ಅರಕಲಗೂಡು: ಅರಕಲಗೂಡಿನ ನವರಾತ್ರಿಯ ಉತ್ಸವ ಮತ್ತು ದಸರಾ ಹಬ್ಬ ಬುಧವಾರ ರಾತ್ರಿ ಅದ್ಧೂರಿಯಾಗಿ ನಡೆಯಿತು. ಬುಧವಾರ ಸಂಜೆ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ, ತಹಶೀಲ್ದಾರ್ ಶ್ರೀನಿವಾಸ್ ಅವರು ಗ್ರಾಮ ದೇವತೆ ದೇಗುಲ ದಲ್ಲಿ ಪೂಜೆ ನೆರವೇರಿಸಿ ಉತ್ಸವಕ್ಕೆ ಚಾಲನೆ ನೀಡಿದರು.
ದಸರಾ ಹೊಸ ಬೆಳಕು ತರಲಿ: ಈ ವೇಳೆ ಮಾತನಾಡಿದ ಶಾಸಕ ಎ.ಟಿರಾಮಸ್ವಾಮಿ ಅವರು, 2022ರ ದಸರಾ ಆಚರಣೆ ಅತ್ಯಂತ ಅರ್ಥಪೂರ್ಣ ಹಾಗೂ ಅಭೂತಪೂರ್ವ ಬೆಂಬಲದೊಂದಿಗೆ ನೆರವೇರಿದೆ. ಇಂತಹ ವಿಜಯದಶಮಿ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗೌರವಿಸಲಾಗುತ್ತಿದೆ. ದಸರಾ ಹಬ್ಬ ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಬೆಳಕನ್ನು ತರಲಿ ಎಂದು ಆಶಿಸಿದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಜಯದೇವ ಶ್ರೀ, ಶ್ರೀ ಗುರು ಶಿವ ಸುಜ್ಞಾನತೀರ್ಥ ಶ್ರೀ, ಶ್ರೀ ಸ್ವತಂತ್ರ ಬಸವಲಿಂಗ ಶ್ರೀ ಅವರು ಆಶೀ ರ್ವಚನ ನೀಡಿದರು.
ರಘು ಅವರಿಗೆ ಸನ್ಮಾನ: 2022ರ ದಸರಾ ಪ್ರಶಸ್ತಿಯನ್ನು ದೊಡ್ಡಹಟ್ಟಿ ಬೋರೇಗೌಡ ಚಲನ ಚಿತ್ರ ನಿರ್ದೇಶಕ ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ರಘು ಅವರಿಗೆ ನೀಡಿ ಗೌರವಿಸಲಾಯಿತು. ಪಪಂ ಅಧ್ಯಕ್ಷೆ ಶಾರದ ಪೃಥ್ವಿ ರಾಜ್, ಮುಖ್ಯಾಧಿಕಾರಿ ನಟರಾಜ್ ಇತರೆ ಇಲಾಖೆ ಅಧಿಕಾರಿಗಳೂ,ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಮನ ಸೆಳೆದ ಕಲಾ ತಂಡಗಳು: ತುಮಕೂರಿನ ಮಾರುತಿ ತಂಡದ ನಾಸಿಕ್ ಡೋಲು, ಹಾಸನದ ಬಿಟಿ ಮಾನವ ತಂಡದ ಕೋಲಾಟ, ತುಮಕೂರಿನ ಮಂಜುನಾಥ್ ತಂಡದ ಚಿಟ್ಟಿಮೇಳ, ದೇವಾನಂದ ವರಪ್ರಸಾದ್ ತಂಡದಿಂದ ಆರ್ಕೆಸ್ಟ್ರಾ, ಮಂಡ್ಯದ ಮಧು ಮತ್ತು ತಂಡದವರ ಗಾರುಡಿಗೊಂಬೆ, ಮೈಸೂರಿನ ಮಂಜು ತಂಡದ ನಗಾರಿ ಕುಣಿತ, ಮೈಸೂರಿನ ಪ್ರದೀಪ್ ತಂಡದ ಡೊಳ್ಳು ಕುಣಿತ, ಮಂಡ್ಯದ ಸುಂದರೇಶ್ ತಂಡದಿಂದ ಪೂಜಾ ಕುಣಿತ, ಉದ್ದೂರು ರವಿ ತಂಡದ ವೀರಭದ್ರ ಕುಣಿತ, ಮಂಡ್ಯದ ನಂದನ್ ತಂಡದ ಪಟಾ ಕುಣಿತ ಹಾಗೂ ಹೊನ್ನವಳ್ಳಿ ದಿವಾಕರ್ ತಂಡದ ಕೀಲು ಕುದುರೆ ಕುಣಿತ, ಮಂಗಳ ವಾದ್ಯ
ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಬನ್ನಿ ಕಡಿದು ದಸರಾಗೆ ತೆರೆ: ದೊಡ್ಡಮ್ಮ ದೇವಸ್ಥಾನದಿಂದ ಹೊರಟ ಮೆರವಣಿಗೆ ಬನ್ನಿ ಮಂಟಪ ತಲಪುವ ವೇಳೆಗೆ ರಾತ್ರಿ 12 ಗಂಟೆ ದಾಟಿತ್ತು. ಮಧ್ಯರಾತ್ರಿ 1 ಗಂಟೆ ವೇಳೆಗೆ ತಹಶೀಲ್ದಾರ್ ಶ್ರೀನಿವಾಸ್ ಅವರು ಬನ್ನಿಯನ್ನು ಕಡಿದು ಸಂದೇಶ ನೀಡುವುದರೊಂದಿಗೆ ಈ ವರ್ಷದ ಅರಕಲಗೂಡು ದಸರಾ ಸಂಪನ್ನವಾಯಿತು. ಕ್ಷೇತ್ರದ ಶಾಸಕರಾದ ಎ ಟಿ ರಾಮಸ್ವಾಮಿ, ಮಠಾಧೀಶರುಗಳಾದ ಜಯದೇವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಸುಜ್ಞಾನಮೂರ್ತಿ ಮಹಾ ಸ್ವಾಮೀಜಿ ,ವಿವಿಧ ಸಮಾಜದ ಸಮುದಾಯದ ಗಣ್ಯರಲ್ಲದೆ ಸಹಸ್ರಾರು ಭಕ್ತಾದಿಗಳು ಉತ್ಸಾಹದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ್ದ ಸಹ ಸ್ರಾರು ಭಕ್ತ ಮಹಾಶಯರಿಗೆ ದಸರಾ ಉತ್ಸವದ ಸಮಿತಿಯಿಂದ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು.
18 ಸಮುದಾಯದವರ ದೇವರ ಮೆರವಣಿಗೆ
ಅರಕಲಗೂಡು ಹಾಗೂ ಸುತ್ತಮುತ್ತಲಿ ಗ್ರಾಮಗಳ 18 ಸಮುದಾಯದವರ ಆರಾಧ್ಯ ದೇವರುಗಳ ಉತ್ಸವದ ಜೊತೆಗೆ ವಚನಕಾರರಾದ ಜಗಜ್ಯೋತಿ ಬಸವೇಶ್ವರ, ದೇವರ ದಾಸಿಮಯ್ಯ, ಮಡಿ ವಾಳ ಮಾಚಯ್ಯ ರಾಮನಾಥಪುರದ ಸುಬ್ರಹ್ಮಣ್ಯೇಶ್ವರ ದೇಗುಲದ ಸ್ತಬ್ಧಚಿತ್ರ ಹಾಗೂ ರುದ್ರಪಟ್ಟಣದ ಸಂಗೀತ ಸಪ್ತಸ್ವರ ದೇವಾಲಯದ ಪ್ರತಿ ಸ್ತಬ್ಧಚಿತ್ರ , ಯೇಸುವಿನ ಸಂದೇಶದ ಜೊತೆ ಜೊತೆಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಮೆರವಣಿಗೆ ಈ ಬಾರಿಯ ಉತ್ಸವದ ವಿಶೇಷವಾಗಿತ್ತು.