ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಮನೆ, ಮನೆಗೆ ಒದಗಿಸುವ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ಶಾಸಕರು ಶುಕ್ರವಾರ ಮೇಲ್ಮನೆಯಲ್ಲಿ ವಾಕ್ಸಮರ ತಾರಕ್ಕೇರಿದ ಸಂದರ್ಭದಲ್ಲಿ ಸಭಾಪತಿ ವೆಂಕಯ್ಯ ನಾಯ್ದು ಆಕ್ರೋಶದಿಂದ ಸದನದ ಶಿಷ್ಟಾಚಾರ ಕಾಪಾಡುವಂತೆ ಸೂಚನೆ ನೀಡಿದ ಘಟನೆ ನಡೆಯಿತು.
ದೆಹಲಿಯಲ್ಲಿ ನೀರಿನ ಗುಣಮಟ್ಟದ ಕುರಿತು ಬಿಜೆಪಿಯ ವಿಜಯ್ ಗೋಯಲ್ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ನಂತರ ವಾಕ್ಸಮರಕ್ಕೆ ನಾಂದಿ ಹಾಡಿತ್ತು. ದೆಹಲಿಯಲ್ಲಿ ಜನರಿಗೆ ಕಳಪೆ ಗುಣಮಟ್ಟದ ಮತ್ತು ಅಸುರಕ್ಷಿತ ನೀರನ್ನು ಒದಗಿಸಲಾಗುತ್ತಿದೆ ಎಂದು ಗೋಯಲ್ ಆರೋಪಿಸಿದ್ದರು. ಈ ವೇಳೆ ಆಪ್ ನ ಸಂಜಯ್ ಸಿಂಗ್ ಏರು ಧ್ವನಿಯಲ್ಲಿ ಪ್ರತಿಕ್ರಿಯೆ ನೀಡಲು ಆರಂಭಿಸಿದ್ದರು ಎಂದು ವರದಿ ತಿಳಿಸಿದೆ.
ಸಂಜಯ್ ಸಿಂಗ್ ಹೇಳಿಕೆಯನ್ನು ದಾಖಲಿಸುವುದಿಲ್ಲ ಎಂದು ಮೇಲ್ಮನೆ ಸಭಾಪತಿ ವೆಂಕಯ್ಯ ನಾಯ್ಡು ಅವರು ಸೂಚಿಸಿ, ಯಾವುದೇ ವ್ಯಕ್ತಿ ಅಥವಾ ಸರ್ಕಾರದ ಮೇಲೆ ಆರೋಪ ಹೊರಿಸಬೇಡಿ, ಕುಳಿತುಕೊಳ್ಳಿ ಎಂದಿದ್ದರು. ಆದರೆ ಸಿಂಗ್ ತಮ್ಮ ವಾಗ್ದಾಳಿ ಮುಂದುವರಿಸಿದಾಗ ನಾಯ್ಡು ಕೆಂಡಾಮಂಡಲರಾದ ಪ್ರಸಂಗ ನಡೆಯಿತು ಎಂದು ವರದಿ ವಿವರಿಸಿದೆ.
ನೀವೊಬ್ಬರು ಸಚಿವರಾಗಿ ಅದನ್ನು ಸರಿಪಡಿಸಬೇಕು ಎಂದು ಸಿಂಗ್ ಗೆ ಹೇಳಿದ್ದರು. ನಂತರ ನಾಯ್ಡು ಅವರು, ವಿಜಯ್ ಗೋಯಲ್ ಅವರಿಗೆ, ಯಾವುದೇ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವಾಗಲಿ, ಅಥವಾ ಚಿತ್ರವಾಗಲಿ ಅಥವಾ ಬಾಟಲಿಯನ್ನು ಸದನದೊಳಗೆ ಪ್ರದರ್ಶಿಸಲು ಅವಕಾಶ ಇಲ್ಲ ಎಂದು ಹೇಳಿದರು.
ದಯವಿಟ್ಟು ಈ ಸದನ ನಿಯಮಾವಳಿ, ಸಭ್ಯತೆ ಮತ್ತು ಶಿಷ್ಟಾಚಾರವನ್ನು ಅನುಸರಿಸಿ ಎಂದು ರಾಜ್ಯಸಭೆ ಕಲಾಪದಲ್ಲಿ ವೆಂಕಯ್ಯ ನಾಯ್ಡು ಅವರು ಸದಸ್ಯರಿಗೆ ಕಿವಿಮಾತು ಹೇಳಿರುವುದಾಗಿ ವರದಿ ತಿಳಿಸಿದೆ.