Advertisement

ಯುಗಾದಿ ಹೊಸ ಬದುಕಿಗೆ ನಾಂದಿ

06:17 PM Apr 12, 2021 | Team Udayavani |

ಪ್ರಕೃತಿ ಮಾತೆಯು ಹೊಸವರ್ಷವನ್ನು ಸ್ವಾಗತಿಸಲು ಸಿದ್ಧಳಾಗಿದ್ದಾಳೆ. ಗಿಡಮರಗಳು ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ. ಆಗ ತಾನೆ ಅರಳಿನಿಂತ ಸುವಾಸನೆ ಬೀರುವ ಹೂವಿನ ಮಕರಂದ ಹೀರಲು ಹಿಂಡುಹಿಂಡಾಗಿ ದುಂಬಿಗಳು ಬರುತ್ತಿವೆ.

Advertisement

ಎಷ್ಟೋ ದಿನಗಳಿಂದ ಕೇಳದ ಕೋಗಿಲೆಯ ಧ್ವನಿ ಈಗ ಕೇಳುತ್ತಿದೆ. ಪ್ರಕೃತಿಯ ಮಡಿಲಲ್ಲಿ ಹೆಜ್ಜೆಹಾಕುತ್ತಾ ಹೋದಂತೆ ಹಕ್ಕಿಗಳ ಇಂಪಾದ ಗಾಯನ ಮನಸ್ಸಿಗೆ ಮುದ ನೀಡುತ್ತಿದೆ. ಗಿಡ-ಮರಗಳಲ್ಲಿ ಹೂ ಚಿಗುರೆಲೆ ಕಾಣಿಸುತ್ತಿದೆ. ಯುಗಾದಿ ಹಬ್ಬವು ಪ್ರಕೃತಿ ನಮಗೆ ನೀಡಿದ ಒಂದು ಅತ್ಯದ್ಭುತವಾದ ಕೊಡುಗೆ ಎಂದು ಹೇಳಿದರೆ ತಪ್ಪಾಗಲಾರದು.

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಎಂದು ಬರೆದ ನಮ್ಮ ದ.ರಾ.ಬೇಂದ್ರೆ ಅವರ ಕವಿತೆ ಹಬ್ಬ ಬಂತು ಎಂದರೆ ಪಟ್ಟನೆ ನೆನಪಾಗುತ್ತದೆ.ಯುಗಾದಿ ಹಬ್ಬವನ್ನು ಹಳ್ಳಿಗಳ ಕಡೆ ಉಗಾದಿ ಎಂದು ಕರೆಯುವುದುಂಟು. ಶಿಶಿರ ಋತು ಕಳೆದು ವಸಂತಋತು ಆಗಮನದ ಮೊದಲ ಹಬ್ಬವೇ ಈ ಯುಗಾದಿ. ಭಾರತೀಯರ ಪಾಲಿಗೆ ಹೊಸ ಸಂವತ್ಸರ ಈ ಯುಗಾದಿ ಹಬ್ಬದಿಂದಲೇ ಶುರುವಾಗುತ್ತದೆ.

ಭಾರತದಲ್ಲಿ ಯುಗಾದಿ ಹಬ್ಬಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಈ ಹಬ್ಬವನ್ನು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗುಜರಾತ್‌ ಮುಂತಾದ ಅನೇಕ ರಾಜ್ಯಗಳಲ್ಲಿ ಅತಿ ವಿಜೃಂಭಣೆಯಿಂದ ಪ್ರತಿ ವರ್ಷವು ಆಚರಿಸಿಕೊಂಡು ಬರಲಾಗುತ್ತಿದೆ. ಯುಗಾದಿ ಹಬ್ಬಕ್ಕೆ ಸಂಬಂಧಿಸಿ ಪೌರಾಣಿಕ ಹಾಗೂ ಐತಿಹಾಸಿಕ ಅನೇಕ ಕಥೆಗಳು ಇವೆ.

Advertisement

ಚೈತ್ರ ಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವ ಹೊತ್ತಿನಲ್ಲಿ ಬ್ರಹ್ಮದೇವನು ಜಗತ್ತನ್ನು ಸೃಷ್ಟಿ ಮಾಡಿದನು ಎಂಬ ನಂಬಿಕೆ ಇದೆ. ಅಂದಿನಿಂದ ಸಮಯದ ಗಣನೆಗಾಗಿ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಗಳನ್ನು ನಿರ್ಮಾಣ ಮಾಡಿದ ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹೀಗೆ ಹಲವಾರು ಕತೆಗಳನ್ನು ಜನರು ಹೇಳುತ್ತಾರೆ.

ಯುಗಾದಿ ಪದದ ಅರ್ಥ ಯುಗಾದಿ. ಯುಗಾದಿ ಹೊಸ ಯುಗದ ಆರಂಭ. ಹಬ್ಬದ ದಿನ ಸೂರ್ಯೋದಯ ಆಗುವ ಮೊದಲೇ ಎದ್ದು ಕಸಗುಡಿಸಿ ಮನೆಯ ಹೆಣ್ಣು ಮಕ್ಕಳೆಲ್ಲ ಸೇರಿ ಬಾಗಿಲ ಮುಂದೆ ದೊಡ್ಡದಾದ ರಂಗೋಲಿ ಬಿಡಿಸುತ್ತಾರೆ. ಆ ರಂಗೋಲಿಯನ್ನು ವಿವಿಧ ಬಣ್ಣಗಳಿಂದ ಶೃಂಗರಿಸಿ ಎಲ್ಲರ ಕಣ್ಮನ ಸೆಳೆಯುವಂತೆ ಮಾಡುತ್ತಾರೆ. ಎಲ್ಲರೂ ಸೇರಿ ಮಾವು ಮತ್ತು ಬೇವಿನಿಂದ ಮನೆಯನ್ನು ಶೃಂಗರಿಸಿ ಹರಳೆಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಊರಿನಲ್ಲಿರುವ ಪ್ರಮುಖ ದೇವಾಲಯಗಳಿಗೆ ತೆರಳಿಪೂಜೆ ಸಲ್ಲಿಸಿ ಗುರು-ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ವಾಡಿಕೆ.

ಯುಗಾದಿಯ ದಿನ ಬೇವು ಬೆಲ್ಲಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಇದೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತವಾಗಿದೆ. ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು, ಜೀವನದಲ್ಲಿ ಕಷ್ಟ-ಸುಖಗಳು ನೋವು-ನಲಿವು ಒಟ್ಟಿಗೆ ಇರುವುದು ಸಹಜ. ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಸಮಾನವಾಗಿ ಸ್ವೀಕರಿಸಿ ಜೀವನ ಎಂಬ ಬಂಡಿಯನ್ನು ಎಳೆಯಬೇಕು ಎಂದುದು ಇದರ ತಾತ್ಪರ್ಯ.

ರೈತರು ಯುಗಾದಿ ದಿನ ಹೊಸದಾಗಿ ತಯಾರು ಮಾಡಿದ್ದ ನೇಗಿಲುಗಳನ್ನು ಪೂಜಿಸಿ ಬಿತ್ತನೆ ಮಾಡುವ ಎಲ್ಲ ದವಸ ಧಾನ್ಯಗಳ ಮಾದರಿಯನ್ನು ಬಿತ್ತುತ್ತಾರೆ. ಮಾದರಿ ಬೆಳೆಗಳು ಹುಲುಸಾಗಿ ಬಂದರೆ ಅವರು ಬೆಳೆಯುವ ಬೆಳೆ ಸಮೃದ್ಧಿಯಾಗಿ ಬರುತ್ತದೆ ಎಂಬ ಒಂದು ನಂಬಿಕೆ.

ಈ ತಂತ್ರಜ್ಞಾನ ಯುಗದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿತ್ತು. ಸಂಬಂಧಗಳಿಗೇ ಒಬ್ಬರಿಗೊಬ್ಬರು ಸಮಯ ಕೊಡಲಾಗದೆ ಅದೇ ವಿಷಯಕ್ಕೆ ಪ್ರತಿನಿತ್ಯವು ಕಿತ್ತಾಟ ನಡೆಸುತ್ತಿದ್ದರು. ರಜೆ ಬಂದರೇ ಮನೆಯೊಳಗೆ ನಿಲ್ಲದ ಮಕ್ಕಳಿಂದಾಗಿ ಅಜ್ಜ-ಅಜ್ಜಿಯರಷ್ಟೇ ಮನೆ ಕಾಯೋಕೆ ಎಂಬಂತಾಗಿತ್ತು. ಎಲ್ಲರೂ ವಾರದಲ್ಲಿ ಒಂದು ದಿನವಾದರೂ ಒಟ್ಟಿಗೆ ಕುಳಿತು ಊಟ ಮಾಡೋಣ ಎಂದರೆ ಸಾಧ್ಯವಾಗುತ್ತಿರಲಿಲ್ಲ. ಕೆಲಸದ ನೆಪ ಹೇಳಿ ತಮ್ಮ ಊರು ಬಿಟ್ಟು ಬೇರೆ ಬೇರೆ ಕಡೆಗೆ ನೆಲೆಸಿದ್ದ ಜನರು ಹಬ್ಬ ಇದೆ ಬಂದು ಹೋಗ್ರೋಪ್ಪ ಎಂದು ಅವರ ತಂದೆ ತಾಯಿ ಹೇಳಿದರೆ, ನಮಗೆ ಇಲ್ಲಿ ಬಹಳಷ್ಟು ಕೆಲಸ ಇದೆ. ಬರೋಕೆ ಆಗಲ್ಲ ಅಂತ ನೇರವಾಗಿ ಹೇಳುತ್ತಿದ್ದರು.

ಆದರೆ ಕಳೆದ ವರ್ಷದ ಲಾಕ್‌ ಡೌನ್‌ ಆದ ಅನಂತರ ತಮ್ಮ ತಮ್ಮ ಕುಟುಂಬಗಳ ಜತೆ ಕಾಲ ಕಳೆಯುವಂತಾಯಿತು. ವರ್ಷಾನುಗಟ್ಟಲೆ ಊರಿಗೆ ಬಾರದ ಮಗನನ್ನು ನೆನೆದು ಅಳುತ್ತಿದ್ದ ಅಪ್ಪ-ಅಮ್ಮಂದಿರಿಗೆ ಹಳ್ಳಿಯ ಹಾದಿಯನ್ನು ಹಿಡಿದು ಬರುತ್ತಿದ್ದ ಮಗನನ್ನು ನೋಡಿ ತುಂಬಾ ಖುಷಿಯಾಯಿತು. ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಒಟ್ಟಿಗೆ ಸೇರಿ ಊಟ ಮಾಡುತ್ತಿದ್ದಾರೆ. ಒಂದು ವಿಷಯದ ಬಗ್ಗೆ ಮನೆಯವರು ಎಲ್ಲರೂ ಚರ್ಚಿಸುತ್ತಿದ್ದಾರೆ. ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳು ಜತೆ ಕಾಲ ಕಳೆಯುವ ಸೌಭಾಗ್ಯ ಸಿಕ್ಕಿತು. ಎಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸುವಂತಾಯಿತು.


ಸೌಭಾಗ್ಯ ಕುಂದಗೋಳ

ಎಸ್‌.ಜೆ. ಎಂ.ವಿ.ಎಸ್‌. ಮಹಾವಿದ್ಯಾಲಯ, ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next