Advertisement

ಅರ್ಜುನ ಸಾಹಸ ಯಾತ್ರೆ

05:58 PM Apr 17, 2018 | |

ಪರ್ವತಾರೋಹಣವನ್ನು ಬೇರೆಲ್ಲರಿಗಿಂತಲೂ ಚಾಲೆಂಜಿಂಗ್‌ ಆಗಿ ತೆಗೆದುಕೊಂಡವನು ಈ ಅರ್ಜುನ್‌. ಆಕ್ಸಿಜನ್‌ ಸಿಲಿಂಡರ್‌ ಇಲ್ಲದೇ ಮೌಂಟ್‌ ಎವರೆಸ್ಟ್‌ ಏರುವ ಕನಸು ಕಟ್ಟಿಕೊಂಡ ಭೂಪನೀಗ ಮೊನ್ನೆ ಪ್ರಪಂಚದ ಮೂರನೇ ಅತಿದೊಡ್ಡ ಪರ್ವತ ಕಾಂಚನಜುಂಗವನ್ನು ಆಕ್ಸಿಜನ್‌ ಸಿಲಿಂಡರ್‌ನ ನೆರವಿಲ್ಲದೇ, ಏರಿ ದಾಖಲೆ ನಿರ್ಮಿಸಿಬಿಟ್ಟ. ಆ ಸಾಹಸ ಹೇಗಿತ್ತು ಗೊತ್ತೇ?

Advertisement

ಪರ್ವತಾರೋಹಣಕ್ಕೆ ಕೇವಲ ಕೆಚ್ಚೆದೆ ಇದ್ದರೆ ಸಾಲಲ್ಲ. ವೈಜ್ಞಾನಿಕವಾಗಿ ಕೆಲವು ಉಪಕರಣಗಳ ಸಹಾಯವೂ ಮನುಷ್ಯನ ಬೆನ್ನಿಗಿರಬೇಕು. ದಪ್ಪನೆಯ ಜಾಕೆಟ್‌, ಬೆನ್ನಿಗೊಂದು ಆಕ್ಸಿಜನ್‌ ಸಿಲಿಂಡರು, ಬ್ಯಾಗ್‌ನಲ್ಲಿ ಒಂದಿಷ್ಟು ಪ್ರಥಮ ಚಿಕಿತ್ಸಾ ಉಪಕರಣ, ಗಟ್ಟಿಮುಟ್ಟಾದ ಹಗ್ಗ, ಕಣ್ಣಿಗೊಂದು ಕೂಲಿಂಗ್‌ ಗಾಸು, ಕೈನಲ್ಲಿ ವಾಕಿಂಗ್‌ ಸ್ಟಿಕ್ಕು… ಇವೆಲ್ಲ ಇದ್ದರಷ್ಟೇ ಮೌಂಟ್‌ ಎವರೆಸ್ಟ್‌ ಅನ್ನು ಮುಟ್ಟಿಬರಲು ಸಾಧ್ಯ ಎನ್ನುವುದು ಅನೇಕರ ನಂಬಿಕೆ.

ಆದರೆ, 28 ವರ್ಷದ ಅರ್ಜುನ್‌ ಎಂಬ ಹುಡುಗನಿಗೆ ಹೀಗೆಲ್ಲ ಹೇಳಿಬಿಟ್ಟರೆ ಆತ ಒಂದೇ ಸಮನೆ ನಗಲು ಶುರುಮಾಡ್ತಾನೆ. ಯಾಕಂದ್ರೆ, ಆತ ಈ ಶಿಷ್ಟಾಚಾರವನ್ನೆಲ್ಲ ಬದಿಗೊತ್ತಿರುವ ಆಸಾಮಿ. ಪರ್ವತಾರೋಹಣವನ್ನು ಬೇರೆಲ್ಲರಿಗಿಂತಲೂ ಚಾಲೆಂಜಿಂಗ್‌ ಆಗಿ ತೆಗೆದುಕೊಂಡು, ಆಕ್ಸಿಜನ್‌ ಸಿಲಿಂಡರ್‌ ಇಲ್ಲದೇ ಮೌಂಟ್‌ ಎವರೆಸ್ಟ್‌ ಏರುವ ಕನಸು ಕಟ್ಟಿಕೊಂಡ ಭೂಪ. ಮೊನ್ನೆ ಈತ ಪ್ರಪಂಚದ ಮೂರನೇ ಅತಿದೊಡ್ಡ ಪರ್ವತ ಕಾಂಚನಜುಂಗವನ್ನು ಆಕ್ಸಿಜನ್‌ ಸಿಲಿಂಡರ್‌ನ ನೆರವಿಲ್ಲದೇ, ಏರಿ ದಾಖಲೆ ನಿರ್ಮಿಸಿಬಿಟ್ಟ.

8,586 ಮೀಟರ್‌ ಎತ್ತರದ ಕಾಂಚನಜುಂಗ ಎಷ್ಟು ದುರ್ಗಮ ಎಂಬುದು ಭಾರತೀಯರಿಗೆ ಗೊತ್ತೇ ಇದೆ. ಹಿಮಾಲಯದಲ್ಲಿ ಮೌಂಟ್‌ ಎವರೆಸ್ಟ್‌ ಬಿಟ್ಟರೆ, ನಂತರ ಹೆಚ್ಚು ಬೆವರಿಳಿಸುವ ಶಿಖರವೇ ಕಾಂಚನಜುಂಗ. ಅತ್ಯಂತ ಅಪಾಯಕಾರಿಯಾದ ಏರುಗಿರಿ. 1955ರಿಂದ ಇಲ್ಲಿಯವರೆಗೆ ಇದನ್ನು ಹತ್ತಿದವರು ಕೇವಲ 243 ಮಂದಿ ಮಾತ್ರ. ಇದಕ್ಕಿಂತಲೂ ದುಪ್ಪಟ್ಟು ಮಂದಿ ಕಾಂಚನಜುಂಗದ ಕಾಲಬುಡದಲ್ಲೇ ಸಾವನ್ನಪ್ಪಿದ್ದಾರೆಂದರೆ,

ಇದೆಷ್ಟು ರುದ್ರಮಯ ಎನ್ನುವುದು ನಿಮ್ಮ ಊಹೆಗೂ ನಿಲುಕೀತು. ಇಲ್ಲಿ ಮೇಲೆ ಹೋಗ್ತಾ ಹೋಗ್ತಾ, ಆಮ್ಲಜನಕವು ಶೇ.81ರಷ್ಟು ಕಡಿಮೆ ಆಗುತ್ತಲೇ ಹೋಗುತ್ತೆ. ಪರ್ವತಾರೋಹಿ ಎಷ್ಟೇ ಗಟ್ಟಿಮುಟ್ಟಾಗಿದ್ದರೂ, ಆಮ್ಲಜನಕ ಪೂರೈಕೆ ಆಗುತ್ತಿಲ್ಲವೆಂದಾದಾಗ‌ ಅಲ್ಲೇ ಕುಸಿದು ಬೀಳುವ ಅಪಾಯವೂ ಇರುತ್ತೆ. ಇದೆಲ್ಲ ಗೊತ್ತಿದ್ದೂ, ದೆಹಲಿ ಮೂಲದ ಅರ್ಜುನ್‌ ಆ ಸಿಲಿಂಡರ್‌ನ ಸಹವಾಸವನ್ನು ಬಯಸಲೇ ಇಲ್ಲ. ಇಟ್ಟ ಹೆಜ್ಜೆಯನ್ನೂ ಹಿಂದೆ ಇಡಲಿಲ್ಲ.

Advertisement

ಭಾರತ ಮತ್ತು ನೇಪಾಳದ ಗಡಿಯಲ್ಲಿನ ಎಷ್ಟೆಷ್ಟೋ ದುರ್ಗಮ ಪರ್ವತಗಳಿಗೆ ಅರ್ಜುನ್‌ನ ಪರಿಚಯವಿದೆ. 2013ರಿಂದ ಈತ ಈ ಭಾಗದ ಪ್ರಜೆಯೇ ಆಗಿಬಿಟ್ಟಿದ್ದಾನೆ. ಆರಂಭದಲ್ಲಿ ಆಕ್ಸಿಜನ್‌ ಸಿಲಿಂಡರ್‌ ಕಟ್ಟಿಕೊಳ್ಳುತ್ತಿದ್ದ, ಅರ್ಜನ್‌ ಈಗೀಗ ಪರ್ವತಾರೋಹಣಕ್ಕಾಗಿಯೇ ವಿಶೇಷವಾಗಿ ರೂಢಿಸಿಕೊಂಡಿದ್ದಾರಂತೆ. ಆಕ್ಸಿಜನ್‌ ಬಳಸದೆಯೇ ಅವರು ಮೌಂಟ್‌ ಮಕಾಲು, ಮೌಂಟ್‌ ಕಲಾಂ, ಮೌಂಟ್‌ ಚೊ ಯೂ ಶಿಖರಗಳನ್ನು ಏರಿದ್ದರು.

ಮೌಂಟ್‌ ಮಕಾಲುನಲ್ಲಿ ತುದಿಮುಟ್ಟಲು ಇನ್ನೇನು 180 ಮೀಟರ್‌ ಇದೆ ಎನ್ನುವಾಗ, ಅರ್ಜುನ್‌ಗೆ ಉಸಿರಾಡುವುದೇ ಕಷ್ಟವಾಯಿತಂತೆ. ಆಯಾ ತಪ್ಪಿ ಬಿದ್ದು, ಕೆಲ ಅಡಿ ಕೆಳಕ್ಕೂ ಬಿದ್ದರು. ಆದರೆ, ಏನೂ ಆಗಿಲ್ಲವೆಂಬಂತೆ, ಮತ್ತೆ ಪರ್ವತ ಏರಲು ಶುರುಮಾಡಿ, ಶಿಖರದ ಕೊನೆಯನ್ನು ತಲುಪಿದರು. ಮೌಂಟ್‌ ಚೊ ಯೂ ಏರುವಾಗಲೂ ಅದೇ ಕತೆಯೇ ಆಯಿತು.

ಒಂದು ಹಂತದಲ್ಲಿ ಅರ್ಜನ್‌ನ ದೇಹದ ಅಂಗಾಂಗಗಳು ಕೆಲಸ ಮಾಡುವುದನ್ನೇ ನಿಲ್ಲಿಸಿಬಿಟ್ಟವಂತೆ. ಸಹಪರ್ವತಾರೋಹಿ ಭೂಪೇಶ್‌ ಕುಮಾರ್‌ ನೆರವಿಗೆ ಬಂದು, ಮೇಲೆತ್ತಿದ ಬಳಿಕ, ಅರ್ಜುನ್‌ ಪುನಃ ಹೆಜ್ಜೆಯೂರಲು ಶುರುಮಾಡಿದರು. ಕೊನೆಗೂ ಆಕ್ಸಿಜನ್‌ ಸಿಲಿಂಡರ್‌ನ ನೆರವಿಲ್ಲದೇ ತುದಿ ಮುಟ್ಟಿದರು. ಆದರೆ, ಅರ್ಜುನ್‌ರಂತೆ ಎಲ್ಲರೂ ಈ ಧೈರ್ಯ ತೋರುವುದು ಕಷ್ಟದ ಮಾತೇ ಸರಿ.

ಪರ್ವತಾರೋಹಣದಲ್ಲಿ ಒಂದೊದು ಹೆಜ್ಜೆಯ ಅಡಿಯಲ್ಲೂ ಸಾವು ಹೊಂಚು ಹಾಕಿ ಕುಳಿತಿರುತ್ತದೆ. ಅದನ್ನು ಮೆಟ್ಟುತ್ತಲೇ ಮುಂದೆ ಸಾಗಬೇಕಾಗಿರುತ್ತೆ. ಅಂಥದ್ದರಲ್ಲಿ ದೇಹಕ್ಕೆ ಇಂಧನದಂತೆ ನೆರವಾಗಬಲ್ಲ ಆಕ್ಸಿಜನ್‌ ಸಿಲಿಂಡರ್‌ ಅನ್ನು ನಿರ್ಲಕ್ಷಿಸುವುದಕ್ಕೂ ಧೈರ್ಯಬೇಕು. ಹಾಗೆ ಭಂಡ ಧೈರ್ಯ ಇದ್ದವರೇ ಅರ್ಜುನ್‌ನಂಥ ಸಾಹಸಿಗಳಾಗ್ತಾರೆ. ಅಂದಹಾಗೆ, ಅರ್ಜುನ್‌ನ ಮುಂದಿನ ಟಾರ್ಗೆಟ್‌ ಮೌಂಟ್‌ ಎವರೆಸ್ಟ್‌!

* ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next