Advertisement

ಜನಪ್ರತಿನಿಧಿಗಳೇ ಇತ್ತ ಚಿತ್ತ ಹರಿಸಿ

12:50 AM May 02, 2021 | Team Udayavani |

ಶತಮಾನಗಳ ಕಾಲ ಪರಕೀಯರ ಆಕ್ರಮಣ ಹಾಗೂ ಆಳ್ವಿಕೆಗಳಿಂದ ಭಾರತವು ಅಭಿವೃದ್ಧಿಯ ಪಥದಲ್ಲಿ ಬಹಳ ಹಿಂದುಳಿದಿತ್ತು. ಸಹಸ್ರಾರು ದೇಶ ಭಕ್ತ ಹೋರಾಟಗಾರರ ಹೋರಾಟದ ಫ‌ಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರಕಿತು. ವಿಶಿಷ್ಟ ಭೌಗೋಳಿಕ ಲಕ್ಷಣಗಳು, ಪ್ರಾಕೃತಿಕ ಸೌಂದರ್ಯ, ವಿಭಿನ್ನ ಆಚಾರ ವಿಚಾರ, ಸಂಪ್ರದಾಯದ ಜನಾಂಗ ಭಾರತದ ವೈಶಿಷ್ಟ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

Advertisement

ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ವಾದ ಭಾರತ ಯಥೇತ್ಛ ಮಾನವ ಸಂಪನ್ಮೂಲ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಆಗರವಾಗಿ ದ್ದರೂ ದೇಶದ ಅಭಿವೃದ್ಧಿಯ ಸೂಚ್ಯಂಕ ಇನ್ನೂ ಕುಂಟುತ್ತಾ ಸಾಗುತ್ತಿರುವುದು ನಮ್ಮ ದೌರ್ಭಾ ಗ್ಯವೇ ಸರಿ. ಅಮೃತ ಮಹೋತ್ಸವದ ಸಂಭ್ರಮ ದಲ್ಲಿರುವ ಸ್ವತಂತ್ರ ಭಾರತವು ಪ್ರಜಾಪ್ರಭುತ್ವ ಮಾದರಿಯ ಸರಕಾರವನ್ನು ಅಳವಡಿಸಿ ಕೊಂಡು ಏಳು ದಶಕಗಳೇ ಕಳೆದವು. ಆದರೆ ಪ್ರಜಾಪ್ರಭುತ್ವದ ಮೂಲ ಆಶಯ, ತಣ್ತೀ, ಆಚರಣೆ, ನಿಷ್ಠೆಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ನಾವು ಸೋತಿದ್ದೇವೆ ಎನ್ನುವುದು ಬೇಸರದ ಮತ್ತು ಒಂದಿಷ್ಟು ಚಿಂತೆಗೀಡುವ ಮಾಡುವ ವಿಷಯ.

ಸುಖ, ನೆಮ್ಮದಿ, ಆರೋಗ್ಯಯುತವಾದ ಜೀವನಕ್ಕಾಗಿ ಜನರು ತಮ್ಮ ಪ್ರತಿನಿಧಿಗಳನ್ನು ಚುನಾವಣೆಯ ಮೂಲಕ ಆಯ್ಕೆ ಮಾಡುವ ಪರಿಕಲ್ಪನೆ ಪ್ರಜಾ ಪ್ರಭುತ್ವದ ಶ್ರೇಷ್ಠತೆಯನ್ನು ಸಾರುತ್ತದೆ. ಸ್ವಸ್ಥ ಸಮಾಜದ ನಿರ್ಮಾಣ, ಸಮಾಜದ ಸ್ವಾಸ್ಥ್ಯ ಕಾಪಾಡುವ ಕಾರ್ಯ ನಮ್ಮ ಜನಪ್ರತಿನಿಧಿಗಳ ಧ್ಯೇಯವಾಗಿರಬೇಕೆಂಬುದು ನಮ್ಮ ಸಂವಿಧಾನದ, ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ಆದರೆ ಇಂದು ಭ್ರಷ್ಟ ವ್ಯವಸ್ಥೆ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮನೋಭಾವದಿಂದ ಜನರು ಪಡಬಾರದ ಕಷ್ಟವನ್ನು ಪಡುತ್ತಿದ್ದಾರೆ.

ಭ್ರಷ್ಟಾಚಾರ, ಅಧಿಕಾರ ಲಾಲಸೆ, ಸ್ವಧರ್ಮ, ಸ್ವಜಾತಿ ಪ್ರೇಮ, ಸ್ವಾರ್ಥ, ಸ್ವ ಹಿತಾಸಕ್ತಿಯಿಂದಾಗಿ ಪ್ರಜೆಗಳ ಕಲ್ಯಾಣದ ಕನಸು ನನಸಾಗದೆ ಹಾಗೆಯೇ ಉಳಿದಿದೆ. ಸಾತಂತ್ರ್ಯ ದೊರೆತು ಏಳೂವರೆ ದಶಕಗಳು ಕಳೆದರೂ ಸಾಮಾನ್ಯ ಜನರಿಗೆ ಬೇಕಾದ ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡಲು ನಮ್ಮ ಜನಪ್ರತಿನಿಧಿಗಳು ಸೋತಿರುವುದು ಸೋಜಿಗವೇ ಸರಿ. ಒಬ್ಬ ಜನಪ್ರತಿನಿಧಿ ಮನಸ್ಸು ಮಾಡಿದರೆ ತನ್ನ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವುದು ದೊಡ್ಡ ಕೆಲಸವೇನಲ್ಲ. ಆದರೆ ಇದಕ್ಕೆ ಇಚ್ಚಾ ಶಕ್ತಿ ಆವಶ್ಯಕವಾಗಿದೆ. ಅದರಲ್ಲೂ ಪ್ರವಾಹ, ಚಂಡಮಾರುತ, ಭೂಕಂಪ, ಮಹಾಮಾರಿ ಸಾಂಕ್ರಾಮಿಕ ರೋಗಗಳಿಂದ ಜನರು ಬಳಲುತ್ತಿರುವಾಗ ಕಾಯಾ-ವಾಚಾ-ಮನಸ್ಸಿನಿಂದ ತನು-ಮನ-ಧನವನ್ನು ಜನತಾ ಜನಾರ್ದನರಿಗೆ ಅರ್ಪಿಸಿದರೆ ಸಮಾಜ ಹಾಗೂ ಜನರ ದೃಷ್ಟಿಯಲ್ಲಿ ಜನಪ್ರತಿನಿಧಿಗಳು ದೇವರಾಗುತ್ತಾರೆ.

ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಹಗಲಿರುಳು ಸಂಚರಿಸಿ, ಜನರಿಗೆ ರೋಗದ ಕುರಿತು ಅರಿವು, ರೋಗ ಬಾರದಂತೆ ತಡೆಯಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಬೇಕಾಗಿದೆ. ಚುನಾವಣ ಸಮಯದಲ್ಲಿ ತಮ್ಮ ಕಾರ್ಯಕರ್ತರ ಪಡೆಯೊಂದಿಗೆ ಮತ ಬೇಟೆಗಾಗಿ ದುಡಿಯುವಂತೆ, ಈ ವೇಳೆಯಲ್ಲಿ ಕ್ಷೇತ್ರದ ಪ್ರತಿಯೊಂದು ಮನೆ ಬಾಗಿಲಿಗೆ ಹೋಗಿ ಜನರ ಕಷ್ಟ, ದುಃಖ, ದುಮ್ಮಾನಗಳನ್ನು ವಿಚಾರಿಸಿ, ಪರಿಹಾರದ ಮಾರ್ಗವನ್ನು ತೋರಿಸಬೇಕಿದೆ. ಕೆಲಸವಿಲ್ಲದೆ ದೈನಂದಿನ ಜೀವನ ನಿರ್ವಹಣೆಯೇ ಕಷ್ಟಸಾಧ್ಯ ಎಂಬ ಸ್ಥಿತಿಯಲ್ಲಿರುವ ಅದೆಷ್ಟೋ ಕಡುಬಡವರ ಸಂಕಷ್ಟಕ್ಕೆ ಒಂದಿಷ್ಟು ಸ್ಪಂದನೆ, ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವುದು, ಆಸ್ಪತ್ರೆಗಳಲ್ಲಿ ಸದಾ ವೈದ್ಯರು ಲಭ್ಯರಿರುವಂತೆ ನೋಡಿಕೊಳ್ಳುವುದು ಅವಶ್ಯ. ಕ್ಷೇತ್ರಕ್ಕೆ ಒಳಪಟ್ಟ ತಾಲೂಕು ಕೇಂದ್ರಗಳಲ್ಲಿ ಕೋವಿಡ್‌ ಕುರಿತಾದ ಸಹಾಯವಾಣಿ ಹಾಗೂ ಮಾಹಿತಿ ಕೇಂದ್ರಗಳನ್ನು ತರೆಯುವ ಕೆಲಸ ತುರ್ತಾಗಿ ಆಗಬೇಕಿದೆ. ಲಸಿಕೆ, ದೊರಕುವ ಸ್ಥಳ, ಪಡೆದುಕೊಳ್ಳುವ ರೀತಿ ಇವುಗಳ ಬಗ್ಗೆ ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ಮೊದಲು ಕೈಗೊಳ್ಳಬೇಕು.

Advertisement

ಸಮಾಜದಲ್ಲಿ ಸಂಕಷ್ಟಕ್ಕೆ ಒಳಗಾಗಿರುವವರ ಸಹಾಯಕ್ಕೆ ಜನಪ್ರತಿನಿಧಿಗಳು ಧಾವಿಸಿಬರಬೇಕಾಗಿರುವುದು ಜನಪ್ರತಿನಿಧಿಗಳ ಜವಾಬ್ದಾರಿ. ಜನಪ್ರತಿನಿಧಿಗಳು ಜನರ ಸೇವಕರು, ಜನತಾ ಸೇವೆಯೇ ಇವರ ಕಾಯಕ.

ಕೊರೊನಾದಿಂದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಬದುಕು ಮೂರಾಬಟ್ಟೆಯಾಗಿದೆ. ಕೋವಿಡ್‌ನಿಂದಾಗಿ ಸಾವನ್ನಪ್ಪಿದವರ ಶವಗಳಿಗೆ ಸರಿಯಾಗಿ ಸಂಸ್ಕಾರ ಕರ್ಮವನ್ನು ಮಾಡಲು ಆಗದ ದುಃಸ್ಥಿತಿ ಏರ್ಪಟ್ಟಿರುವಾಗ ಜನಪ್ರತಿನಿಧಿಗಳು ಅಂತಹ ಕುಟುಂಬಗಳ ನೆರವಿಗೆ ಧಾವಿಸಬೇಕಿದೆ. ನೊಂದು ಜೀವಗಳಿಗೆ ಕನಿಷ್ಠ ಮನೋಸ್ಥೈರ್ಯವನ್ನಾದರೂ ತುಂಬುವ ಕಾರ್ಯ ಜನಪ್ರತಿನಿಧಿಗಳಿಂದಾಗಲಿ. ಜಾತಿ, ಧರ್ಮ, ಸ್ವಾರ್ಥ, ಲಾಲಸೆ ಬಿಟ್ಟು, ಮನು ಕುಲದ ಹಿತಕ್ಕಾಗಿ ಒಂದಿಷ್ಟು ಸೇವಾ ಮನೋಭಾವ

ದಿಂದ ಶ್ರಮಿಸಬೇಕು. ಜನರ ತೆರಿಗೆಯಿಂದ ಸಂಗ್ರಹಗೊಂಡ ಸರಕಾರದ ಖಜಾನೆಯ ಹಣ ವ್ಯರ್ಥವಾಗಿ ಪೋಲಾಗುವುದನ್ನು ತಪ್ಪಿಸಿ, ಹಸಿದವರ ಹಸಿವನ್ನು ಇಂಗಿಸಲು, ಬಡವರ ಬದುಕಿನ ಬವಣೆ ಯನ್ನು ನೀಗಿಸಲು ಇದು ಬಳಕೆಯಾಗಲಿ. ಕೊರೊ ನಾದಿಂದ ಜನರನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿ ಕೊಳ್ಳಬೇಕು. ಸೇವಾ ಕೈಂಕರ್ಯ ಜನಪ್ರತಿನಿಧಿಗಳ ಜವಾಬ್ದಾರಿ. ಜೀವವಿದ್ದರೆ ಜೀವನ. ಉಸಿರಿದ್ದರೆ ಹೆಸರು, ಕೀರ್ತಿ. ಪ್ರಾಣವಿದ್ದರೆ ದೇಹದಲ್ಲಿ ತ್ರಾಣ. ಪ್ರತಿಯೊಂದು ಜೀವವು ಅಮೂಲ್ಯವಾದದ್ದು ಎಂಬುದನ್ನು ಮರೆಯಬಾರದು.

ಪ್ರಸ್ತುತ ಸನ್ನಿವೇಶದಲ್ಲಿ ದೇಶ ಮತ್ತು ರಾಜ್ಯದ ಜನರನ್ನು ಮಾರಿಯ ರೂಪದಲ್ಲಿ ಕೊರೊನಾವೆಂಬ ಕ್ರೂರ ಕಾಯಿಲೆಯು ಕಾಡುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಜನರ ಜೀವ ಹಾಗೂ ಜೀವನವನ್ನು ಸಂರಕ್ಷಿಸುವಲ್ಲಿ ಜನಪ್ರತಿನಿಧಿಗಳ ಪಾತ್ರ ಬಹಳ ಪ್ರಾಮುಖ್ಯವಾದುದಾಗಿದೆ.

ರಾಘವೇಂದ್ರ ದುರ್ಗ ಬಿಲ್ಲವ, ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next