ದಿಸ್ಪುರ್ : ಅಸ್ಸಾಂನ ಅತ್ಯಂತ ಹಳೆಯ ಪ್ರತ್ಯೇಕತಾವಾದಿ ನಿಷೇಧಿತ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ULFA) ಪರ ಮಾತುಕತೆಯ ಬಣವು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರ ಸಮ್ಮುಖದಲ್ಲಿ ಕೇಂದ್ರ ಮತ್ತು ಅಸ್ಸಾಂ ಸರಕಾರದೊಂದಿಗೆ ತ್ರಿಪಕ್ಷೀಯ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿತು.
ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಅಮಿತ್ ಶಾ ಮಾತನಾಡಿ ” ದೀರ್ಘಕಾಲದಿಂದ ಅಸ್ಸಾಂ ಮತ್ತು ಈಶಾನ್ಯ ಹಿಂಸಾಚಾರವನ್ನು ಎದುರಿಸುತ್ತಿತ್ತು.ಇಂದು ಅಸ್ಸಾಂನ ಭವಿಷ್ಯದ ಉಜ್ವಲ ದಿನವಾಗಿರುವುದು ಸಂತೋಷದ ವಿಷಯವಾಗಿದೆ. ಉಲ್ಫಾ ಸಹಿ ಹಾಕಿರುವುದು ಇಡೀ ಈಶಾನ್ಯಕ್ಕೆ ಮತ್ತು ವಿಶೇಷವಾಗಿ ಅಸ್ಸಾಂಗೆ ಶಾಂತಿಯ ಹೊಸ ಅವಧಿಯ ಆರಂಭವನ್ನು ಸೂಚಿಸುತ್ತದೆ.
ಬಂಡುಕೋರರ ಗುಂಪು ಒಳಗೊಂಡ ಹಿಂಸಾಚಾರದಿಂದ ರಾಜ್ಯವು ದೀರ್ಘಕಾಲದಿಂದ ಬಳಲುತ್ತಿತ್ತು, 1979 ರಿಂದ ಇಂತಹ ಹಿಂಸಾಚಾರದಲ್ಲಿ 10,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ ಎಂದು ಅಮಿತ್ ಶಾ ಹೇಳಿದರು.
“ಭಾರತ ಸರಕಾರದ ಮೇಲೆ ನೀವು ಇಟ್ಟುಕೊಂಡಿರುವ ನಂಬಿಕೆ, ಗೃಹ ಸಚಿವಾಲಯದ ಕಡೆಯಿಂದ, ನೀವು ಕೇಳದೆಯೇ ಎಲ್ಲವನ್ನೂ ಪೂರೈಸಲು ಸಮಯಕ್ಕೆ ಅನುಗುಣವಾಗಿ ಕಾರ್ಯಕ್ರಮಗಳನ್ನು ಮಾಡಲಾಗುವುದು ಎಂದು ನಾನು ಉಲ್ಫಾ ಪ್ರತಿನಿಧಿಗಳಿಗೆ ಭರವಸೆ ನೀಡಲು ಬಯಸುತ್ತೇನೆ. ಗೃಹ ಸಚಿವಾಲಯದ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗುವುದು, ಇದು ಜ್ಞಾಪಕ ಪತ್ರದ ಅಡಿಯಲ್ಲಿ ಒಪ್ಪಂದಗಳನ್ನು ಪೂರೈಸಲು ಅಸ್ಸಾಂ ಸರಕಾರದೊಂದಿಗೆ ಕೆಲಸ ಮಾಡುತ್ತದೆ ಎಂದರು.
ಹಿಮಂತ ಬಿಸ್ವಾ ಶರ್ಮ ಅವರು ಮಾತನಾಡಿ ಅಸ್ಸಾಂಗೆ ಐತಿಹಾಸಿಕ ದಿನ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಸುಮಾರು ಉಗ್ರಗಾಮಿ ಸಂಘಟನೆಗಳ 8,756 ಸದಸ್ಯರು ಮುಖ್ಯವಾಹಿನಿಗೆ ಸೇರಿದ್ದಾರೆ ಎಂದರು.
ಈ ಗುಂಪನ್ನು ಉಗ್ರ ಸಂಘಟನೆ ಎಂದು ಹೆಸರಿಸಿ 1990 ರಿಂದ ನಿಷೇಧಿಸಲಾಗಿತ್ತು. 2011 ರಲ್ಲಿ, ಗುಂಪು ಕೇಂದ್ರ ಸರಕಾರ ಮತ್ತು ಅಸ್ಸಾಂ ಸರಕಾರದೊಂದಿಗೆ ಕಾರ್ಯಾಚರಣೆಗಳ ಅಮಾನತು (SoO) ಗಾಗಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿತ್ತು.