ಬೆಂಗಳೂರು: “ನಮ್ಮ ಮೆಟ್ರೊ’ ರೈಲುಗಳಲ್ಲಿ ದಟ್ಟಣೆಯಿಂದ ಪ್ರಯಾಣಿಕರು ಪರದಾಡದನ್ನು ತಪ್ಪಿಸಲು ಹೆಚ್ಚುವರಿಯಾಗಿ ಮೂರು ಬೋಗಿಗಳನ್ನು ಅಳವಡಿಸುವ ಕಾರ್ಯ ಅನುಷ್ಠಾನಗೊಳ್ಳಲು ಇನ್ನೂ ಒಂದು ತಿಂಗಳು ಬೇಕಿದೆ.
ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ ಸಿಎಲ್) ಈ ಹಿಂದೆ ಡಿಸೆಂಬರ್‌ನಲ್ಲಿ ಆರು ಬೋಗಿಗಳನ್ನು ಅಳವಡಿಸುವುದಾಗಿ ತಿಳಿಸಿತ್ತು. ಆದರೆ, ಈ ವರೆಗೆ ಹೆಚ್ಚುವರಿ ಬೋಗಿಗಳು ಪೂರೈಕೆಯಾಗದ ಹಿನ್ನೆಲೆಯಲ್ಲಿ ಹೊಸ ವರ್ಷದ ವೇಳೆಗೆ ಪ್ರಯಾಣಿಕರಿಗೆ ಆರು ಬೋಗಿಗಳು ಲಭ್ಯವಾಗುವುದು ಅನುಮಾನ ಎನ್ನಲಾಗಿದ್ದು, ಗುತ್ತಿಗೆದಾರರು ಈ ತಿಂಗಳ ಕೊನೆಗೆ ಬೋಗಿಗಳನ್ನು ಪೂರೈಸಲಿದ್ದಾರೆ.
ಒಪ್ಪಂದದಂತೆ ಬಿಎಂಆರ್‌ಸಿಎಲ್‌ಗೆ 150 ಬೋಗಿಗಳು ಪೂರೈಕೆಯಾಗಬೇಕಿದ್ದು, ಸಂಸ್ಥೆಯು ಹಂತ ಹಂತವಾಗಿ ಬೋಗಿಗಳನ್ನು ಪೂರೈಸಲಿದೆ. ಆದರೆ, ಬೋಗಿಗಳು ಪೂರೈಕೆಯಾದ ಕೂಡಲೇ ಅವುಗಳನ್ನು ಅಳವಡಿಸಲು ಸಾಧ್ಯವಿಲ್ಲ. ಹೊಸ ಬೋಗಿಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಿದ ಬಳಿಕ ಸೇವೆ ಆರಂಭಿಸಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರು ಬೋಗಿಗಳು ಲಭ್ಯವಾಗಲು ಇನ್ನೂ ಒಂದು ತಿಂಗಳು ಬೇಕಾಗುತ್ತದೆ ಎನ್ನುತ್ತಾರೆ ಬಿಎಂಆರ್‌ಸಿಎಲ್ ಅಧಿಕಾರಿಗಳು.
ಆರು ಬೋಗಿಗಳಿಗೆ ಸ್ಥಳವಿಲ್ಲ: ನಮ್ಮ ಮೆಟ್ರೊ ಮೊದಲ ಹಂತದಲ್ಲಿ ಆರು ಬೋಗಿಗಳಿರುವ ರೈಲನ್ನು ನಿಲ್ಲಿಸಲು ಸಾಧ್ಯವಾಗದಂತೆ ವಿನ್ಯಾಸ ಮಾಡಲಾಗಿದೆ. ಹೀಗಾಗಿ ಆರು ಬೋಗಿಗಳು ಅಳವಡಿಸಿದ ನಂತರವೂ ರೈಲು ನಿಲ್ಲಿಸುವುದು ಹೇಗೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಆರು ಬೋಗಿಗಳು ಅಳವಡಿಸಿದ ನಂತರದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾದ ಬೋಗಿ ಮೀಸಲಿರಿಸುವ ಪ್ರಸ್ತಾಪವೂ ಬಿಎಂಆರ್ ಸಿಎಲ್ ಮುಂದಿದೆ ಎನ್ನಲಾಗಿದೆ.
ಇಂದಿರಾ ನಗರದಲ್ಲಿ ರಂಗೋಲಿ ಮೆಟ್ರೊ ಕಲಾ ಕೇಂದ್ರ
ನಗರದ ಎಂ.ಜಿ.ರಸ್ತೆಯ ನಮ್ಮ ಮೆಟ್ರೊ ಮಾರ್ಗದ ಕೆಳಗೆ ನಿರ್ಮಿಸಲಾಗಿರುವ ರಂಗೋಲಿ ಮೆಟ್ರೊ ಕಲಾ ಕೇಂದ್ರವನ್ನು ಇಂದಿರಾ ನಗರದ ಮೇಟ್ರೊ ನಿಲ್ದಾಣದ ಬಳಿಯ ಖಾಲಿ ಜಾಗದಲ್ಲಿ ನಿರ್ಮಿಸಲು ಬಿಎಂಆರ್‌ಸಿಎಲ್ ಟೆಂಡರ್ ಆಹ್ವಾನಿಸಿದ್ದು, ಜನವರಿ ವೇಳೆ ಟೆಂಡರ್ ಅಂತಿಮವಾಗಲಿದೆ.
ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಕಲಾ ಕೇಂದ್ರವು ಪ್ರಯಾಣಿಕರ ಆಕರ್ಷಣೀಯವಾಗಿದ್ದು, ಇಂದಿರಾ ನಗರದ ಸೇರಿದಂತೆ ನಗರದ ಉಳಿದ ಮೆಟ್ರೊ ನಿಲ್ದಾಣಗಳಿಗೂ ವಿಸ್ತರಿಸುವ ಯೋಜನೆಯಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಮ್ಮ ಟ್ವಿಟ್ಟರ ಖಾತೆಯಲ್ಲಿ ಬರೆದುಕೊಂಡಿದ್ದಾರೆ.