ಕೊಲಂಬೊ: ತೀವ್ರ ಆರ್ಥಿಕ ಸಂಕ ಟದ ಹೊರತಾಗಿಯೂ 18ನೇ ಆವೃತ್ತಿಯ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಶ್ರೀಲಂಕಾದಲ್ಲೇ ನಡೆಯುವುದು ಖಚಿತಪಟ್ಟಿದೆ.
ಈಗಾಗಲೇ ಎರಡು ಸಲ ಮುಂದೂಡಲ್ಪಟ್ಟ ಈ ಟೂರ್ನಿ ಆ. 24ರಂದು ಆರಂಭಗೊಂಡು ಸೆ. 7ರ ತನಕ ನಡೆಯಲಿದೆ.
ಒಟ್ಟು 6 ತಂಡಗಳು ಪ್ರಶಸ್ತಿ ಸೆಣಸಾಟದ ರೇಸ್‌ನಲ್ಲಿರಲಿವೆ. ಆತಿಥೇಯ ಶ್ರೀಲಂಕಾ, ಹಾಲಿ ಚಾಂಪಿಯನ್ ಭಾರತ, ಪಾಕಿಸ್ಥಾನ, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಜತೆಗೆ ಒಂದು ಕ್ವಾಲಿಫೈಯರ್ ತಂಡ ಪಾಲ್ಗೊಳ್ಳಲಿದೆ. ಮೂಲ ವೇಳಾಪಟ್ಟಿಯಂತೆ ಈ ಪಂದ್ಯಾವಳಿ 2020ರಲ್ಲೇ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲ್ಪಟ್ಟಿತು.
ಬಳಿಕ 2021ರಲ್ಲಿ ನಡೆಸಲು ತೀರ್ಮಾನಿಸಲಾಯಿತು. ಆಗಲೂ ಕೋವಿಡ್ ಅಡ್ಡಬಂತು. ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆ. 24ರಿಂದ ಈ ಕೂಟವನ್ನು ಆಯೋಜಿಸಲು ನಿರ್ಧರಿಸಿದೆ. 2023ರ ಏಷ್ಯಾ ಕಪ್ ಪಂದ್ಯಾವಳಿ ಪಾಕಿಸ್ಥಾನದ ಆತಿಥ್ಯದಲ್ಲಿ ನಡೆಯಲಿದೆ. ಅಂದು ಕೂಡ 6 ತಂಡಗಳು ಪಾಲ್ಗೊಳ್ಳಲಿವೆ.