Advertisement

ವನಿತಾ ಏಕದಿನ ವಿಶ್ವಕಪ್‌ : ಆಸ್ಟ್ರೇಲಿಯ ಹ್ಯಾಟ್ರಿಕ್‌ ವಿಜಯ

10:35 PM Mar 13, 2022 | Team Udayavani |

ವೆಲ್ಲಿಂಗ್ಟನ್‌: ವನಿತಾ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದ ಆಸ್ಟ್ರೇಲಿಯ ರವಿವಾರದ ಮುಖಾಮುಖೀಯಲ್ಲಿ ಆತಿಥೇಯ ನ್ಯೂಜಿಲ್ಯಾಂಡನ್ನು 141 ರನ್ನುಗಳ ಭಾರೀ ಅಂತರದಿಂದ ಬಗ್ಗುಬಡಿದಿದೆ. ಗೆಲುವಿನ ಹ್ಯಾಟ್ರಿಕ್‌ನೊಂದಿಗೆ ಅಗ್ರಸ್ಥಾನ ಅಲಂಕರಿಸಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 8 ವಿಕೆಟಿಗೆ 269 ರನ್‌ ಪೇರಿಸಿತು. ಅತ್ಯಂತ ಕಳಪೆ ಆಟವಾಡಿದ ನ್ಯೂಜಿಲ್ಯಾಂಡ್‌ 30.2 ಓವರ್‌ಗಳಲ್ಲಿ 128ಕ್ಕೆ ಕುಸಿಯಿತು. ಆರೂ ಮಂದಿ ಕಾಂಗರೂ ಬೌಲರ್ ಕಿವೀಸ್‌ ಮೇಲೆ ಘಾತಕವಾಗಿ ಎರಗಿದರು. ಡಾರ್ಸಿ ಬ್ರೌನ್‌ 3, ಅಮಂಡಾ ವೆಲ್ಲಿಂಗ್ಟನ್‌ ಮತ್ತು ಆ್ಯಶ್ಲಿ ಗಾರ್ಡನರ್‌ ತಲಾ 2; ಎಲ್ಲಿಸ್‌ ಪೆರ್ರಿ, ಟಹ್ಲಿಯಾ ಮೆಗ್ರಾತ್‌ ಮತ್ತು ಮೆಗಾನ್‌ ಶಟ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿ ಆತಿಥೇಯರ ಆಟ ಮುಗಿಸಿದರು. 44 ರನ್‌ ಮಾಡಿದ ಆ್ಯಮಿ ಸ್ಯಾಟರ್‌ವೆàಟ್‌ ಅವರದೇ ಕಿವೀಸ್‌ ಸರದಿಯ ಗರಿಷ್ಠ ಗಳಿಕೆ.

ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ಗೆ ಶರಣಾಗಿದ್ದ ನ್ಯೂಜಿಲ್ಯಾಂಡ್‌, ಬಳಿಕ ಭಾರತವನ್ನು ಸೋಲಿಸಿ ಲಯ ಕಂಡುಕೊಂಡಿತ್ತು. ಆದರೆ ನೆರೆಯ ಆಸೀಸ್‌ ಎದುರು ಕಿವೀಸ್‌ ಆಟ ನಡೆಯಲಿಲ್ಲ.

ಗಾರ್ಡನರ್‌ ಮಿಂಚಿನ ಆಟ
ಆಸ್ಟ್ರೇಲಿಯ ಸರದಿಯಲ್ಲಿ ಎಲ್ಲಿಸ್‌ ಪೆರ್ರಿ (68) ಮತ್ತು ಟಹ್ಲಿಯಾ ಮೆಗ್ರಾತ್‌ (57) ಅರ್ಧ ಶತಕ ಹೊಡೆದರು. ಆದರೆ ಸ್ಫೋಟಕ ಆಟವಾಡಿ ರನ್‌ಗತಿ ಏರಿಸಿದ್ದು ಆ್ಯಶ್ಲಿ ಗಾರ್ಡನರ್‌. 7ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಗಾರ್ಡನರ್‌ ಕೇವಲ 18 ಎಸೆತಗಳಲ್ಲಿ 48 ರನ್‌ ಸಿಡಿಸಿದರು (4 ಬೌಂಡರಿ, 4 ಸಿಕ್ಸರ್‌). ಆಸ್ಟ್ರೇಲಿಯ ಮೊದಲೆರಡು ಪಂದ್ಯಗಳಲ್ಲಿ ಇಂಗ್ಲೆಂಡ್‌ ಮತ್ತು ಪಾಕಿಸ್ಥಾನವನ್ನು ಮಣಿಸಿತ್ತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯ-8 ವಿಕೆಟಿಗೆ 269 (ಪೆರ್ರಿ 68, ಮೆಗ್ರಾತ್‌ 57, ಗಾರ್ಡನರ್‌ ಔಟಾಗದೆ 48, ಹೇನ್ಸ್‌ 30, ಟಹುಹು 53ಕ್ಕೆ 3). ನ್ಯೂಜಿಲ್ಯಾಂಡ್‌-30.2 ಓವರ್‌ಗಳಲ್ಲಿ 128 (ಸ್ಯಾಟರ್‌ವೆàಟ್‌ 44, ಟಹುಹು 23, ಮಾರ್ಟಿನ್‌ 19, ಬ್ರೌನ್‌ 22ಕ್ಕೆ 3, ಗಾರ್ಡನರ್‌ 15ಕ್ಕೆ 2, ವೆಲ್ಲಿಂಗ್ಟನ್‌ 34ಕ್ಕೆ 2).
ಪಂದ್ಯಶ್ರೇಷ್ಠ: ಎಲ್ಲಿಸ್‌ ಪೆರ್ರಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next