ನವದೆಹಲಿ: “ನಿಮಗೇನು ಜವಾಬ್ದಾರಿ ಎಂಬುದಿಲ್ಲವೇ? ಇಷ್ಟಬಂದಂತೆ ಮಾತನಾಡಬಹುದು ಎಂದು ಅಂದುಕೊಂಡಿರಾ?’ ಹೀಗೆಂದು ಆರ್ಟ್ ಆಫ್ ಲಿವಿಂಗ್‌ನ ಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಅವರನ್ನು ಖಾರವಾಗಿ ಪ್ರಶ್ನಿಸಿದ್ದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ). ಇದಕ್ಕೆ ಮತ್ತೆ ತಿರುಗೇಟು ನೀಡಿರುವ ರವಿಶಂಕರ್, “ಆರ್ಟ್ ಆಫ್ ಲಿವಿಂಗ್‌ಗೆ ಜವಾಬ್ದಾರಿ ಇಲ್ಲ ಎನ್ನುವವರಿಗೆ ನಾವು ಯಾರೆಂದು ಗೊತ್ತಿಲ್ಲ,’ ಎಂದಿದ್ದಾರೆ.
ಒಟ್ಟಿನಲ್ಲಿ ಸಂಸ್ಕೃತಿ ಉತ್ಸವದಿಂದ ಯಮುನಾ ನದಿಗೆ ಆಗಿರುವ ಹಾನಿಯು ಇದೀಗ ಎನ್‌ಜಿಟಿ ಹಾಗೂ ಶ್ರೀ ರವಿಶಂಕರ್ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಕಳೆದ ವರ್ಷ ನಡೆದ “ವಿಶ್ವ ಸಂಸ್ಕೃತಿ ಉತ್ಸವ’ದಿಂದಾಗಿ ಯಮುನಾ ನದಿಯ ನೀರು ಹರಿಯುವ ಪ್ರದೇಶವು ಸಂಪೂರ್ಣ ನಾಶವಾಗಿದೆ. ಅದನ್ನು ಸರಿಪಡಿಸಲು ಇನ್ನೂ 10 ವರ್ಷಗಳೇ ಬೇಕಾಗಬಹುದು ಎಂದು ಇತ್ತೀಚೆಗೆ ಎನ್‌ಜಿಟಿ ನೇಮಿಸಿದ್ದ ತಜ್ಞರ ಸಮಿತಿ ಹೇಳಿತ್ತು. ಇದಕ್ಕೆ ಬುಧವಾರ ಪ್ರತಿಕ್ರಿಯಿಸಿದ್ದ ರವಿಶಂಕರ್ ಗುರೂಜಿ, “ನಾವು ಯಮುನಾ ನದಿಗೆ ಯಾವುದೇ ಹಾನಿ ಉಂಟುಮಾಡಿಲ್ಲ. ಇದೇ ಸತ್ಯ. ಎನ್‌ಜಿಟಿ ಆದೇಶವು ಪಕ್ಷಪಾತದಿಂದ ಕೂಡಿದೆ. ಕೆಲವೊಂದು ಸುಳ್ಳು ಆರೋಪಗಳನ್ನು ಕೇಳುವಾಗ ನಮಗೆ ಆಘಾತವಾಗುತ್ತಿದೆ. ಹಾಗೆ ನೋಡಿದರೆ, ನಮಗೆ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿದ್ದ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಎನ್‌ಜಿಟಿಗೆ ದಂಡ ವಿಧಿಸಬೇಕು’ ಎಂದಿದ್ದರು.
ಹೇಳಿಕೆ ಕುರಿತ ಅರ್ಜಿ ಸಲ್ಲಿಕೆಗೆ ಸೂಚನೆ: ರವಿಶಂಕರ್ ಹೇಳಿಕೆಗೆ ಗುರುವಾರ ಪ್ರತಿಕ್ರಿಯಿಸಿರುವ ಎನ್‌ಜಿಟಿ, ಅವರ ವಿರುದ್ಧ ಕಿಡಿಕಾರಿದೆ. “ನಿಮಗೆ ಸ್ವಲ್ಪವಾದರೂ ಜವಾಬ್ದಾರಿ ಎನ್ನುವುದಿದೆಯೇ? ಇಷ್ಟಬಂದಂತೆ ಮಾತನಾಡಲು ನಿಮಗೆ ಸ್ವಾತಂತ್ರ್ಯ ಕೊಟ್ಟವರಾರು? ಇದೊಂದು ಆಘಾತಕಾರಿ ಹೇಳಿಕೆ,’ ಎಂದು ನ್ಯಾ. ಸ್ವತಂತರ್ ಕುಮಾರ್ ನೇತೃತ್ವದ ಪೀಠ ಹೇಳಿದೆ. ಜತೆಗೆ, ರವಿಶಂಕರ್ ಅವರ ಹೇಳಿಕೆ ಕುರಿತ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಮೇ 9ಕ್ಕೆ ನಿಗದಿಪಡಿಸಿದೆ.
2 ವಾರ ಕಾಲಾವಕಾಶ: ವಿಚಾರಣೆ ವೇಳೆ ರವಿಶಂಕರ್ ಗುರೂಜಿ ಹೇಳಿಕೆಯನ್ನು ಪ್ರಸ್ತಾಪಿಸಿದ ವಕೀಲರು, ರವಿಶಂಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿರುವುದು ಮಾತ್ರವಲ್ಲದೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ವೆಬ್‌ಸೈಟ್, ಫೇಸ್‌ಬುಕ್ ಪುಟದಲ್ಲೂ ತಮ್ಮ ಹೇಳಿಕೆಯನ್ನು ಅಪ್‌ಲೋಡ್ ಮಾಡಿದ್ದಾರೆ ಎಂದೂ ಹೇಳಿದರು. ಇದೇ ವೇಳೆ, ಎಎಎಲ್ ಪರ ವಕೀಲರು, ತಜ್ಞರ ಸಮಿತಿಯ ವರದಿ ಬಗ್ಗೆ ನಮಗೆ ಕೆಲವು ಆಕ್ಷೇಪಣೆಗಳಿವೆ. ಹಾಗಾಗಿ, ವರದಿಯನ್ನು ವಜಾ ಮಾಡಿ ಎಂದು ಕೋರಿದರು. ಕೊನೆಗೆ ನ್ಯಾಯಪೀಠವು 2 ವಾರಗಳೊಳಗಾಗಿ ನಿಮ್ಮ ಆಕ್ಷೇಪಣೆ ಹಾಗೂ ಪ್ರತಿಕ್ರಿಯೆಗಳನ್ನು ಸಲ್ಲಿಸಿ ಎಂದು ಸೂಚಿಸಿತು.