Advertisement

ಡ್ರಗ್ಸ್‌ ಮುಕ್ತ ಜಿಲ್ಲೆಯಾಗಿ ಪಣ ; ಉಡುಪಿಯಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌

01:09 AM Oct 22, 2020 | mahesh |

ಉಡುಪಿ: ಉಡುಪಿ ಜಿಲ್ಲೆಯನ್ನು ಮಾದಕ ವ್ಯಸನ ಮುಕ್ತ ಜಿಲ್ಲೆಯನ್ನಾಗಿಸಲು ಪಣತೊಡಬೇಕು. ಮಾದಕ ವಸ್ತುಗಳ ವಿರುದ್ಧದ ಹೋರಾಟದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ನೇತೃತ್ವದ ತಂಡ ಉತ್ತಮ ಕಾರ್ಯ ನಿರ್ವಹಿಸಿದೆ. ಈ ಪ್ರಕ್ರಿಯೆ ನಿರಂತರವಾಗಿರಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

Advertisement

ಚಂದು ಮೈದಾನದಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರಸ್ಥಾನದಲ್ಲಿ ಬುಧವಾರ ನಡೆದ ಪೊಲೀಸ್‌ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಯಾವುದೇ ರೀತಿಯ ತುರ್ತು ಸಂದರ್ಭ ಎದುರಾದಾಗಲೂ ಪೊಲೀಸರು ರಕ್ಷಣೆಗೆ ನಿಲ್ಲುತ್ತಾರೆ. ಕೊರೊನಾ ನಿಯಂತ್ರಣದಲ್ಲಿ ಗಡಿಭಾಗ ಸಹಿತ ಪ್ರಮುಖ ಸ್ಥಳಗಳಲ್ಲಿ ಸೂಕ್ತ ನಿರ್ವಹಣೆ ಹಾಗೂ ಇತ್ತೀಚೆಗೆ ಬಂದ ನೆರೆ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ಕಾರ್ಯವೈಖರಿ ಶ್ಲಾಘನಾರ್ಹ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಹುತಾತ್ಮ ಪೊಲೀಸ್‌ ಪ್ರತಿಮೆಗೆ ಚಕ್ರ ಪುಷ್ಪಗುತ್ಛ ಸಮರ್ಪಣೆ ನಡೆಯಿತು. ಹಲವು ಗಣ್ಯರು ಪುಷ್ಪಗುತ್ಛ ಅರ್ಪಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್‌ ಅವರು ಕಳೆದ ಒಂದು ವರ್ಷದಲ್ಲಿ ಹುತಾತ್ಮರಾದ ಪೊಲೀಸರ ಸಂಕ್ಷಿಪ್ತ ವಿವರ ನೀಡಿದರು. ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಒಟ್ಟು 264 ಪೊಲೀಸರು ಹಾಗೂ ಕರ್ನಾಟಕದ 17 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ ಎಂದರು. ಪೊಲೀಸ್‌ ಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸುವ ಮೂಲಕ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ನಿರೀಕ್ಷಕ ಮೂರ್ತಿ ಎಸ್‌. ನಾಯ್ಕ ಅವರು ಪರೇಡ್‌ ಪ್ರಕ್ರಿಯೆಗಳನ್ನು ನೆರವೇರಿಸಿದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಪೊಲೀಸ್‌ ವೃತ್ತ ನಿರೀಕ್ಷಕ ಮಂಜುನಾಥ ಅವರು ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next