ಬೆಂಗಳೂರು: ಕಲಾವಿದರ ಮಾಸಾಶನವನ್ನು 500ರೂ.ಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಹೊಸದಾಗಿ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರ ಜತೆ “ಪರಿಚಯ’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕಲಾವಿದರ ಮಾಸಾಶನ ಹೆಚ್ಚಳ ಮಾಡಲು ಸಂಪುಟದ ಒಪ್ಪಿಗೆ ಸಿಕ್ಕಿದ್ದು ಶೀಘ್ರವೇ ಆದೇಶ ಹೊರ ಬೀಳಲಿದೆ ಎಂದು ಹೇಳಿದರು. ಈ ಬಾರಿ ಅಕಾಡೆಮಿಗಳಿಗೆ ಮನೆ ಹಾಳು ಮಾಡುವ ಜನರು ಬರದಂತೆ ತಡೆದಿದ್ದೇವೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ ಕದಡುವ, ಒಡೆಯುವ ಮನಸ್ಸಿನವರನ್ನು ಅಕಾಡೆಮಿಗಳಿಗೆ ನೇಮಕ ಮಾಡಿಲ್ಲ ಎಂದು ತಿಳಿಸಿದರು.
ಪರಿಚಯ: ಅಕಾಡೆಮಿಗಳ ಅಧ್ಯಕ್ಷರು ಹಾಗೂ ಸದಸ್ಯರು ತಮ್ಮ ಸಾಧನೆ ಹಾಗೂ ತಮ್ಮ ಹಿನ್ನೆಲೆ ಬಗ್ಗೆ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಜತೆಗೆ, ತಮ್ಮ ಅಕಾಡೆಮಿಗಳಿಗೆ ಅಗತ್ಯವಾದ ನೆರವು ಸೇರಿ ಇತರ ಬೇಡಿಕೆಗಳನ್ನು ಸಚಿವರ ಮುಂದಿಟ್ಟರು.
ಕೃತಜ್ಞತೆ: ತುಳು ಅಕಾಡೆಮಿ ಅಧ್ಯಕ್ಷರಾಗಿ ನೇಮಕಗೊಂಡ ದಯಾನಂದ ಕತ್ತಲಸರ ಮಾತನಾಡಿ, “ಪರಿಶಿಷ್ಟ ಜಾತಿಗೆ ಸೇರಿದ ಪಂಬದ ಸಮುದಾಯದ ನನಗೆ ಕಲಾ ಸೇವೆ ಮಾಡಲು ಅವಕಾಶ ಮಾಡಿ ಕೊಡ ಲಾಗಿದೆ. ಅಕಾಡೆಮಿಯ ಇತಿಹಾಸದಲ್ಲಿ ಮೊದಲ ಬಾರಿಗೆ ನಮಗೆ ಅವಕಾಶ ಕಲ್ಪಿಸಿರು ವುದಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು. ಲಿಪಿ ಹಾಗೂ ಕ್ಯಾಲೆಂಡರ್ ಇರುವ ಭಾಷೆಯಾದ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು. ಈ ನಿಟ್ಟಿನಲ್ಲಿ ಸಚಿವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಮಂಜಮ್ಮ ಜೋಗತಿ ಮಾತನಾಡಿ, “ಮಂಗಳಮುಖೀ ಕಲಾವಿದೆಗೆ ಸರ್ಕಾರ ಬಹುದೊಡ್ಡ ಗೌರವ ನೀಡಿದೆ. ನನ್ನಂತಹ ಕಲಾವಿದೆಯನ್ನು ಗುರುತಿಸಿರುವುದು ಹೆಮ್ಮೆಯಾಗಿದೆ. ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಾಭರಣ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಎಂ.ಎ.ಹೆಗಡೆ, ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷ ಅಜರ್ಕಳ ಗಿರೀಶ್ ಭಟ್ ಸೇರಿ ಎಲ್ಲ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರು ತಮ್ಮ, ತಮ್ಮ ಪರಿಚಯ ಮಾಡಿಕೊಂಡರು.
ಭಾವುಕರಾದ ಸಚಿವರು: ಜಾನಪದ ಅಕಾಡೆಮಿ ಸದಸ್ಯೆ ಎಸ್.ಟಿ.ಲಕ್ಷ್ಮಿದೇವಮ್ಮ ಅವರು ಮಾತನಾಡುವಾಗ ಚಿಕ್ಕಮಗಳೂರಿನಲ್ಲಿ ಬಾವುಟ ಹಿಡಿದು ಹೋರಾಟ ಮಾಡಿದ ಹುಡುಗ ವಿಧಾನಸೌಧದವರೆಗೆ ಬಂದು ಉನ್ನತ ಸ್ಥಾನ ಅಲಂಕರಿಸಿದ್ದಾನೆ. ಇದರ ಹಿಂದಿನ ಶ್ರಮ ಸಾಕಷ್ಟಿದೆ. ಜನಪರ ಕಾಳಜಿ, ಸೇವೆಯೇ ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಜನರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಹೇಳಿದಾಗ ಸಚಿವ ಸಿ.ಟಿ.ರವಿ ಭಾವುಕರಾದರು. ಅವರ ಕಣ್ಣಂಚಲಿ ನೀರು ತುಂಬಿತ್ತು. ಎರಡೂ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.