Advertisement

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

12:26 AM Nov 09, 2024 | Team Udayavani |

ಬೆಂಗಳೂರು: ಬೊಕ್ಕಸ ಭರಿಸಲು ಆದಾಯ ಮೂಲಗಳನ್ನು ಹುಡುಕುತ್ತಿರುವ ರಾಜ್ಯ ಸರಕಾರವು ಅರಣ್ಯ ಪ್ರದೇಶದಲ್ಲಿ ಗಣಿ ಚಟುವಟಿಕೆಗೆ ದಿನದ 24 ತಾಸು ಮುಕ್ತ ಅವಕಾಶ ನೀಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಕರ್ನಾಟಕ ಅರಣ್ಯಕಾಯ್ದೆ-1963ಕ್ಕೆ ಕೆಲವು ತಿದ್ದುಪಡಿ ಗಳನ್ನು ತರಲು ಮುಂದಾಗಿದ್ದು, ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಅನಂತರ ಈ ಸಂಬಂಧ ಪ್ರಸ್ತಾವನೆಯೊಂದನ್ನು ಸಚಿವ ಸಂಪುಟ ಸಭೆಯ ಮುಂದೆ ಮಂಡಿಸಲು ತಯಾರಿ ನಡೆದಿದೆ. ಅಲ್ಲದೆ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನವೆಂದು ಪರಿಗಣಿಸಬಾರದೆಂದೂ ತಿದ್ದುಪಡಿ ಪ್ರಸ್ತಾವನೆ ಸಿದ್ಧಗೊಳ್ಳುತ್ತಿದೆ. ಇತ್ತೀಚೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ್ದ ಸಿಎಂ, ನಿರೀಕ್ಷಿತ ಆದಾಯ ಸಂಗ್ರಹ ಆಗದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

Advertisement

2023ಕ್ಕೆ ಹೋಲಿಸಿದರೆ ಈ ಬಾರಿ ಶೇ. 8ರಷ್ಟು ಸಂಗ್ರಹ ಕಡಿಮೆಯಾಗಿದ್ದು, ಆದಾಯ ಹೆಚ್ಚಳಕ್ಕೆ ಗಮನ ಹರಿಸುವಂತೆ ಸೂಚಿಸಿದ್ದರು.ಅರಣ್ಯ ಇಲಾಖೆಯ ಅಡೆತಡೆಗಳಿಂದಲೇ ರಾಜಸ್ವ ಸಂಗ್ರಹ ಕಡಿಮೆ ಆಗುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ದೂರಿತ್ತು. ಇದನ್ನು ಪರಿಗಣಿಸಿದ್ದ ಸಿಎಂ, ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾದರೆ ಸಹಿಸುವುದಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೆಲಸ ಮಾಡಿ. ಯಾವುದಾದರೂ ನಿಯಮ ಉಲ್ಲಂಘನೆ ಆದರೆ ಮಾತ್ರ ನೀವು ಕ್ರಮ ಕೈಗೊಳ್ಳಬೇಕು. ವೃಥಾ ಅಡ್ಡಿಗಳನ್ನು ತಂದೊಡ್ಡಬಾರದು ಎಂದು ತಾಕೀತು ಮಾಡಿದ್ದರು.

ವನ್ಯಜೀವಿಧಾಮ, ಜೀವವೈವಿಧ್ಯಕ್ಕಿಲ್ಲ ಧಕ್ಕೆ
ಇದರ ಬೆನ್ನಲ್ಲೇ ವನ್ಯಜೀವಿಧಾಮ ಹಾಗೂ ಜೀವವೈವಿಧ್ಯ ವಲಯಗಳನ್ನು ಹೊರತುಪಡಿಸಿ ಉಳಿದ ಅರಣ್ಯ ಪ್ರದೇಶಗಳಲ್ಲಿ ಗಣಿ ಚಟುವಟಿಕೆಯನ್ನು ನಿರಂತರವಾಗಿ ನಡೆಸಲು ಅನುಮತಿ ನೀಡಬಹುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಕೂಡ ಅಭಿಪ್ರಾಯಪಟ್ಟಿದ್ದರು. ಅದರಂತೆ ಅರಣ್ಯ ಕಾಯ್ದೆಗೆ ಅಗತ್ಯ ತಿದ್ದುಪಡಿಗಳೊಂದಿಗೆ ಸಚಿವ ಸಂಪುಟ ಸಭೆಯ ಮುಂದೆ ಪ್ರಸ್ತಾವನೆ ಮಂಡಿಸುವಂತೆ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ (ಗಣಿ) ಇಲಾಖೆಯ ಕಾರ್ಯದರ್ಶಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಟಿಪ್ಪಣಿ ರವಾನಿಸಿದ್ದರು

ಪರಿಸರ ಪ್ರೇಮಿಗಳಿಂದ ವಿರೋಧ
ಒಂದೆಡೆ ಬಳ್ಳಾರಿ, ತುಮಕೂರು, ಚಿತ್ರದುರ್ಗ ಸಹಿತ ಹಲವೆಡೆ ಗಣಿ ಚಟುವಟಿಕೆಗಳಿಂದ ನಾಲ್ಕು ಸಾವಿರ ಎಕರೆಗೂ ಅಧಿಕ ಪ್ರಮಾಣದ ಅರಣ್ಯ ನಾಶವಾಗಿದೆ ಎಂಬ ವರದಿ ಇದೆ. ಇನ್ನೊಂದೆಡೆ ಬೆಂಗಳೂರಿನ ಪೀಣ್ಯ ಪ್ಲಾಂಟೇಶನ್‌ನಲ್ಲಿರುವ ಕೇಂದ್ರ ಸರಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆಯ ಜಾಗವು ಅರಣ್ಯ ಇಲಾಖೆಗೆ ಸೇರಿದ್ದು ಎಂಬ ಹಕ್ಕು ಪ್ರತಿಪಾದನೆಯನ್ನು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಮಾಡುತ್ತಿದ್ದಾರೆ. ಸಾಲದ್ದಕ್ಕೆ ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯು ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿ ಚಟುವಟಿಕೆ ನಡೆಸಲು ಬಿಡುವುದಿಲ್ಲ ಎಂದು ಅರಣ್ಯ ಸಚಿವ ಖಂಡ್ರೆ ಕಡ್ಡಿ ತುಂಡಾದಂತೆ ಹೇಳಿದ್ದಾರೆ. ಇವೆಲ್ಲವುಗಳ ನಡುವೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಯಾಕೆ ಗಣಿಗಾರಿಕೆಗೆ ಅನುಮತಿ?
-ರಾಜ್ಯದ ಬೊಕ್ಕಸ ಭರಿಸಲುಪರ್ಯಾಯ ಆದಾಯ ಮೂಲಗಳನ್ನು ಹುಡುಕುತ್ತಿರುವ ಸರಕಾರ
-ಮುಖ್ಯಮಂತ್ರಿಯಿಂದ ಇತ್ತೀಚೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಪ್ರಗತಿ ಪರಿಶೀಲನೆ
-ನಿರೀಕ್ಷಿತ ಅದಾಯ ಸಂಗ್ರಹವಾಗದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಸಮಾಧಾನ
-ಅರಣ್ಯ ಇಲಾಖೆ ಅಡ್ಡಿಯಿಂದ ರಾಜಸ್ವ ಸಂಗ್ರಹ ಕಡಿಮೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ದೂರು
-ಈ ಹಿನ್ನೆಲೆಯಲ್ಲಿ ಕಬ್ಬಿಣದ ಅದಿರನ್ನು ಅರಣ್ಯ ಉತ್ಪನ್ನ ವ್ಯಾಪ್ತಿಯಿಂದ ಹೊರಗಿಡಲು ಕಾಯ್ದೆಗೆ ತಿದ್ದುಪಡಿ ತರಲು ಸಿದ್ಧತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next