ಬೆಂಗಳೂರು:ಉತ್ತರಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಉದ್ದೇಶಪೂರ್ವಕ ಗಲಾಟೆ ಮಾಡಿಸಿದೆ. ಬಿಜೆಪಿಯವರು ಬಾಯಿಗೆ ಬಂದಂತೆ ಮಾತನಾಡಬಾರದು. ಬಾಯಿಗೆ ಬಂದಂತೆ ಮಾತನಾಡಿ ಜನರನ್ನು ತಪ್ಪು ದಾರಿಗೆ ಎಳೆಯಬಾರದು ಎಂದು ಗೃಹಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಹೊನ್ನಾವರದ ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಶಿರಸಿಯಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಸಚಿವ ರೆಡ್ಡಿ ಅವರು ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಹನುಮ ಜಯಂತಿ, ಈದ್ ಮಿಲಾದ್ ಅನ್ನು ಒಟ್ಟಿಗೆ ಆಚರಿಸಲು ಮನವಿ ಮಾಡಿದ್ದರು. ಈ ಬಾರಿ ಹನುಮ ಜಯಂತಿ, ಈದ್ ಮಿಲಾದ್ ಒಂದೇ ದಿನ ಬಂದಿದ್ದರಿಂದ ಗಲಾಟೆಗೆ ಕಾರಣವಾಗಿತ್ತು. ಎರಡೂ ಕಡೆಯವರಿಗೆ ಅನುಮತಿ ನೀಡದಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದೆ.
ನಿಷೇಧಾಜ್ಞೆ ಜಾರಿಯಲ್ಲಿದ್ದಾಗ ಮೆರವಣಿಗೆ ನಡೆಸಬಾರದು ಎಂದು ಬಿಜೆಪಿಯವರಿಗೆ ಗೊತ್ತಿಲ್ವಾ? ಮೆರವಣಿಗೆ ಹೆಸರಲ್ಲಿ ಕೆಲ ಅಂಗಡಿಗಳನ್ನು ಹುಡುಕಿ, ಹುಡುಕಿ ಕಲ್ಲು ಎಸೆದಿದ್ದಾರೆ. ಇದೆಲ್ಲಾ ಬಿಜೆಪಿಯವರ ಚುನಾವಣಾ ರಾಜಕಾರಣ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಾವು ಸಂಭವಿಸಿದೆ. ವೈಯಕ್ತಿಕ ಕಾರಣಗಳಿಂದ ಸಾವನ್ನಪ್ಪಿದರೂ ಹಿಂದೂ ಎನ್ನುತ್ತಾರೆ. ನಾವೂ ಹಿಂದೂಗಳೇ ನಮಗೂ ಶ್ರದ್ಧಾಭಕ್ತಿ ಇದೆ. ಬೇಕಾದರೆ ಬಿಜೆಪಿಯವರು ನಾವು ಶ್ರೀರಾಮಸೇನೆಯವರು ಎಂದು ಹೇಳಿಕೊಳ್ಳಲಿ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.
ಪೋಸ್ಟ್ ಮಾರ್ಟ್ಂ ವರದಿ ಬರಲಿ, ಪೋಸ್ಟ್ ಮಾರ್ಟ್ಂ ವರದಿಯಲ್ಲಿ ಕೊಲೆ ಎಂದು ಬಂದರೆ. ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪೋಸ್ಟ್ ಮಾರ್ಟ್ಂನ ವಿಡಿಯೋ ರೆಕಾರ್ಡ್ ಆಗಿದೆ ಎಂದು ಹೇಳಿದರು.