Advertisement

ಆಸೀಸ್‌-ಕಿವೀಸ್‌: ಮೊದಲ ಟಿ20 ಕಿರೀಟಕ್ಕೆ ಫೈಟ್‌

10:06 PM Nov 13, 2021 | Team Udayavani |

ದುಬಾೖ: ಟಿ20 ವಿಶ್ವಕಪ್‌ ಸಾಮ್ರಾಜ್ಯದ ನೂತನ ದೊರೆಯ ಆಳ್ವಿಕೆಗೆ ಕ್ಷಣಗಣನೆ ಮೊದಲ್ಗೊಂಡಿದೆ. ನೆರೆಹೊರೆಯ ಸಾಂಪ್ರದಾಯಿಕ ಎದುರಾಳಿಗಳಾದ ನ್ಯೂಜಿಲ್ಯಾಂಡ್‌ ಮತ್ತು ಆಸ್ಟ್ರೇಲಿಯ ರವಿವಾರ ಸಂಜೆ ದುಬಾೖಯಲ್ಲಿ ಪ್ರಶಸ್ತಿ ಸಮರಕ್ಕೆ ಇಳಿಯಲಿವೆ. ಆಗ ಈ ಎರಡೂ ದೇಶಗಳಲ್ಲಿ ಮಧ್ಯರಾತ್ರಿ ಕಳೆದಿರುತ್ತದೆ. ಒಂದು ದೇಶ ತನ್ನ ನೂತನ ಮುಂಜಾವನ್ನು ಗೆಲುವಿನೊಂದಿಗೆ ಸ್ವಾಗತಿಸಲಿದೆ.

Advertisement

ಇಲ್ಲಿ ಯಾರೇ ಗೆದ್ದರೂ ಮೊದಲ ಸಲ ಟಿ20 ವಿಶ್ವ ಚಾಂಪಿಯನ್‌ ಆಗುವುದು ಈ ಸಲದ ವಿಶ್ವಕಪ್‌ ವಿಶೇಷ. ಏಕದಿನ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸಹಿತ ಅತ್ಯಧಿಕ 5 ಸಲ ಚಾಂಪಿಯನ್‌ ಆಗಿ ಮೆರೆದ ಆಸ್ಟ್ರೇಲಿಯಕ್ಕೆ ಈವರೆಗೆ ಟಿ20 ವಿಶ್ವಕಪ್‌ ಎತ್ತಲಾಗಿಲ್ಲ. ಕಾಂಗರೂ ಪಡೆಗೆ ಇದು ಎರಡನೇ ಫೈನಲ್‌. 2010ರಲ್ಲಿ ಮೊದಲ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿ ಅಲ್ಲಿ ಇಂಗ್ಲೆಂಡಿಗೆ ಸೋತಿತ್ತು.

ನ್ಯೂಜಿಲ್ಯಾಂಡ್‌ ಟಿ20 ವಿಶ್ವಕಪ್‌ ಫೈನಲ್‌ ತಲುಪಿದ್ದು ಇದೇ ಮೊದಲು. ಅದು ಐಸಿಸಿ ವಿಶ್ವಕಪ್‌ಗ್ಳಲ್ಲಿ ಆರಕ್ಕೇರದ, ಮೂರಕ್ಕಿಳಿಯದ ತಂಡ. ಆದರೆ ಕಳೆದ 6 ವರ್ಷಗಳಿಂದ ನ್ಯೂಜಿಲ್ಯಾಂಡಿನ ನಸೀಬು ನಿಧಾನವಾಗಿ ಬದಲಾಗತೊಡಗಿದೆ. 2015 ಮತ್ತು 2019ರ ಏಕದಿನ ವಿಶ್ವಕಪ್‌ ಫೈನಲ್‌ ಪ್ರವೇಶಿಸಿತು. ಎರಡರಲ್ಲೂ ಸೋತಿತೆಂಬುದು ಬೇರೆ ಮಾತು. ಈ ವರ್ಷದ ಚೊಚ್ಚಲ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಲಗ್ಗೆ ಹಾಕಿ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಇದೀಗ ಟಿ20 ವಿಶ್ವಕಪ್‌ ಸರದಿ.

ಅಸಾಮಾನ್ಯ ಬ್ಯಾಟಿಂಗ್‌ ಸಾಹಸ:

ಎರಡೂ ತಂಡಗಳು ಸೆಮಿಫೈನಲ್‌ನಲ್ಲಿ ಅಸಾಮಾನ್ಯ ಬ್ಯಾಟಿಂಗ್‌ ಪ್ರದರ್ಶಿಸಿದ್ದನ್ನು ಮರೆಯುವಂತಿಲ್ಲ. ಇಂಗ್ಲೆಂಡ್‌ ವಿರುದ್ಧ ನ್ಯೂಜಿಲ್ಯಾಂಡ್‌, ಹಾಗೆಯೇ ಪಾಕಿಸ್ಥಾನ ವಿರುದ್ಧ ಆಸ್ಟ್ರೇಲಿಯ ಸೋಲುವ ಹಂತದಲ್ಲಿದ್ದವು. ಆದರೆ ಡೆತ್‌ ಓವರ್‌ಗಳಲ್ಲಿ ಇತ್ತಂಡಗಳ ಆಟಗಾರರು ಸ್ಫೋಟಕ ಬ್ಯಾಟಿಂಗ್‌ ನಡೆಸಿ ಪಂದ್ಯದ ಫ‌ಲಿತಾಂಶವನ್ನೇ ಬದಲಿಸಿದ್ದು ಈಗ ಇತಿಹಾಸ. ಹೀಗಾಗಿ ಫೈನಲ್‌ ಕೂಡ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಲಿದೆ ಎಂಬುದು ಕ್ರಿಕೆಟ್‌ ಅಭಿಮಾನಿಗಳ ನಿರೀಕ್ಷೆ.

Advertisement

ಒಟ್ಟು ಟಿ20 ಬಲಾಬಲ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯವೇ ಮುಂದಿದೆ. ಆಡಿದ 14 ಪಂದ್ಯಗಳಲ್ಲಿ ಆಸ್ಟ್ರೇಲಿಯ 9ರಲ್ಲಿ ಜಯ ಸಾಧಿಸಿದೆ. ನ್ಯೂಜಿಲ್ಯಾಂಡ್‌ ಉಳಿದ ಐದನ್ನು ಗೆದ್ದಿದೆ. ಆದರೆ ಫೈನಲ್‌ ಎಂಬುದು ಡಿಫ‌ರೆಂಟ್‌ ಬಾಲ್‌ ಗೇಮ್‌. ಇಲ್ಲಿ ಏನೂ ಸಂಭವಿಸಬಹುದು. ಇಂಥವರೇ ಗೆಲ್ಲುತ್ತಾರೆಂದು ಧೈರ್ಯದಿಂದ ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಇದೊಂದು 50-50 ಗೇಮ್‌.

ಆಸೀಸ್‌ ಬ್ಯಾಟಿಂಗ್‌ ಬಲಿಷ್ಠ:

ಆಸ್ಟ್ರೇಲಿಯದ ಬ್ಯಾಟಿಂಗ್‌ ಬಲಿಷ್ಠ. ಇಲ್ಲಿ ವಿಶ್ವ ದರ್ಜೆಯ ಅನೇಕ ಆಟಗಾರರಿದ್ದಾರೆ. ವಾರ್ನರ್‌ ಸರಿಯಾದ ಹೊತ್ತಿಗೆ ಫಾರ್ಮ್ ಕಂಡುಕೊಂಡಿದ್ದಾರೆ. ನಾಯಕ ಫಿಂಚ್‌ ಸೆಮಿಫೈನಲ್‌ನಲ್ಲಿ ಸೊನ್ನೆ ಸುತ್ತಿದರೂ ನ್ಯೂಜಿಲ್ಯಾಂಡ್‌ ವಿರುದ್ಧ ಇವರ ದಾಖಲೆ ಉತ್ತಮ ಮಟ್ಟದಲ್ಲಿದೆ. ಇವರೆದುರು ಅತ್ಯಧಿಕ 254 ರನ್‌ ಬಾರಿಸಿದ ಆಸ್ಟ್ರೇಲಿಯದ ಬ್ಯಾಟ್ಸ್‌ಮನ್‌ ಆಗಿದ್ದಾರೆ.

ಮ್ಯಾಕ್ಸ್‌ವೆಲ್‌, ಸ್ಮಿತ್‌, ಸ್ಟೋಯಿನಿಸ್‌ ಹಾಗೂ ಸೆಮಿಫೈನಲ್‌ ಹೀರೋ ವೇಡ್‌ ತನಕ ಬ್ಯಾಟಿಂಗ್‌ ಲೈನ್‌ಅಪ್‌ ವಿಸ್ತರಿಸಿದೆ. ವೇಡ್‌ಗೆ ಇದು ವಿದಾಯ ಪಂದ್ಯವಾಗಿರಲಿಕ್ಕೂ ಸಾಕು.  ಆಸ್ಟ್ರೇಲಿಯ ಬಳಿ ವಿಶ್ವ ದರ್ಜೆಯ ತ್ರಿವಳಿ ವೇಗಿಗಳಿದ್ದಾರೆ-ಸ್ಟಾರ್ಕ್‌, ಕಮಿನ್ಸ್‌ ಮತ್ತು ಹ್ಯಾಝಲ್‌ವುಡ್‌. ಆದರೆ ಇವರೀಗ ಘಾತಕವಾಗಿ ಉಳಿದಿಲ್ಲ. ಇವರಿಗಿಂತ ಸ್ಪಿನ್ನರ್‌ ಝಂಪ ವಾಸಿ.

ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಉತ್ತಮ ಬೌಲಿಂಗ್‌ ನಿಯಂತ್ರಣ ಸಾಧಿಸುವವರಿಗೆ ಕಪ್‌ ಎತ್ತುವ ಅವಕಾಶ ಹೆಚ್ಚು. ಹಾಗೆಯೇ ಟಾಸ್‌ ಕೂಡ ನಿರ್ಣಾಯಕ. ಟಾಸ್‌ ಗೆದ್ದವರು ಅರ್ಧ ಪಂದ್ಯ ಗೆದ್ದಂತೆ!

ಎಲ್ಲರೂ ಮ್ಯಾಚ್‌ ವಿನ್ನರ್! :

ಬಹಳ ಶಿಸ್ತು, ಅಷ್ಟೇ ಸಂಯಮದಿಂದ ಆಡುವ ನ್ಯೂಜಿಲ್ಯಾಂಡ್‌ ತಂಡದ ಸಾಮರ್ಥ್ಯ ಏನೆಂಬುದು ಈಗಾಗಲೇ ಜಾಹೀರಾಗಿದೆ. ಇಲ್ಲಿ ವಿಶ್ವ ದರ್ಜೆಯ ಸ್ಟಾರ್‌ ಆಟಗಾರರು ಕಡಿಮೆ. ಆದರೆ ಎಲ್ಲರೂ ಮ್ಯಾಚ್‌ ವಿನ್ನರ್‌ಗಳೇ. ಮೊನ್ನೆ ಗಪ್ಟಿಲ್‌ ಮತ್ತು ವಿಲಿಯಮ್ಸನ್‌ ಬೇಗನೇ ಔಟಾದಾಗ ಮಿಚೆಲ್‌, ಕಾನ್ವೆ, ನೀಶಮ್‌ ಸೇರಿ ತಂಡವನ್ನು ದಡ ಸೇರಿಸಿದ ಪರಿ ಅಮೋಘ. ಆದರೆ ಕಾನ್ವೆ ಈ ಪಂದ್ಯದಿಂದ ಬೇರ್ಪಟ್ಟಿದ್ದಾರೆ. ಇವರ ಬದಲು ಟಿಮ್‌ ಸೀಫ‌ರ್ಟ್‌ ಕೀಪಿಂಗ್‌ ನಡೆಸಲಿದ್ದಾರೆ.

ನ್ಯೂಜಿಲ್ಯಾಂಡಿನ ಬೌಲಿಂಗ್‌ ವಿಭಾಗ ಆಸ್ಟ್ರೇಲಿಯಕ್ಕಿಂತ ಘಾತಕ. ಸೌಥಿ, ಬೌಲ್ಟ್, ಮಿಲೆ°, ಲೆಗ್‌ಸ್ಪಿನ್ನರ್‌ ಸೋಧಿ ಉತ್ತಮ ಲಯದಲ್ಲಿದ್ದಾರೆ. ಇವರಲ್ಲಿ ಬೌಲ್ಟ್ ಇಂಗ್ಲೆಂಡ್‌ ವಿರುದ್ಧ ದಂಡಿಸಿಕೊಂಡರೂ ತಿರುಗಿ ಬೀಳುವ ಸಾಮರ್ಥ್ಯವಂತೂ ಇದ್ದೇ ಇದೆ.

ಏಕೈಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ಗೆ ಜಯ :

ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಟಿ20 ವಿಶ್ವಕಪ್‌ನಲ್ಲಿ ಈವರೆಗೆ ಒಮ್ಮೆಯಷ್ಟೇ ಮುಖಾಮುಖೀಯಾಗಿವೆ. ಅದು ಕಳೆದ ಸಾಲಿನ (2016) ಪಂದ್ಯಾವಳಿಯ ಸೂಪರ್‌-10 ಹಂತದ ಪಂದ್ಯ. ನಡೆದದ್ದು ಧರ್ಮಶಾಲಾದಲ್ಲಿ. ಇದರಲ್ಲಿ ಕಿವೀಸ್‌ 8 ರನ್ನುಗಳ ರೋಚಕ ಜಯ ಸಾಧಿಸಿತ್ತು.

ಬೌಲರ್‌ಗಳಿಗೆ ಮೇಲುಗೈ ಒದಗಿಸಿದ ಈ ಪಂದ್ಯದಲ್ಲಿ ಒಂದೂ ಅರ್ಧ ಶತಕ ದಾಖಲಾಗಿರಲಿಲ್ಲ. ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 142 ರನ್‌ ಗಳಿಸಿತು. 39 ರನ್‌ ಮಾಡಿದ ಮಾರ್ಟಿನ್‌ ಗಪ್ಟಿಲ್‌ ಅವರದೇ ಹೆಚ್ಚಿನ ಮೊತ್ತ. ಅಷ್ಟೇ ಅಲ್ಲ, ಇದು ಪಂದ್ಯದ ಸರ್ವಾಧಿಕ ಗಳಿಕೆಯೂ ಆಗಿತ್ತು. ಜವಾಬಿತ್ತ ಆಸ್ಟ್ರೇಲಿಯ 9 ವಿಕೆಟಿಗೆ 134 ರನ್‌ ಗಡಿಯಲ್ಲಿ ನಿಂತಿತು. ಓಪನರ್‌ ಉಸ್ಮಾನ್‌ ಖ್ವಾಜಾ 38 ರನ್‌ ಮಾಡಿದರು.

ಮಿಚೆಲ್‌ ಮೆಕ್ಲೆನಗನ್‌ 17ಕ್ಕೆ 3, ಕೋರಿ ಆ್ಯಂಡರ್ಸನ್‌ 29ಕ್ಕೆ 2, ಮಿಚೆಲ್‌ ಸ್ಯಾಂಟ್ನರ್‌ 30ಕ್ಕೆ 2 ವಿಕೆಟ್‌ ಕಿತ್ತು ಸ್ಟೀವನ್‌ ಸ್ಮಿತ್‌ ಬಳಗಕ್ಕೆ ಕಡಿವಾಣ ಹಾಕಿದರು.

ಮೊದಲ ಫೈನಲ್‌ನಲ್ಲಿ ಎಡವಿದ ಆಸ್ಟ್ರೇಲಿಯ :

ಆಸ್ಟ್ರೇಲಿಯ ಕಾಣುತ್ತಿರುವ 2ನೇ ಟಿ20 ವಿಶ್ವಕಪ್‌ ಫೈನಲ್‌ ಇದಾಗಿದೆ. ಕಾಂಗರೂ ಪಡೆ ಮೊದಲ ಸಲ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದು 2010ರಲ್ಲಿ. ಅಂದಿನ ಪಂದ್ಯಾವಳಿ ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿತ್ತು. ಫೈನಲ್‌ ತಾಣ ಬ್ರಿಜ್‌ಟೌನ್‌. ಎದುರಾಳಿ ಇಂಗ್ಲೆಂಡ್‌. ಫ‌ಲಿತಾಂಶ-ಆಸ್ಟ್ರೇಲಿಯಕ್ಕೆ 7 ವಿಕೆಟ್‌ ಸೋಲು. ಸ್ವಾರಸ್ಯವೆಂದರೆ, ಅಂದಿನ ಸೆಮಿಫೈನಲ್ಲೂ ಆಸೀಸ್‌ ಪಾಕಿಸ್ಥಾನವನ್ನೇ ಮಣಿಸಿತ್ತು!

ಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ ಆಸ್ಟ್ರೇಲಿಯ 2.1 ಓವರ್‌ಗಳಲ್ಲಿ, 8 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಉದುರಿಸಿಕೊಂಡಿತು. ನಾಯಕ ಮೈಕಲ್‌ ಕ್ಲಾರ್ಕ್‌ (29), ಡೇವಿಡ್‌ ಹಸ್ಸಿ (59) ಮತ್ತು ಕ್ಯಾಮರಾನ್‌ ವೈಟ್‌ (30) ಅವರ ಹೋರಾಟ ಫ‌ಲದಿಂದ 6ಕ್ಕೆ 147 ರನ್‌ ಗಳಿಸುವಲ್ಲಿ ಯಶಸ್ವಿಯಾಯಿತು.

ಇಂಗ್ಲೆಂಡ್‌ ಕೂಡ ಆರಂಭಿಕ ಕುಸಿತಕ್ಕೆ ಸಿಲುಕಿತು. ಆದರೆ ಕ್ರೆಗ್‌ ಕೀಸ್ವೆಟರ್‌ (63)-ಕೆವಿನ್‌ ಪೀಟರ್‌ಸನ್‌ (47) ದ್ವಿತೀಯ ವಿಕೆಟಿಗೆ 111 ರನ್‌ ಪೇರಿಸಿ ತಂಡಕ್ಕೆ ಸುಲಭ ಜಯ ತಂದಿತ್ತರು. ಪಾಲ್‌ ಕಾಲಿಂಗ್‌ವುಡ್‌ ಬಳಗ 17 ಓವರ್‌ಗಳಲ್ಲಿ ಮೂರೇ ವಿಕೆಟಿಗೆ 148 ರನ್‌ ಮಾಡಿತು. ಇದು ಇಂಗ್ಲೆಂಡಿಗೆ ಒಲಿದ ಮೊದಲ ವಿಶ್ವಕಪ್‌ ಎಂಬುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next