Advertisement

ವಾರ್ಡ್‌ ಕಮಿಟಿ ಸ್ವರೂಪದ ಏರಿಯಾ ಸಭಾ!

09:54 AM May 21, 2022 | Team Udayavani |

ಮಹಾನಗರ: ಗ್ರಾಮೀಣ ಪ್ರದೇಶಗಳಲ್ಲಿ ಯಾವ ರೀತಿ ಗ್ರಾಮ ಸಭೆ ನಡೆಯುತ್ತದೆಯೋ ಅದೇ ರೀತಿ, ಮಂಗಳೂರಿನಲ್ಲಿ ಇನ್ನು ಏರಿಯಾ ಸಭೆಗಳು ನಡೆಯಲಿದೆ. ಮುಂದಿನ ಎರಡು ತಿಂಗಳೊಳಗೆ ನಗರದಲ್ಲಿ ಈ ಪ್ರಕ್ರಿಯೆ ಅನುಷ್ಠಾನಕ್ಕೆ ಪಾಲಿಕೆ ಸಿದ್ಧತೆ ನಡೆಸುತ್ತಿದೆ.

Advertisement

ನಗರದಲ್ಲಿ ಈಗಾ ಗಲೇ ವಾರ್ಡ್‌ ಕಮಿಟಿ ಅಸ್ತಿತ್ವದಲ್ಲಿದೆ. ಇದೀಗ ವಾರ್ಡ್‌ ಗಳನ್ನು ಎರಡು ಭಾಗವಾಗಿ ವಿಭಜಿಸಿ ಏರಿಯಾ ಸಭಾ ರಚನೆಯಾಗಲಿದೆ. ನಗರದ 60 ವಾರ್ಡ್‌ ಗಳಲ್ಲಿಯೂ ಏರಿಯಾ ಸಭಾ ಅಸ್ತಿತ್ವಕ್ಕೆ ಬರಲಿದ್ದು, 59 ವಾರ್ಡ್‌ಗಳಲ್ಲಿ ಎರಡು ಸಭಾ ಮತ್ತು ಒಂದು ವಾರ್ಡ್‌ನಲ್ಲಿ ಮೂರು ಸಭಾದಂತೆ ಒಟ್ಟು 121 ಏರಿಯಾ ಸಭಾಕ್ಕೆ ಚಾಲನೆ ಸಿಗಲಿದೆ. ತಮ್ಮ ಏರಿಯಾದಲ್ಲಿನ ಸಮಸ್ಯೆ, ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಲ್ಲಿ ನಡೆಯುವ ಸಭೆಯು ಮಹತ್ವ ಪಡೆದುಕೊಳ್ಳಲಿದೆ.

ವಾರ್ಡ್‌ ಸಮಿತಿಯಲ್ಲಿ ವಾರ್ಡ್‌ಗೆ ಒಬ್ಬರಂತೆ ಅಧ್ಯಕ್ಷರು ಇರುವ ರೀತಿ ಯಲ್ಲಿ ಏರಿಯಾ ಸಭಾದಲ್ಲಿ ಪ್ರತಿನಿಧಿಯನ್ನು ಆಯ್ಕೆ ಮಾಡ ಲಾಗುತ್ತದೆ. ಆಯಾ ಪ್ರದೇಶದ ಒಬ್ಬರು ಮತದಾರನನ್ನು ಪ್ರತಿ ನಿಧಿಯಾಗಿ ಸ್ಥಳೀಯ ಪಾಲಿಕೆ ಸದಸ್ಯರು ಅಥವಾ ಆಯುಕ್ತರು ಆಯ್ಕೆ ಮಾಡುತ್ತಾರೆ. ಅದೇ ರೀತಿ, ವಾರ್ಡ್‌ ಸಮಿತಿಯ ಕಾರ್ಯದರ್ಶಿಗಳು ಇಲ್ಲಿ ನೋಡಲ್‌ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಈ ಪ್ರಕ್ರಿಯೆ ಈಗಾಗಲೇ ನಡೆದಿದ್ದು, ಸಭೆ ಇನ್ನಷ್ಟೇ ನಡೆಯಬೇಕಿದೆ.

ಮೂರು ತಿಂಗಳಿಗೊಮ್ಮೆ ಏರಿಯಾ ಸಭಾದ ಸಭೆ ನಡೆಯಲಿದ್ದು, ಅಲ್ಲಿ ಮತದಾರರಿಗೆ ಸಮಸ್ಯೆ, ಸೂಚನೆಯ ಬಗ್ಗೆ ಮಾತನಾಡಲು ಅವಕಾಶ ಇದೆ. ಸಭೆಯ ನಡವಳಿಗಳನ್ನು ಅಲ್ಲಿ ರೆಕಾರ್ಡ್‌ ಮಾಡಲಾಗುತ್ತದೆ. ಅದರಲ್ಲಿ ತೆಗೆದುಕೊಳ್ಳುವ ನಿರ್ಧಾರ, ತೀರ್ಮಾನಗಳು ವಾರ್ಡ್‌ ಕಮಿಟಿಗೆ ಬರುತ್ತದೆ. ಆಯಾ ವಿಷಯದ ಬಗ್ಗೆ ಅಲ್ಲಿ ನಿರ್ಣಯ ಕೈಗೊಂಡು ಬಳಿಕ ಆಯುಕ್ತರ ಮುಖೇನ ಪಾಲಿಕೆಗೆ ಹೋಗುತ್ತದೆ.

ಮಂಗಳೂರು ಸಿವಿಕ್‌ ಗ್ರೂಪ್‌ನ ಸ್ಥಾಪಕ ನೈಜೆಲ್‌ ಅಲ್ಬುಕರ್ಕ್‌ ಈ ಬಗ್ಗೆ ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಪಾಲಿಕೆ ವ್ಯಾಪ್ತಿ ವಾರ್ಡ್‌ ಕಮಿಟಿ ಸದ್ಯ ಅಸ್ತಿತ್ವಕ್ಕೆ ಬಂದಿದ್ದು, ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತಿದೆ. ಮತ್ತಷ್ಟು ಪಾರದರ್ಶಕ ಆಡಳಿತ ನಡೆಸಲು ಏರಿಯಾ ಸಭಾ ರಚನೆ ಅತೀ ಅಗತ್ಯ. ವಾರ್ಡ್‌ ಕಮಿಟಿ, ಏರಿಯಾ ಸಭಾ ರಚನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. 60 ವಾರ್ಡ್‌ ಗಳಲ್ಲಿ ಏರಿಯಾ ಸಭಾ ರಚನೆಯಾಗಿ ಅಭಿವೃದ್ಧಿಪರ ಕೆಲಸ ಆಗಬೇಕು ಎನ್ನುತ್ತಾರೆ.

Advertisement

ಏನಿದು ಏರಿಯಾ ಸಭಾ?

ನಗರಾಡಳಿತವನ್ನು ವಿಕೇಂದ್ರೀಕರಿಸಿ ವಾರ್ಡ್‌ನ ಏರಿಯಾವನ್ನು ಗಮನದಲ್ಲಿಟ್ಟುಗೊಂಡು ನಾಗರಿಕರ ಸಹಭಾಗಿತ್ವದೊಂದಿಗೆ ಆಯಾ ಏರಿಯಾದ ಪಾರದರ್ಶಕ ಆಡಳಿತ, ಗುಣಮಟ್ಟದ ಕೆಲಸ ಸಹಿತ ಅಭಿವೃದ್ಧಿ ನಿಟ್ಟಿನಲ್ಲಿ ರಚನೆಗೊಂಡ ಪ್ರಕ್ರಿಯೆಯೇ ಏರಿಯಾ ಸಭಾ. ಪಾಲಿಕೆ ವ್ಯಾಪ್ತಿಯನ್ನು ವಾರ್ಡ್‌ ಬದಲು ಏರಿಯಾ ಮಟ್ಟದಲ್ಲಿಯೇ ಬಲಪಡಿಸುವುದು ಇದರ ಕೆಲಸ. ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಪ್ರಾಥಮಿಕ ಮಟ್ಟದಿಂದಲೇ ಯೋಜನೆ ಅನುಷ್ಠಾನಗೊಳಿಸಲು ಸಹಕಾರ ನೀಡುವುದು, ಏರಿಯಾದ ಯೋಜನೆ, ವಿವಿಧ ಸಹಾಯಧನಗಳಿಗೆ ಫಲಾನುಭವಿಗಳನ್ನು ಗುರುತಿಸುವುದು, ಕುಂದುಕೊರತೆ ನಿವಾರಣೆ ಇದರ ಕೆಲಸ. ಏರಿಯಾ ಮಟ್ಟದಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಏರಿಯಾ ಸಭೆ ನಡೆಯುತ್ತದೆ.

ಸ್ಯದ್ಯದಲ್ಲೇ ಅಸ್ತಿತ್ವಕ್ಕೆ

ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ವಾರ್ಡ್‌ ಕಮಿಟಿ ಅಸ್ತಿತ್ವದಲ್ಲಿದ್ದು, ಪ್ರತೀ ತಿಂಗಳು ಸಭೆ ನಡೆಯುತ್ತಿದೆ. ಏರಿಯಾ ಸಭಾವನ್ನೂ ಅನು ಷ್ಠಾನಗೊಳಿಸುವ ನಿಟ್ಟಿನಲ್ಲಿ ಪಾಲಿಕೆ ತಯಾರಿ ನಡೆಸುತ್ತಿದೆ. ಪಾಲಿಕೆ ಸದಸ್ಯರ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸದ್ಯದಲ್ಲೇ ಏರಿಯಾ ಸಭಾ ರಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. – ಅಕ್ಷಯ್‌ ಶ್ರೀಧರ್‌, ಪಾಲಿಕೆ ಆಯುಕ್ತರು

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next