Advertisement

ಮೂಲ ವಿಜ್ಞಾನ ಕಲಿಕೆಗೆ ಉತ್ತೇಜನ, ವೈಜ್ಞಾನಿಕ ಸಂಸ್ಕಾರಕ್ಕೆ ಒತ್ತು : ಸಚಿವ ಅಶ್ವತ್ಥನಾರಾಯಣ

05:49 PM Aug 17, 2021 | Team Udayavani |

ಬೆಂಗಳೂರು: ಮೂಲ ವಿಜ್ಞಾನ ಕಲಿಕೆಗೆ ಹೆಚ್ಚು ಆದ್ಯತೆ ನೀಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಸ್ಕಾರ ಸೃಷ್ಟಿ ಮಾಡಲು ಸರಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಹೆಚ್ಚು ಪೂರಕವಾಗಿದೆ ಎಂದು ವಿಜ್ಞಾನ-ತಂತ್ರಜ್ಞಾನ, ಉನ್ನತ ಶಿಕ್ಷಣ, ಐಟಿ-ಬಿಟಿ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Advertisement

ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರಿನಲ್ಲಿಂದು ಏರ್ಪಡಿಸಿದ್ದ 28ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ ಹಾಗೂ ಬಾಲ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು; ದೇಶದ ಅಭಿವೃದ್ಧಿಯಲ್ಲಿ ವಿಜ್ಞಾನವನ್ನು ಕಡೆಗಣಿಸುವಂತೆಯೇ ಇಲ್ಲ. ಯಾವ ದೇಶ ವಿಜ್ಞಾನವನ್ನು ಉಪೇಕ್ಷಿಸುತ್ತದೆಯೋ ಆ ದೇಶ ಮುಂದುವರಿಯಲು ಸಾಧ್ಯವಿಲ್ಲ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚು ಒತ್ತಾಸೆ ಕೊಡಲಾಗಿದೆ. ಜತೆಗೆ, ವೈಜ್ಞಾನಿಕ ಸಂಶೋಧನೆಗೆ ಅತಿ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲೂ ಮೂಲ ವಿಜ್ಞಾನ ಬೋಧನೆ ಹಾಗೂ ಅದನ್ನು ಮತ್ತಷ್ಟು ವಿಸ್ತೃತವಾಗಿ ಕಲಿಸಲು ನೆರವಾಗುವಂತಹ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ನುಡಿದರು.

ಇದನ್ನೂ ಓದಿ :ಧ್ವಜಸ್ತಂಭ ದುರ್ಘಟನೆ : ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿದ ಶಿಕ್ಷಣ ಸಚಿವ

ಈಗಾಗಲೇ ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿ ರಾಜ್ಯವಾಗಿದ್ದು, ಆ ಪರಂಪರೆಯನ್ನು ಮುಂದುವರಿಸಲು ಮತ್ತಷ್ಟು ಪ್ರೋತ್ಸಾಹ ನೀಡಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಭರವಸೆ ನೀಡಿದರು.

Advertisement

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ನಾಥ ಮಹಾಸ್ವಾಮೀಜಿ ಅವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಆದಿಚುಂಚನಗಿರಿ ಮಠದಿಂದ ದತ್ತಿ ನಿಧಿ:

ಆದಿಚುಂಚನಗಿರಿ ಮಠದಲ್ಲಿ ಸ್ಥಾಪಿಸಲಾಗಿರುವ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ವಿಜ್ಞಾನ ದತ್ತಿ ನಿಧಿಯಿಂದ ಪ್ರಶಸ್ತಿ ಪುರಸ್ಕೃತರಾದ ಎಲ್ಲ ಬಾಲ ವಿಜ್ಞಾನಿಗಳಿಗೆ ಪ್ರತೀ ವರ್ಷ ವಿಜೇತರಾಗುವ ಕಿರಿಯ ವಿಜ್ಞಾನಿಗಳಿಗೆ ನಗದು ಪುರಸ್ಕಾರ ನೀಡುವ ಸಂಬಂಧ ಶ್ರೀಗಳವರು ವಿಜ್ಞಾನ ಪರಿಷತ್ತಿಗೆ 2 ಲಕ್ಷ ರೂ.ಗಳ ಚೆಕ್ ನೀಡಿದರು.

ರಾಜ್ಯ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ ಅವರು ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ವಿಜ್ಞಾನಿ ಡಾ.ವಿ.ಕೆ.ಅತ್ರೆ, ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಅದಮ್ಯ ಚೇತನ ಪ್ರತಿಷ್ಠಾನದ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್, ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷರಾದ ಬಿ.ದೊಡ್ಡಬಸಪ್ಪ, ಹೆಚ್.ವಿ.ಹುದ್ದಾರ್, ಖಜಾಂಜಿ ಈ.ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next