Advertisement
ಹೊಸದಿಲ್ಲಿಯ ಕೃಷಿ ಭವನದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಸಾಗರ ಹಾಗೂ ಶಿರಸಿ ಪ್ರಾಂತ್ಯದ ರೈತರ ಪ್ರತಿನಿಧಿಗಳಾದ ಎಚ್.ಎಸ್.ಮಂಜಪ್ಪ ಸೊರಬ ಹಾಗೂ ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೆಂ. ವೈದ್ಯರ ನೇತೃತ್ವದ ನಿಯೋಗವು ಅಕ್ರಮವಾಗಿ ವಿದೇಶದಿಂದ ಬರುವ ಅಡಿಕೆಗೆ ತಡೆ ಮತ್ತು ಎಫ್ಎಸ್ಎಸ್ಐ ನಿರ್ದಿಷ್ಟಪಡಿಸಿರುವ ಅಡಿಕೆ ತೇವಾಂಶ ಪ್ರಮಾಣ ಶೇ.7ರಿಂದ ಶೇ. 11ಕ್ಕೆ ಹೆಚ್ಚಿಸಬೇಕು. ಮೈಲುತುತ್ತು ಮೇಲೆ ಈಗ ವಿಧಿಸುತ್ತಿರುವ ಜಿಎಸ್ಟಿಯ ಶೇ. 18ರಿಂದ ಶೇ. 5ಕ್ಕೆ ಇಳಿಸಬೇಕು ಎಂದು ಮನವಿ ಸಲ್ಲಿಸಿದರು.
ಅಡಿಕೆ ಬೆಳೆಗಾರರ ಪ್ರತಿನಿಧಿಗಳ ನಿಯೋಗದ ಸಮಸ್ಯೆಗಳ ಆಲಿಸಿದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಡಿಕೆ ಬೆಳೆಗಾರರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಗಮನಹರಿಸುವುದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಯು.ಟಿ.ರಾಮಪ್ಪ, ಅನಿಲ ಒಡೆಯರ್, ಮಲ್ಲಿಕಾರ್ಜುನ ಸಾಗರ, ದಿ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿ ನಿರ್ದೇಶಕ ನರಸಿಂಹ ಹೆಗಡೆ, ಹಣಕಾಸು ಮತ್ತು ವ್ಯಾಪಾರ ಮಾರ್ಗದರ್ಶಕ ಪ್ರಕಾಶ ಹೆಗಡೆ ಹುಳಗೋಳ ಹಾಗೂ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ಗಿರೀಶ ಚಿದಾನಂದ ಹೆಗಡೆ ಉಪಸ್ಥಿತರಿದ್ದರು.
Related Articles
Advertisement