ರಾಯಚೂರು: ಹಿಂಗಾರು ಬಿತ್ತನೆ ಮಾಡಿದ ಕೆಳಭಾಗದ ರೈತರಿಗೆ ಪ್ರತಿ ವರ್ಷ ಸಮಸ್ಯೆ ಎದುರಾಗುತ್ತಲೇ ಇದ್ದು, ಅಧಿಕಾರಿಗಳ ಸಮನ್ವಯ ಕೊರತೆಯಿಂದ ರೈತರು ಕಣ್ಣೀರು ಹಾಕುವಂತಾಗಿದೆ. 69 ಮೈಲ್‌ನಿಂದ ಕೆಳಭಾಗದ ರೈತರಿಗೆ ನಿರೀಕ್ಷಿತ ನೀರು ಸಿಗದೆ ಪರದಾಡುವಂತಾಗಿದೆ. ಈಚೆಗೆ ನಡೆದ ಐಸಿಸಿ ಸಭೆಯಲ್ಲಿ ನಿರ್ಧರಿಸಿದಂತೆ ನಿತ್ಯ 3300 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಮಾ.31ರವರೆಗೆ ನೀರು ಹರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವುದು ಡಿಬಿ ಡ್ಯಾಂ ಅಧಿ ಕಾರಿಗಳ ಭರವಸೆ. ಆದರೆ, ಮೇಲ್ಭಾಗದಲ್ಲಿ ಸಿಗುವಷ್ಟು ನೀರು ಕೆಳಭಾಗಕ್ಕೆ ತಲುಪುತ್ತಿಲ್ಲ. ಗೇಜ್ ನಿರ್ವಹಣೆಯಲ್ಲಿ ಅ ಧಿಕಾರಿಗಳ ನಿರ್ಲಕ್ಷé ರೈತರನ್ನು ಸಂಕಷ್ಟಕ್ಕೆ ದೂಡಿದೆ. ಗಂಗಾವತಿ, ಸಿಂಧನೂರು ಭಾಗದ ರೈತರಿಗೆ ಸಿಕ್ಕಷ್ಟು ನೀರು ನಮಗೆ ಸಿಗುತ್ತಿಲ್ಲ ಎನ್ನುವುದು ಟೆಲೆಂಡ್ ರೈತರ ಆರೋಪ.
ಗೇಜ್ ನಿರ್ವಹಣೆ ಯಡವಟ್ಟು: ಇದು ಪ್ರತಿ ವರ್ಷ ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆ. ಆದರೂ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಮುನ್ನೆಚ್ಚರಿಕೆ ವಹಿಸದಿರುವುದು ವಿಪರ್ಯಾಸ. ರೈತರು ಬೇಸಿಗೆ ಬೆಳೆ ನಂಬಿಕೊಂಡು ಭತ್ತ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆ ನಾಟಿ ಮಾಡಿದ್ದಾರೆ. ಭತ್ತಕ್ಕೆ ಈಗ ನೀರು ಅತ್ಯವಶ್ಯಕ.ಎಕರೆಗೆ ಸಾವಿರಾರು ರೂ. ಖರ್ಚು ಮಾಡಿರುವ ರೈತರಿಗೆ ಸಕಾಲಕ್ಕೆ ನೀರು ಸಿಗದಿದ್ದಲ್ಲಿ ಭಾರೀ ನಷ್ಟಕ್ಕೀಡಾಗುತ್ತಾರೆ.
ಆದರೆ, 67 ಮೈಲ್‌ನಿಂದ ಕೆಳಭಾಗಕ್ಕೆ 600 ಕ್ಯೂಸೆಕ್ ನೀರು ಮಾತ್ರ ಹರಿಯುತ್ತಿದ್ದು, 300 ಕ್ಯೂಸೆಕ್ ಕೊರತೆ ಆಗುತ್ತಿದೆ. ಮುಂಗಾರು ಬೆಳೆಗೆ 4,200 ಕ್ಯೂಸೆಕ್ ನೀರು ಹರಿಸಲಾಗುತ್ತದೆ. ಆದರೆ, ಹಿಂಗಾರಿಗೆ ನೀರಿನ ಕೊರತೆ ಇರುವ ಕಾರಣ ನಿತ್ಯ 3300 ಕ್ಯೂಸೆಕ್ ಮಾತ್ರ ಹರಿಸಲಾಗುತ್ತಿದೆ. ಆ ನೀರು ಕೊನೆ ಭಾಗಕ್ಕೆ ತಲುಪುವ ಹೊತ್ತಿಗೆ ಕನಿಷ್ಟ 900 ಕ್ಯೂಸೆಕ್ ಹರಿಯಬೇಕು. ಆದರೆ, 67 ಮೈಲ್‌ಗಿಂತ ಮುಂಚೆಯೇ ಅದು 600 ಕ್ಯೂಸೆಕ್ ತಲುಪುತ್ತಿದೆ. ಇದರಿಂದ ಕೊನೆ ಭಾಗಕ್ಕೆ ನೀರು ಬರುವುದೇ ದುಸ್ಸಾಹಸ ಎನ್ನುವಂತಾಗಿದೆ.
ಭದ್ರಾ ನೀರು ಬರುವುದು ಡೌಟು..!: ಭದ್ರಾ ಜಲಾಶಯದಿಂದ ಆರು ಟಿಎಂಸಿ ನೀರು ಬಿಡುವಂತೆ ಟಿಬಿ ಬೋರ್ಡ್‌ನಿಂದ ಪತ್ರ ವ್ಯವಹಾರ ನಡೆಸಲಾಗಿದೆ. ಅಲ್ಲದೇ, ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕೂಡ ಈ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೆ, ಮೂಲಗಳ ಮಾಹಿತಿ ಪ್ರಕಾರ ಭದ್ರಾ ಭಾಗದ ರೈತರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಅಲ್ಲಿಂದ ಹೆಚ್ಚುವರಿ ನೀರು ಬರುವುದು ಅನುಮಾನ ಎನ್ನಲಾಗುತ್ತಿದೆ.
ಈಗ ತುಂಗಭದ್ರಾ ಜಲಾಶಯದಲ್ಲಿ 22 ಟಿಎಂಸಿ ನೀರು ಲಭ್ಯವಿದ್ದು, ಲಾಸ್ ಕಳೆದರೆ 18 ಟಿಎಂಸಿ ಉಳಿಯಲಿದೆ. ಅದರಲ್ಲಿ ಮಾ.31ರವರೆಗೆ ಕೊಟ್ಟ ಭರವಸೆಯಂತೆ 3300 ಕ್ಯೂಸೆಕ್ ಹರಿಸಬಹುದು. ಅದಕ್ಕೂ ಮೀರಿ ಒಂದು ದಿನ ಕೂಡ ನೀರು ನೀರಲು ಆಗುವುದಿಲ್ಲ ಎನ್ನುವುದು ಡ್ಯಾಂ ಅಧಿಕಾರಿಗಳ ನಿಲುವು.
ರೈತರಿಂದ ಮತ್ತೆ ಹೋರಾಟ
ಈಗಾಗಲೇ ರೈತರು ನೀರಿನ ನಿರ್ವಹಣೆಯಲ್ಲಾ ಗುತ್ತಿರುವ ಲೋಪದ ಕುರಿತು ಅನೇಕ ಬಾರಿ ಹೋರಾಟ ನಡೆಸಿದ್ದಾರೆ. ಅಲ್ಲದೇ, ಈಗಾಗಲೇ ರೈತರ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗೇಜ್ ನಿರ್ವಹಣೆಗೆ ಸಿಬ್ಬಂದಿ ವೇತನ ಸಮಸ್ಯೆ ಕೆಲಸಕ್ಕೆ ಬರುತ್ತಿಲ್ಲ.
ಇಂಜಿನಿಯರ್‌ಗಳು ಕೊರತೆ ಇದೆ. ಈ ಬಗ್ಗೆ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಕ್ರಮ ಕೈಗೊಂಡಿಲ್ಲ. ಮೇಲ್ಭಾಗದಲ್ಲಿ ಅಕ್ರಮ ನೀರಾವರಿ ನಡೆದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ರೈತರ ಆರೋಪ. ಹೀಗಾಗಿ ಸೋಮವಾರದೊಳಗೆ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಸಿದ್ಧಯ್ಯಸ್ವಾಮಿ ಕುಕುನೂರು