ಮಸ್ಕಿ: ಸ್ಥಳೀಯ ವಾಹನ ಸವಾರರು ಸುಗಮವಾಗಿ ಓಡಾಡಲು ಅನುಕೂಲವಾಗಲೆಂದು ಸರ್ಕಾರ ಕೋಟ್ಯಾಂತರ ರೂ. ವ್ಯಯಿಸಿ ಡಿವೈಡರ್, ಚರಂಡಿ ಹಾಗೂ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ. ಆದರೆ ಬಸ್ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು, ಆಟೋ, ಟಂಟಂ, ಟ್ಯಾಕ್ಸಿಗಳು ಅಡ್ಡಾದಿಡ್ಡಿಯಾಗಿ ನಿಲ್ಲಿಸಿರುವುದರಿಂದ ವಾಹನ ಸವಾರರು, ಪಾದಚಾರಿಗಳು ಸುಗಮವಾಗಿ ಓಡಾಡಲು ಕಿರಿಕಿರಿ ಉಂಟಾಗುತ್ತಿದೆ.
ಪಟ್ಟಣದ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 150ಎ ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಸುಮಾರು ರೂ.10 ಕೋಟಿ ವೆಚ್ಚದಲ್ಲಿ ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ 2 ಬದಿಯಲ್ಲಿ ಸರ್ವಿಸ್ ರಸ್ತೆ ಮಾಡಲಾಗುತ್ತಿದೆ. ರಸ್ತೆ ನಿರ್ಮಿಸಲು ಮುಂಚಿತವಾಗಿ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಬೇಕಾದ ಅಗತ್ಯ ಸಿದ್ದತೆ ಕೈಗೊಳ್ಳದೇ ಇರುವುದರಿಂದ ಎಡವಟ್ಟಾಗಿದ್ದು ಜನರಿಗೆ ತಲೆ ನೋವಾಗಿ ಪರಿಣಿಮಿಸಿದೆ.
ರಸ್ತೆಯಲ್ಲೇ ಪಾರ್ಕಿಂಗ್: ಪಟ್ಟಣದ ಜನತೆ ಸುಗಮವಾಗಿ ಓಡಾಡಲು ಹೆದ್ದಾರಿಯ ಎರಡು ಬದಿಯಲ್ಲಿ ಸರ್ವಿಸ್ ರಸ್ತೆ ನಿರ್ಮಿಸಲಾಗಿದ್ದು, ಆದರೆ ಪಟ್ಟಣಕ್ಕೆ ಬರುವ ಜನರು ಹಾಗೂ ವಿವಿಧ ಕೆಲಸಕ್ಕೆ ಅಂಗಡಿಗಳಿಗೆ ಬರುವ ಜನರು ಸರ್ವಿಸ್ ರಸ್ತೆಯಲ್ಲೇ ವಾಹನ ನಿಲುಗಡೆ ಮಾಡುತ್ತಿದ್ದು, ಹಳೆ ಬಸ್ ನಿಲ್ದಾಣದ ಬಳಿ ವಾಹನ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಗಡಗಿ ಖಾನಾವಳಿಗೆ ಜನರು ಊಟಕ್ಕೆ ತೆರಳಿದರೆ ತಾಸು ಗಟ್ಟಲೇ ಜನರು ಪರದಾಡುವಂತಾಗಿದೆ.
ಅಶೋಕ ವೃತ್ತ, ಹಳೇ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಸಾರ್ವಜನಿಕರು ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು, ಇನ್ನೂ ವಾಲ್ಮೀಕಿ ವೃತ್ತದ ಬಳಿ ಜಾಗದ ಮಾಲೀಕರೊಬ್ಬರು ಹೈಕೋರ್ಟ್‌ನಿಂದ ತಡೆ ತಂದಿರುವುದರಿಂದ ಬಳಗನೂರು ರಸ್ತೆಯ ಕಡೆ ಸರ್ವಿಸ್ ರಸ್ತೆ ಇನ್ನೂ ಆಗಿಲ್ಲ. ಅ.20 ರಂದು ಹೈಕೋರ್ಟ್ ನಲ್ಲಿ ವಿಚಾರಣೆ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎನ್ನಲಾಗಿದೆ.
ಕಣ್ಮುಚ್ಚಿ ಕುಳಿತ ಅಧಿಕಾರಿಗಳು: ಡಿವೈಡರ್ ಕಾಮಗಾರಿ ಮುಗಿಸಿ ಜನರಿಗೆ ಅನುಕೂಲ ಕಲ್ಪಿಸಬೇಕಿರುವ ಅಧಿಕಾರಿಗಳು ಯಾವುದೇ ರೀತಿ ಕ್ರಮ ಕೈಗೊಳ್ಳದ್ದರಿಂದ ಡಿವೈಡರ್, ಸರ್ವಿಸ್ ರಸ್ತೆ ಕಾಮಗಾರಿ ವಿಳಂಬವಾಗಿದೆ. ರಸ್ತೆ ಕಾಮಗಾರಿ ಕೈಗೊಳ್ಳುವುದಕ್ಕೆ ವಿದ್ಯುತ್ ಕಂಬಗಳು ಹಾಗೂ ಪ್ರಮುಖ ವೃತ್ತಗಳಲ್ಲಿನ ಪ್ರತಿಮೆ ತೆರವುಗೊಳಿಸಬೇಕು. ಸರ್ವಿಸ್ ರಸ್ತೆಗೆ ಅಂಟಿಕೊಂಡಿರುವ ಕೆಲ ಕಟ್ಟಡಗಳನ್ನು ತೆರವುಗೊಳಿಸಬೇಕು. ಇದ್ಯಾವುದನ್ನೂ ಮಾಡದೇ ಹೆದ್ದಾರಿ ಪ್ರಾಧಿಕಾರಿಗಳು ವಿನಾಃಕಾರಣ ವಿಳಂಬ ಮಾಡುತ್ತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
ವಿಳಂಬವಾಗುತ್ತಿರುವ ಕಾಮಗಾರಿಯನ್ನು ಬೇಗನೆ ಮುಗಿಸಬೇಕು. ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸುತ್ತಿರುವ ವಾಹನಗಳಿಗೆ ಕಡಿವಾಣ ಹಾಕಬೇಕು. ಆಟೋ ಹಾಗೂ ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಸ್ಕಿ ಪಟ್ಟಣದ ಡಿವೈಡರ್, ಸರ್ವಿಸ್ ರಸ್ತೆ ಕಾಮಗಾರಿಯ ಸಂಬಂಧ ಜಾಗದ ಮಾಲೀಕರೊಬ್ಬರು ಹೈಕೋರ್ಟ್‌ನಿಂದ ಸ್ಟೇ ತಂದಿದ್ದರಿಂದ ಕಾಮಗಾರಿ ವಿಳಂಬವಾಗಿದೆ. ಅ.20 ರಂದು ಹೈಕೋರ್ಟಿನಲ್ಲಿ ಸ್ಟೇ ವಿಚಾರಣೆ ಮುಗಿದ ಬಳಿಕ ಪುರಸಭೆಯವರು ಪೊಲೀಸ್ ಇಲಾಖೆ ಸಹಕಾರದಿಂದ ರಸ್ತೆ ಮೇಲಿನ ಕಟ್ಟಡ ತೆರವುಗೊಳಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ. ನಂತರ ಕಾಮಗಾರಿ ತ್ವರಿತ ಗತಿಯಲ್ಲಿ ಮುಗಿಸಲಾಗುವುದು. – ಭೀಮನಗೌಡ ಬೀರದಾರ, ಎಇಇ, ಹೆದ್ದಾರಿ ಪ್ರಾಧಿಕಾರ ಹುನಗುಂದ.