Advertisement

ಕಣಕ್ಕಿಳಿದ ನಾಯಕರು; ರಂಗೇರುತ್ತಿದೆ ಪರಿಷತ್‌ ಚುನಾವಣ ಕಣ

11:43 PM Nov 28, 2021 | Team Udayavani |

ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆಯ ಪ್ರಚಾರಕ್ಕೆ ಮೂರು ಪಕ್ಷಗಳ ಪ್ರಮುಖ ನಾಯಕರು ಅಧಿಕೃತ ಪ್ರವೇಶ ಮಾಡುತ್ತಿದ್ದು, ಕಣ ರಂಗೇರುತ್ತಿದೆ.

Advertisement

ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಪುಟದ ಸಚಿವರು ತಮಗೆ ವಹಿಸಿರುವ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಚಾರ ಕಾರ್ಯಗಳ ಕುರಿತು ಪಕ್ಷದಿಂದ ಅಧಿಕೃತ ವೇಳಾಪಟ್ಟಿ ಪ್ರಕಟಗೊಂಡಿಲ್ಲ. ಆದರೆ ಇಬ್ಬರೂ ನಾಯಕರು ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಹಂತ ಹಂತವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳಿಗೆ ಈಗಾಗಲೇ ಜಿಲ್ಲೆಗಳ ಜವಾಬ್ದಾರಿಗಳನ್ನು ಒದಗಿಸಲಾಗಿದೆ. ಅವರು ಪಕ್ಷದ ಸೂಚನೆಯಂತೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಹುತೇಕ ಜಿಲ್ಲೆಗಳ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸಲಾಗಿದೆ ಎಂಬ ಮಾಹಿತಿ ಇದೆ. ಹೀಗಾಗಿ ಸಚಿವರು ತಮಗೆ ವಹಿಸಿರುವ ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಡಿಕೆ, ಸಿದ್ದು ಪ್ರವಾಸ
ಕಾಂಗ್ರೆಸ್‌ ನಾಯಕರೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದು, ಕಾಂಗ್ರೆಸ್‌ ಈಗಾಗಲೇ ಜಿಲ್ಲಾವಾರು ವೀಕ್ಷಕರ ನೇಮಿಸಿ ಸೋಮವಾರದಿಂದಲೇ ಕ್ಷೇತ್ರಗಳಿಗೆ ಹೋಗಲು ಸೂಚಿಸಿದೆ.

ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌, ಕೆ.ಜೆ. ಜಾರ್ಜ್‌ ಸಹಿತ ಹಿರಿಯ ನಾಯಕರು ಜಿಲ್ಲೆಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.

Advertisement

ಇದನ್ನೂ ಓದಿ:ಉಗಾಂಡದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಚೀನಾ ವಶ : ಸಾಲ ತೀರಿಸದಿರುವುದೇ ಕಾರಣ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೋಮವಾರದಿಂದ ಎರಡು ದಿನ ಬೆಳಗಾವಿ, ಧಾರವಾಡ, ವಿಜಯಪುರ ಪ್ರವಾಸ ಕೈಗೊಂಡು ಪ್ರಚಾರ ನಡೆಸಲಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಎರಡು ದಿನಗಳಿಂದ ಮೈಸೂರಿನಲ್ಲಿದ್ದು, ಸೋಮವಾರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ತೊಡಗುವ ಸಾಧ್ಯತೆ ಇದೆ. ಡಿ. 1ರಿಂದ ಹಾಸನ, ತುಮಕೂರು, ಶಿವಮೊಗ್ಗ ಜಿಲ್ಲೆಗಳಿಗೆ ತೆರಳಿ ಪಕ್ಷದ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಚಾರದಲ್ಲಿರುವ ಜೆಡಿಎಸ್‌ ನಾಯಕರು
ಜೆಡಿಎಸ್‌ ನಾಯಕರೂ ತಮ್ಮ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕ್ಷೇತ್ರಗಳಲ್ಲಿ ಈಗಾಗಲೇ ಪ್ರವಾಸ ಆರಂಭಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಈಗಾಗಲೇ ತುಮಕೂರು ಸಮಾವೇಶ ಮುಗಿಸಿದ್ದಾರೆ. ಸಂಸತ್‌ ಅಧಿವೇಶನ ಇರುವುದರಿಂದ ದಿಲ್ಲಿಗೆ ಹೋಗಿದ್ದು, ವಾರದ ಕೊನೆಯ ಎರಡು ದಿನ ಮೈಸೂರು, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಪ್ರಚಾರದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಎರಡು ದಿನಗಳಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮುಖಂಡರ ಜತೆ ಸಭೆ ನಡೆಸುತ್ತಿದ್ದಾರೆ. ಮೈಸೂರು ಸಭೆ ಮುಗಿಸಿದ್ದಾರೆ. ಸೋಮವಾರದಿಂದ ಕೋಲಾರ ಮಂಡ್ಯ ತುಮಕೂರು ಪ್ರವಾಸ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

 

Advertisement

Udayavani is now on Telegram. Click here to join our channel and stay updated with the latest news.

Next