Advertisement

ಎಟಿಎಂ ದರೋಡೆಗೆ ಬಂದವರು ಅಂದರ್‌

08:55 AM Jan 17, 2018 | Team Udayavani |

ಶಿವಮೊಗ್ಗ: ಎಟಿಎಂ ದರೋಡೆಗೆ ಯತ್ನಿಸಿದ್ದ ಮೂವರನ್ನು ಕಟ್ಟಡ ಮಾಲೀಕರ ಸಮಯಪ್ರಜ್ಞೆ ಯಿಂದ ಪೊಲೀಸರು ಬಂಧಿಸಿರುವ ಘಟನೆ ನಗರ ಹೊರವಲಯದ ಸಂತೆಕಡೂರಿನಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.

Advertisement

ಎನ್‌.ಆರ್‌. ಪುರ ಮುಖ್ಯ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ಗೆ ಸೇರಿರುವ ಎಟಿಎಂ ಕೇಂದ್ರಕ್ಕೆ ಮಂಗಳವಾರ ಬೆಳಗಿನ ಜಾವ ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದ ಆರು ದರೋಡೆಕೋರರ ತಂಡ ಎಟಿಎಂಗೆ ನುಗ್ಗುವ ಮೊದಲು ಬೀದಿ ದೀಪಗಳ ಸಂಪರ್ಕ ಸಿಸಿ ಕ್ಯಾಮೆರಾ ಸಂಪರ್ಕ ಕಡಿತಗೊಳಿಸಿದರು. ಮೂವರು ಹೊರಗೆ ನಿಂತು ಕಾವಲು ಕಾಯುತ್ತಿದ್ದರೆ, ಉಳಿದವರು ಗ್ಯಾಸ್‌ ಕಟರ್‌, ಕಬ್ಬಿಣದ ಸಲಾಕೆ ಮತ್ತಿತರ ಮಾರಕಾಸ್ತ್ರಗಳೊಂದಿಗೆ ಎಟಿಎಂ ಕೇಂದ್ರದ ಒಳಗೆ ನುಗ್ಗಿದ್ದರು. 

ಎಟಿಎಂ ಯಂತ್ರವನ್ನು ತೆರೆದರಾದರೂ ನಗದು ಇರಿಸಿದ್ದ ಪೆಟ್ಟಿಗೆಯನ್ನು ಹೊರತೆಗೆಯಲು ಸಾಧ್ಯವಾಗಿರಲಿಲ್ಲ. ಇದೇ ವೇಳೆ ಎಟಿಎಂ ಕೇಂದ್ರವಿರುವ ಕಟ್ಟಡದಲ್ಲಿಯೇ ವಾಸವಾಗಿರುವ ಮಾಲೀಕ ಮುರುಗೇಶ್‌ ಎಚ್ಚರಗೊಂಡಿದ್ದಾರೆ. ಮನೆಯ ಕೆಳಭಾಗದಲ್ಲಿರುವ ಮಳಿಗೆಯಿಂದ ಶಬ್ದ ಬರುತ್ತಿರುವುದನ್ನು ಕೇಳಿದ್ದಾರೆ. ತಕ್ಷಣ ಪಕ್ಕದ ಮನೆಯಲ್ಲಿದ್ದ ತಮ್ಮ ಸಹೋದರ ವೆಂಕಟೇಶ್‌ಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡಿದ್ದಾರೆ. ಇಬ್ಬರೂ ಕೆಳಗಿಳಿದು ಅರ್ಧ ಮುಚ್ಚಲಾಗಿದ್ದ ಎಟಿಎಂ ಕೇಂದ್ರದ ಶೆಟರ್‌ನ್ನು ಪೂರ್ಣ ಕೆಳಗಿಳಿಸಿ ಹೊರಭಾಗದಿಂದ ಲಾಕ್‌ ಮಾಡಿದ್ದಾರೆ. ಇದರಿಂದ ಒಳಗಿದ್ದ ದರೋಡೆಕೋರರು ಸಿಲುಕಿಕೊಂಡಿದ್ದಾರೆ.

ಜನ ಸೇರುತ್ತಿದ್ದಂತೆ ಹೊರಗೆ ವಾಹನದಲ್ಲಿ ಕಾಯುತ್ತಿದ್ದ ಮೂವರು ಪರಾರಿಯಾದರು. ಅಷ್ಟರಲ್ಲಾಗಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಒಳಗಿದ್ದ ದರೋಡೆಕೋರರನ್ನು ಹೊರಗೆ ಕರೆಸಿದರು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರ ವಿಚಾರಣೆ ನಡೆದಿದ್ದು, ಪರಾರಿಯಾಗಿರುವ ಇತರೆ ದರೋಡೆಕೋರರ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next