನೇ ಪಂದ್ಯ ಜ. 19ರಂದು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ. ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ-8 ವಿಕೆಟಿಗೆ 304 (ಫಿಂಚ್ 107, ಸ್ಟೊಯಿನಿಸ್ 60, ಮಾರ್ಷ್ 50, ಪ್ಲಂಕೆಟ್ 71ಕ್ಕೆ 3, ರಶೀದ್ 73ಕ್ಕೆ 2). ಇಂಗ್ಲೆಂಡ್-48.5 ಓವರ್‌ಗಳಲ್ಲಿ 5 ವಿಕೆಟಿಗೆ 308 (ರಾಯ್ 180, ರೂಟ್ ಅಜೇಯ 91, ಸ್ಟಾರ್ಕ್ 71ಕ್ಕೆ 2, ಕಮಿನ್ಸ್ 63ಕ್ಕೆ 2). ಪಂದ್ಯಶ್ರೇಷ್ಠ: ಜಾಸನ್ ರಾಯ್.