ನವದೆಹಲಿ: ಇಬ್ಬರು ವಿದ್ಯಾರ್ಥಿಗಳ ಅಪಹರಣ ಮತ್ತು ಹತ್ಯೆಯ ನಂತರ ಮಣಿಪುರದಲ್ಲಿ ಹಿಂಸಾಚಾರದ ಉಲ್ಬಣವು ಹೆಚ್ಚಾಗುತ್ತಿದ್ದಂತೆ, ಕೇಂದ್ರ ಗೃಹ ಸಚಿವಾಲಯವು ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಬಲ್ವಾಲ್ ಅವರನ್ನು ಮತ್ತೆ ಈಶಾನ್ಯ ರಾಜ್ಯಕ್ಕೆ ವರ್ಗಾಯಿಸಿದೆ.
ಪ್ರಸ್ತುತ ಶ್ರೀನಗರದ ಹಿರಿಯ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿರುವ ರಾಕೇಶ್ ಬಲ್ವಾಲ್ ಅವರನ್ನು ಮಣಿಪುರದಲ್ಲಿರುವ ಅವರ ಹೋಮ್ ಕೇಡರ್‌ಗೆ ಅಕಾಲಿಕ ವಾಪಸಾತಿಗೆ ಕೇಂದ್ರವು ಆದೇಶಿಸಿದೆ. ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಸಹಾಯ ಮಾಡಲು ಬಲ್ವಾಲ್ ಈಗ ಮಣಿಪುರದಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಣಿಪುರದಲ್ಲಿ ಚಾಲ್ತಿಯಲ್ಲಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಅಧಿಕಾರಿಗಳ ಅಗತ್ಯವನ್ನು ಉಲ್ಲೇಖಿಸಿ ಗೃಹ ಸಚಿವಾಲಯದ ಪ್ರಸ್ತಾವನೆಯ ಒಂದು ತಿಂಗಳ ಬಳಿಕ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಇದನ್ನು ಅನುಮೋದಿಸಿತು.
ಜುಲೈನಲ್ಲಿ ನಾಪತ್ತೆಯಾಗಿದ್ದ ಫಿಜಾಮ್ ಹೇಮ್‌ಜಿತ್ (20) ಮತ್ತು ಹಿಜಾಮ್ ಲಿಂತೋಯಿಂಗಂಬಿ (17) ಅವರ ಮೃತದೇಹಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮಂಗಳವಾರ ಇಂಫಾಲ್‌ನಲ್ಲಿ ಹೊಸ ಹಿಂಸಾಚಾರ ಸಂಭವಿಸಿದೆ. ಇಬ್ಬರನ್ನು ಕಿಡ್ನಾಪ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ನಿಟ್ಟಿನಲ್ಲಿ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಬಲ್ವಾಲ್ ಅವರನ್ನು ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ (ಕೇಡರ್) ಅಕಾಲಿಕವಾಗಿ ಅವರ ಸ್ಥಳೀಯ ರಾಜ್ಯಕ್ಕೆ ವರ್ಗಾಯಿಸಲಾಗಿದೆ. ಮಣಿಪುರ ಕೇಡರ್‌ನ 2012 ರ ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿ 2021 ರಲ್ಲಿ ಶ್ರೀನಗರದ ಎಸ್‌ಎಸ್‌ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಅದಕ್ಕೂ ಮುನ್ನ ಬಲ್ವಾಲ್ ಅವರು ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ (ಎನ್‌ಐಎ) ಮೂರುವರೆ ವರ್ಷಗಳ ಕಾಲ ನಿಯೋಜನೆ ಆಧಾರದ ಮೇಲೆ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅವರು 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ತನಿಖೆಯ ತಂಡದ ಭಾಗವಾಗಿದ್ದರು. ಈ ದಾಳಿಯಲ್ಲಿ 40 ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ ಯೋಧರು ಹುತಾತ್ಮರಾಗಿದ್ದರು.
ಇದನ್ನೂ ಓದಿ: MS Swaminathan: ಭಾರತದ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನ