Advertisement

ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಿದರೆ ಸಾಮಾಜಿಕ, ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯವಿಲ್ಲ

06:12 PM Aug 08, 2021 | Team Udayavani |

ಬೆಂಗಳೂರು: ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲೀಮರು ತಮಗಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಮುಂದೆ ಬರಲು ಪ್ರಯತ್ನ ಮಾಡಬೇಕು. ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಿದರೆ ಸಾಮಾಜಿಕ, ಆರ್ಥಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವೇ ಇಲ್ಲ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

Advertisement

ಬೆಂಗಳೂರಿನಲ್ಲಿ ಭಾನುವಾರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಮಸ್ಯೆಗಳನ್ನು ನಾವೇ ಬಗೆಹರಿಸಿಕೊಳ್ಳಬೇಕು. ಅದಕ್ಕೆ ಶಿಕ್ಷಣವೇ ಮಾರ್ಗವಾಗಬೇಕು, ಆ ಮೂಲಕ ನಮ್ಮ ಬಾಂಧವ್ಯವನ್ನು ಸದೃಢಗೊಳಿಸಿಕೊಳ್ಳಬೇಕು. ಶಿಕ್ಷಣವೊಂದೇ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಿರುವ ಏಕೈಕ ರಾಜಮಾರ್ಗ ಎಂದು ಹೇಳಿದರು.

ನಮ್ಮ ಸ್ಪರ್ಧೆ ಹಿಂದು- ಮುಸ್ಲಿಂ ಅಥವಾ ಹಿಂದು-ಕ್ರಿಶ್ಚಿಯನ್ ಅಂತ ಆಗಬಾರದು. ನಮ್ಮ ಸ್ಪರ್ಧೆ ಏನಿದ್ದರೂ ಅಮೆರಿಕ, ಚೀನ, ಜಪಾನ್ ದೇಶದ ಜೊತೆಯಲ್ಲಿ ಇರಬೇಕು. ನಮ್ಮ ಬಳಿ ಬಹಳಷ್ಟು ಜಮೀನಿದೆ, ಹಣವಿದೆ ಎಂದರೆ ಏನೂ ಆಗುವುದಿಲ್ಲ. ಅದರ ಬದಲು ನಮ್ಮ ಬಳಿ ತಂತ್ರಜ್ಞಾನವಿದೆ, ನಮ್ಮಲ್ಲಿ ಇಂಧನವಿದೆ ಎಂದಾದರೆ ಸ್ಪರ್ಧೆ ಹೆಚ್ಚಾಗುತ್ತದೆ, ಅಭಿವೃದ್ಧಿ ಸಾಧ್ಯವೂ ಆಗುತ್ತದೆ  ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಯಾವುದೇ ಕ್ಷೇತ್ರದಲ್ಲಿ ಮುಂದೆಜ್ಜೆ ಹಾಕಬೇಕಾದರೆ ಶಿಕ್ಷಣ ಬಹಳ ಮುಖ್ಯವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಇಂದು ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದೆ. ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿದೆ. ಇದರಿಂದಲೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ :ಎಥೆನಾಲ್ ಘಟಕ, ಸಕ್ಕರೆ ಉತ್ಪಾದನೆ ಮೂಲಕ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಯೋಜನೆ

Advertisement

ಇಂದು ಮುಸ್ಲಿಂ ಸಮುದಾಯದಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಅತ್ಯಂತ ಕಡಿಮೆ ಇದೆ. ಈ ವ್ಯವಸ್ಥೆ ಬದಲಾಗಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಮುಂದಿನ ತಲೆಮಾರು ಸುಶಿಕ್ಷಿತವಾಗುವಂತೆ ಮಾಡಬೇಕು. ಆ ಮೂಲಕ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರಲ್ಲದೆ, ಮುಸ್ಲಿಂ ಸಮುದಾಯದಿಂದ ಬಂದ ಅನೇಕರು ಮಾಡಿರುವ ಸಾಧನೆ ನಮ್ಮ ಮುಂದಿದೆ. ದೇಶದ ಮೊದಲ ಪ್ರಜೆ ಆಗಿದ್ದ ಡಾ.ಅಬ್ದುಲ್ ಕಲಾಂ ಅವರು ನಮಗೆ ಮಾದರಿಯಾಗಬೇಕು ಎಂದು ಅವರು ಹೇಳಿದರು.

ಕ್ಷುಲ್ಲಕ ರಾಜಕೀಯ ಮಾಡುತ್ತಾ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ವೋಟ್ ಬ್ಯಾಂಕ್ ಮಾಡಿಕೊಂಡರೆ ದೇಶ ಉದ್ಧಾರ ಆಗುವುದಿಲ್ಲ. ಈ ವ್ಯವಸ್ಥೆಗೆ ತಿಲಾಂಜಲಿ ಹೇಳಲೇಬೇಕಿದೆ. ಧರ್ಮ, ಜಾತಿಯನ್ನು ವೈಯಕ್ತಿಕ ನೆಲೆಯಲ್ಲಿರಲಿ. ಅಭಿವೃದ್ಧಿ ಎನ್ನುವುದು ವಿಶಾಲ ನೆಲೆಗಟ್ಟಿನಲ್ಲಿ ಇರಲಿ. ನಾವೆಲ್ಲರೂ ಮೊದಲು ಭಾರತೀಯರು. ನಂತರ ಧರ್ಮ ಅವರು ಪ್ರತಿಪಾದಿಸಿದರು.

ಬಿಜೆಪಿ ಎಂದಿಗೂ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ರಾಜಕೀಯ ಷಡ್ಯಂತ್ರದಿಂದ ಹಾಗೆ ಬಿಂಬಿಸಲಾಗುತ್ತಿದೆ. ಕೇವಲ ಅದನ್ನು ಮಿಥ್ಯೆಯಾಗಿಸಿಕೊಂಡು ಪ್ರತಿಪಕ್ಷಗಳು ಮತಬ್ಯಾಂಕ್ ರಾಜಕೀಯ ಮಾಡುತ್ತಿವೆ. ಅದೆಲ್ಲವನ್ನು ಸುಳ್ಳೆಂದು ತೋರಿಸಿ ಬಿಜೆಪಿ ಅಲ್ಪಸಂಖ್ಯಾತರ ವಿಭಾಗದ ಕಾರ್ಯಕರ್ತರು, ಮುಖಂಡರು ಕೆಲಸ ಮಾಡಬೇಕಿದೆ ಎಂದು ಅಶ್ವತ್ಥನಾರಾಯಣ ಸಲಹೆ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೈಯದ್ ಇಬ್ರಾಹಿಂ, ರಾಜ್ಯದ ಅಲ್ಪಂಖ್ಯಾತ ಮೋರ್ಚಾ ಅಧ್ಯಕ್ಷ ಮುಜಾಮಿಲ್ ಅಹಮದ್ ಬಾಬು, ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next