ಉಡುಪಿ: ಕಡತ ಬದಲಾವಣೆಯಿಂದ ಅಥವಾ ಪಠ್ಯಕ್ರಮದ ಮಾರ್ಪಾಡಿನಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲವೂ ಬದಲಾಗಲಿದೆ ಎಂದಿಲ್ಲ. ವಿದ್ಯಾರ್ಥಿಗಳು ಶಿಕ್ಷಕ/ ಪ್ರಾಧ್ಯಾಪಕರ ಮನ ಗೆಲ್ಲಬೇಕು, ಪ್ರಾಧ್ಯಾಪಕರ ಅಧ್ಯಯನ ಶೀಲತೆಯ ಯುವ ಮನಸ್ಸಿನಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಮಂಗಳೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ| ಪಿ.ಎಲ್. ಧರ್ಮ ಹೇಳಿದರು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಬುಧವಾರ ಜರಗಿದ ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಪದಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಂಜಿಎಂ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯದಲ್ಲೇ ದೊಡ್ಡ ಹೆಸರು ಮಾಡಿದೆ. ಕೊರೊನಾ ಸಂದರ್ಭದಲ್ಲಿ ಮೌಲ್ಯಮಾಪನ ಕೇಂದ್ರ ತೆರೆದು ಮಾದರಿಕಾರ್ಯ ನಿರ್ವಹಿಸಿದೆ. ವಿಶ್ವವಿದ್ಯಾನಿಲಯಕ್ಕೆ ಸಾಕಷ್ಟು ಕೊಡುಗೆ ನೀಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.
ಪ್ರಾಧ್ಯಾಪಕರು ಸದಾ ಅಧ್ಯಯನ ಶೀಲರಾಗಬೇಕು. ವಿದ್ಯಾರ್ಥಿಗಳಿಗೆ ನಿರಂತರ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ಇಲ್ಲದೇ ಗುರು ಇರಲು ಸಾಧ್ಯವೇ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಶಾಲಾ ಕಾಲೇಜುಗಳು ಅಣಬೆಯಂತೆ ಹುಟ್ಟಿಕೊಳ್ಳುತ್ತಿವೆ ಮತ್ತು ಗುಣಮಟ್ಟವೂ ಯೋಚಿಸುವ ಸ್ಥಿತಿಗೆ ಬಂದಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಸಮಾಜಕ್ಕೆ ಉತ್ತಮ ಶಿಕ್ಷಕರ ಅಗತ್ಯ ಹೆಚ್ಚಿದ್ದು, ವಿದ್ಯಾರ್ಥಿಗಳು ಶಿಕ್ಷಕ ವೃತ್ತಿಯನ್ನು ಹೆಚ್ಚೆಚ್ಚು ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಅಕಾಡೆಮಿ ಆಫ್ ಜನರಲ್ ಎಜುಕೇಶನ್(ಎಜಿಇ) ಕಾರ್ಯದರ್ಶಿ ವರದರಾಯ ಪೈ, ಶ್ರೀ ಮೋಹನ್‌ದಾಸ್ ಪೈ ಕೌಶಲಾಭಿವೃದ್ಧಿ ಕೇಂದ್ರದ ನಿರ್ದೇಶಕ ಟಿ.ರಂಗ ಪೈ ಶುಭ ಹಾರೈಸಿದರು. ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ| ಅರುಣ್ ಕುಮಾರ್ ಬಿ. ಪ್ರತಿಜ್ಞಾವಿಧಿ ಬೋಧಿಸಿದರು.
ಸಂಧ್ಯಾ ಕಾಲೇಜಿನ ಪ್ರಾಂಶುಪಾಲ ಡಾ| ದೇವಿದಾಸ್ ನಾಯ್ಕ, ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿಯ ಲಿಖೀತಾ ಪೂಜಾರಿ, ನಿಶಾಂತ್ ಕುಮಾರ್, ಟಿ. ನಿವೇದಿತಾ ಪೈ., ಆದಿತ್ಯ ಕೆ.ವಿ., ನಿಹನ್ ಅಲೀ ಬಾರಕೂರು, ಪೃಥ್ವಿ ಎಂ., ಗೌರಿ ನಾಯಕ್, ಪ್ರಥಮ್ ಶಂಭು, ಜೋಸ್ನಾ ಎಸ್. ಜಾನ್, ದಿನೇಶ್ ಶೆಟ್ಟಿ, ಸೌಂದರ್ಯ ಬಿ.ಎನ್., ಉಪಸ್ಥಿತ ರಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಮಂಡಳಿ ಅಧ್ಯಕ್ಷ ಗಣೇಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅನ್ವಿತಾ ಎಂ. ತಂತ್ರಿ ವಂದಿಸಿ, ವಿನಿತಾ ಅತಿಥಿಗಳನ್ನು ಪರಿಚಯಿಸಿ, ನಿವೇದಿತಾ ಪೈ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳ ಪಟ್ಟಿ ವಾಚಿಸಿದರು. ದೀಕ್ಷಾ ನಿರೂಪಿಸಿದರು.