Advertisement

ರಾಜಭವನದತ್ತ ಕುಮ್ಮನಂ

12:30 AM May 27, 2018 | |

ಹಿಂದೂ ಸಂಘಟನೆ, ಸಾಮಾಜಿಕ ಹೋರಾಟಗಳಲ್ಲಿ ನಿರತರಾಗಿದ್ದ ಕುಮ್ಮನಂ ರಾಜಶೇಖರನ್‌ ಅವರು ಎರಡೂವರೆ ವರ್ಷಗಳ ಹಿಂದೆ ಅಚ್ಚರಿಯ ರೀತಿಯಲ್ಲಿ ಕೇರಳ ಬಿಜೆಪಿಯ ಚುಕ್ಕಾಣಿ ಹಿಡಿದಿದ್ದರು. ಇದೀಗ ಅಷ್ಟೇ ಅಚ್ಚರಿಯ ಇನ್ನೊಂದು ಬೆಳವಣಿಗೆಯಲ್ಲಿ ಅವರು ಈಶಾನ್ಯದ ಮಿಜೋರಾಂ ರಾಜ್ಯಪಾಲರಾಗಿ ನಿಯುಕ್ತಿಗೊಂಡಿದ್ದಾರೆ. ರಾಜಕಾರಣಿಯಾಗಿ ಕುಮ್ಮನಂ ಇದ್ದಿದ್ದು ಬರೀ 29 ತಿಂಗಳಷ್ಟೇ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿ ರುವ ಇವರು 3 ದಶಕಕ್ಕೂ ಹೆಚ್ಚಿನ ಅವಧಿಯನ್ನು ಅವರು ಹಿಂದು ಸಮಾಜದ ಸುಧಾರಣೆ, ಹಿಂದುಪರ ಧ್ವನಿ ಎತ್ತುವ ಹೋರಾಟಗಳಲ್ಲೇ ಕಳೆದವರು. 

Advertisement

ಹವಾಯಿ ಚಪ್ಪಲಿ ಮೆಟ್ಟಿಕೊಂಡು, ಕೇರಳದ ಸಾಂಪ್ರದಾಯಿಕ ಬಿಳಿ ಪಂಚೆ, ಅರ್ಧ ತೋಳಿನ ಬಿಳಿ ಅಂಗಿ ಧರಿಸಿಕೊಂಡು ಹಿಂದುಪರ ಧ್ವನಿ ಎತ್ತುತ್ತಾ, ಹೋರಾಟ ನಡೆಸುತ್ತಾ ಬಂದ ಸರಳಜೀವಿ. ಸಂಘ ಹಾಗೂ ಬಿಜೆಪಿಯ ಕಾರ್ಯಾಲಯ ಅಥವಾ ಕಾರ್ಯಕರ್ತರ ಮನೆಯಲ್ಲೇ ವಸತಿ, ರೈಲು, ಬಸ್ಸಲ್ಲೇ ತಿರುಗಾಟ. ಜನರ ನಡುವೆಯೇ ಇದ್ದುಕೊಂಡು ಜನರನ್ನು ಒಗ್ಗೂಡಿಸಿದ ಸಂಘಟನಾ ಚತುರ ಈ ರಾಜಶೇಖರನ್‌. 70ರ ದಶಕದಲ್ಲಿ ಆರೆಸ್ಸೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿ ಸಾಮಾಜಿಕ ಕ್ಷೇತ್ರ ಪ್ರವೇಶಿಸಿದಂದಿನಿಂದ ರಾಜಭವನದ ತನಕ ಸಾಗಿ ಬಂದ ಈ 65ರ ಹರೆಯದ ಬ್ರಹ್ಮಚಾರಿಯ ಬದುಕೇ ಹೋರಾಟಮಯ. 

ರಾಜಶೇಖರನ್‌ ಹೆಸರಿನೊಂದಿಗೆ ಅಂಟಿಕೊಂಡಿರುವ ಕುಮ್ಮನಂ ಎಂಬುದು ಅವರ ಹುಟ್ಟೂರಿನ ಹೆಸರು. ಕೇರಳದ ಕೊಟ್ಟಾಯಂ ಜಿಲ್ಲೆಯ ಪುಟ್ಟ ಗ್ರಾಮವದು. 1952ರ ಡಿ. 23ರಂದು ನಾಯರ್‌ ಕುಟುಂಬದಲ್ಲಿ ಇವರು ಜನಿಸಿದರು. ಹುಟ್ಟೂರಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿ ಬಳಿಕ ಕೊಟ್ಟಾಯಂನ ಸಿಎಂಎಸ್‌ ಕಾಲೇಜಿನಲ್ಲಿ ಸಸ್ಯಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ. ಈ ಮಧ್ಯೆ 1970ರಲ್ಲಿ ಆರೆಸ್ಸೆಸ್‌ ಕಾರ್ಯ ಕರ್ತರಾಗಿ ಸೇರಿಕೊಳ್ಳುತ್ತಾರೆ. ಅಲ್ಲಿ ಹೋರಾಟದ ಕೆಚ್ಚು ಮೊಳಕೆಯೊಡೆಯುತ್ತದೆ. ವಿಜ್ಞಾನ ವಿದ್ಯಾರ್ಥಿ ರಾಜಶೇಖರನ್‌ ಆಸಕ್ತಿ ಬಳಿಕ ಪತ್ರಿಕೋದ್ಯಮದತ್ತ ತಿರುಗುತ್ತದೆ. ಪತ್ರಿ ಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮೋ ಅಭ್ಯಸಿಸುತ್ತಾರೆ. 1974ರಲ್ಲಿ ಮಲಯಾಳದ ದೀಪಿಕಾ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗುವ ಮೂಲಕ ವೃತ್ತಿ ಜೀವನ ಆರಂಭಿ ಸಿದ್ದರು. 2 ವರ್ಷಗಳ ಕಾಲ ವಿವಿಧ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ್ದರು. 1976ರಲ್ಲಿ ಪತ್ರಿಕೋದ್ಯಮ ತೊರೆದು ಭಾರತೀಯ ಆಹಾರ ಪ್ರಾಧಿಕಾರದಲ್ಲಿ ಸರ್ಕಾರಿ ನೌಕರನಾಗಿ ಸೇರಿಕೊಳ್ಳುತ್ತಾರೆ. ವೃತ್ತಿ ಜೀವನದ ಜತೆಜತೆಯಲ್ಲೇ ಸಾಮಾಜಿಕ ಕಾರ್ಯ ಮುಂದುವರಿಸುತ್ತಾರೆ. 1979ರಲ್ಲಿ ವಿಶ್ವ ಹಿಂದು ಪರಿಷತ್‌ನ ಕೊಟ್ಟಾಯಂ ಜಿಲ್ಲಾ ಕಾರ್ಯದರ್ಶಿಯಾಗಿ ನಿಯುಕ್ತಿಯಾಗುತ್ತಾರೆ. 1981ರಲ್ಲಿ ವಿಹಿಂಪದ ರಾಜ್ಯ ಜಂಟಿ ಕಾರ್ಯದರ್ಶಿಯಾಗುತ್ತಾರೆ. ಸಂಘ ಪರಿವಾರದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಾದಂತೆ, 1987ರಲ್ಲಿ ಸರ್ಕಾರಿ ನೌಕರಿ ತೊರೆದು ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತರಾದರು. 

ವಿಹಿಂಪ, ಕ್ಷೇತ್ರ ಸಂರಕ್ಷಣಾ ಸಮಿತಿ, ಬಾಲಸದನಂ ಮತ್ತು ಇಕಲ ವಿದ್ಯಾಲಯಗಳಂತಹ ಅಂಗಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ ಹಿಂದು ಐಕ್ಯ ವೇದಿ ಹಾಗೂ ಶಬರಿ ಮಲಾ ಅಯ್ಯಪ್ಪ ಸೇವಾ ಸಮಾಜಂನ ಪ್ರಧಾನ ಕಾರ್ಯ ದರ್ಶಿಯಾಗಿಯೂ ಸೇವೆ ಸಲ್ಲಿಸಿದರು. 70ರ ದಶಕದಲ್ಲಿ ಪತ್ರಿಕೋದ್ಯಮ ತೊರೆದಿದ್ದ ರಾಜಶೇಖರನ್‌ 2011ರಲ್ಲಿ ಜನ್ಮಭೂಮಿ ಪತ್ರಿಕೆಯ ಅಧ್ಯಕ್ಷರಾಗುವ ಮೂಲಕ ಮತ್ತೂಮ್ಮೆ ಪತ್ರಿಕಾ ಕ್ಷೇತ್ರಕ್ಕೆ ಬಂದರು. ಕುಮ್ಮನಂ ಅವರು ಮೊದಲ ಬಾರಿಗೆ ಸುದ್ದಿ ಮಾಡಿದ್ದು 1983ರಲ್ಲಿ ನಿಲಕ್ಕಲ್‌ ಹೋರಾಟದ ಮೂಲಕ. ಶಬರಿಮಲೆಯ ಸಮೀಪದಲ್ಲಿ ದಟ್ಟಾರಣ್ಯದ ನಡುವೆ ಇರುವ ಮಹದೇವ ದೇಗುಲವಿದೆ. ಒಂದು ದಿನ ದೇಗುಲದಿಂದ 200 ಮೀ. ದೂರದಲ್ಲಿ ಶಿಲುಬೆಯೊಂದು ಪತ್ತೆಯಾಗುತ್ತದೆ. ಸಮೀ ಪದ ಚರ್ಚ್‌ಗಳಿಂದ ಪಾದ್ರಿಗಳು, ಕ್ರಿಶ್ಚಿಯನ್ನರು ಸ್ಥಳಕ್ಕಾಗಮಿಸಿ ಅಲ್ಲಿ ಶೆಡ್‌ ನಿರ್ಮಿಸಿ ಪ್ರತಿದಿನ ಪ್ರಾರ್ಥನೆ ಆರಂಭಿಸುತ್ತಾರೆ. ಕೇರಳ ಸರ್ಕಾರ ಅಲ್ಲಿ ಚರ್ಚ್‌ ಸ್ಥಾಪನೆಗೆ ಒಂದು ಹೆಕೆcàರ್‌ ಭೂಮಿಯನ್ನು ಮಂಜೂರು ಕೂಡಾ ಮಾಡುತ್ತದೆ. ಇದರ ವಿರುದ್ಧ ಹೋರಾಟದ ನೇತೃತ್ವ ವಹಿಸಿದವರೇ ಈ ಕುಮ್ಮನಂ ರಾಜಶೇಖರನ್‌. 5 ತಿಂಗಳ ಕಾಲ ನಿರಂತರ ಹೋರಾಟದ ಬಳಿಕ ಹಿಂದುಗಳ ಪವಿತ್ರ ಅಯ್ಯಪ್ಪನ ಪೂಂಗವನಂನಿಂದ ಹೊರಗೆೆ, 4 ಕಿ.ಮೀ. ದೂರದಲ್ಲಿ ಚರ್ಚ್‌ ನಿರ್ಮಿಸಲು ಕ್ರಿಶ್ಚಿಯನ್ನರು ಒಪ್ಪಿಕೊಂಡರು. 

ದೇಗುಲಗಳಲ್ಲಿ ಪೂಜೆ ಹಕ್ಕು ಬ್ರಾಹ್ಮಣರಿಗಷ್ಟೇ ಅಲ್ಲ, ಎಲ್ಲಾ ಜಾತಿಗಳ ಜನರಿಗೂ ಸಿಗಬೇಕು. ಕರ್ಮದ ಮೂಲಕ ಬ್ರಾಹ್ಮಣ್ಯ ವನ್ನು ಯಾರು ಬೇಕಾದರೂ ಪಡೆಯ ಬಹುದು ಎಂಬುದಾಗಿ 1987ರಲ್ಲಿ ಕೇರಳದ ತ್ರಿಶ್ಶೂರು ಜಿಲ್ಲೆಯ ಚೆನ್ನ ಮಂಗಲಂನಲ್ಲಿ ವೈದಿಕ ಪಂಡಿತರು ಹಾಗೂ ವಿದ್ವಾಂಸರ ಸಮ್ಮುಖದಲ್ಲಿ ಪಾಳಿಯಂ ಘೋಷಣೆ ಎಂಬ ನಿರ್ಣಯ ವೊಂದನ್ನು ಕೈಗೊಳ್ಳ ಲಾಗುತ್ತದೆ. ಈ ಐತಿಹಾಸಿಕ ಪಾಳಿಯಂ ನಿರ್ಣಯದ ಹಿಂದೆ ಇದ್ದವರು ಇದೇ ಕುಮ್ಮನಂ ರಾಜಶೇಖರನ್‌.  

Advertisement

2003ರಲ್ಲಿ ಕಲ್ಲಿಕೋಟೆಯ ಮರಾಡ್‌ನ‌ಲ್ಲಿ ಮೀನುಗಾರರ ಸಾಮೂಹಿಕ ಹತ್ಯಾಕಾಂಡ ಪ್ರಕರಣದ ವೇಳೆ ನಿರಂತರ ಹೋರಾ ಟ ನಡೆಸಿ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿ ಸುವಲ್ಲಿ ಕುಮ್ಮನಂ ಪಾತ್ರ ಗಮನಾರ್ಹ. 2011ರಲ್ಲಿ ಶಬರಿಮಲೆಯಿಂದ ಅನತಿ ದೂರದಲ್ಲಿರುವ ಆರನ್ಮುಳದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆಯೊಂದನ್ನು ಕೇರಳ ಸರ್ಕಾರ ಹಾಕಿಕೊಂಡಿತ್ತು. ಪಾರ್ಥಸಾರಥಿ ದೇಗುಲದ ಸನಿಹದ 400 ಎಕರೆ ವ್ಯಾಪ್ತಿಯಲ್ಲಿ ಈ ಯೋಜನೆ ಕೈಗೊಳ್ಳಲು ಉದ್ದೇಶಿಸ ಲಾಗಿತ್ತು. ಅದರ ವಿರುದ್ಧ ಸತತ ಹೋರಾಟ ನಡೆಸಿ ಯೋಜನೆ ರದ್ದುಗೊಳಿಸುವಲ್ಲಿ ಕುಮ್ಮನಂ ಯಶಸ್ವಿ ಆದರು.

ನಿಷ್ಕ್ರಿಯವಾಗಿದ್ದ ಹಿಂದು ಐಕ್ಯ ವೇದಿ (ಕರ್ನಾಟಕದಲ್ಲಿ ಹಿಂದು ಜಾಗರಣ ವೇದಿಕೆ)ನೇತೃತ್ವವನ್ನು ಕುಮ್ಮನಂ ವಹಿಸಿಕೊಂಡ ಬಳಿಕ ತಾಲೂಕು, ಜಿಲ್ಲಾ ಮಟ್ಟಗ ಳಲ್ಲಿ ಕಟ್ಟಲಾಯಿತು. ಎಲ್ಲಾ ವರ್ಗದವ‌ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸತತ ಹೋರಾಟಗಳ ಮೂಲಕ ರಾಜ್ಯವ್ಯಾಪಿ ಸಕ್ರಿಯಗೊಳಿಸ ಲಾಯಿತು. ತಳಮಟ್ಟದ ಹಿಂದೂ ಸಮಾಜವನ್ನು ಮುಖ್ಯ ವಾಹಿನಿಗಂ ತರಲಾಯಿತು. ಹಿಂದುಪರ ವಿಷಯಗಳಿಗೆ ಧ್ವನಿಯಾಯಿತು. ಇದಕ್ಕೆ ನೆರವಾಗಿದ್ದು  ಕುಮ್ಮನಂ ಅವರ ಸಂಘಟನಾ ಚಾತುರ್ಯ ಎಂಬುದು ನಿಸ್ಸಂಶಯ.

ಈ ಸಂಘಟನಾ ಚಾತುರ್ಯವನ್ನು ಗುರುತಿಸಿದ ಬಿಜೆಪಿಯ ಕೇಂದ್ರ ನಾಯಕತ್ವ, ಕೇರಳದಲ್ಲಿ ಪಕ್ಷ ಬೇರೂರಲು ಹಿಂದೂಗಳ ಒಗ್ಗೂಡಿಸುವಿಕೆ ಅತ್ಯಗತ್ಯ ಎಂಬುದನ್ನು ಮನಗಂಡು ಕೇರಳ ಚುನಾವಣೆಗಿಂತ ತುಸು ಮುನ್ನ 2015ರ ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕುಮ್ಮನಂ ಅವರನ್ನು ಕರೆತಂದಿತು. ಕೇರಳ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ಕಿರು ಅವಧಿಯಲ್ಲೂ ಇವರ ಹೋರಾಟ ಮುಂದುವರಿದಿತ್ತು. ವಿಮೋಚನಾ ಯಾತ್ರೆ, ಜನರಕ್ಷಾ ಯಾತ್ರೆ, ವಿಕಾಸ ಯಾತ್ರೆಯ ನೇತೃತ್ವ ವಹಿಸಿದ್ದ ರಾಜಶೇಖರನ್‌ ದಲಿತ ಯುವಕನ ಹತ್ಯೆಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿದರು. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರವಾಸಗೈದು ಕೇರಳದ ಹೊರಗಡೆಯ ಮಲಯಾಳಿಗಳನ್ನು ಸೆಳೆಯಲು, ಯುವಕರನ್ನು ಒಗ್ಗೂಡಿಸುವ ಕಾರ್ಯಗೈದರು ಕುಮ್ಮನಂ. ಎಲ್ಲಾ ಜಾತಿಗಳ ಹಿಂದುಗಳನ್ನು ಒಗ್ಗೂಡಿಸುವ ಮೂಲಕ ಹಿಂದು ಮತ ಬ್ಯಾಂಕ್‌ ಅನ್ನು ಬಿಜೆಪಿಯತ್ತ ತಿರುಗಿಸುವ ಕಾರ್ಯ ಗೈದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದುಕೊಂಡ ಶೇಕಡಾವಾರು ಮತ ಗಮನಿಸಿದರೆ ಕುಮ್ಮನಂ ಅವರ ಈ ಹೆಜ್ಜೆ ಬಿಜೆಪಿಗೆ ಅನುಕೂಲವಾಗಿದೆ ಎಂಬುದು ಕಂಡುಬರುತ್ತದೆ. ಕೇರಳ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ವೇಳೆ ಕುಮ್ಮನಂ ಅವರು ಮಲಯಾಳ ಮಾಧ್ಯಮಗಳಲ್ಲಿ ಬಿಜೆಪಿಗೆ ಸ್ಥಾನ ಒದಗಿಸಿದ್ದು ಗಮನಾರ್ಹ ಸಂಗತಿ. ಟಿವಿ ಪ್ಯಾನೆಲ್‌ ಚರ್ಚೆಗಳಲ್ಲಿ ಬಿಜೆಪಿಯ ಪ್ರತಿನಿಧಿಯೇ ಇರುತ್ತಿರಲಿಲ್ಲ. ಆ ಕೊರತೆಯನ್ನು ಕುಮ್ಮನಂ ನೀಗಿಸಿದರು. ಸಾಮಾಜಿಕ ಹೋರಾಟಗಾರರಾಗಿ, ಪಕ್ಷವೊಂದರ ನಾಯಕ ರಾಗಿ ಯಶಸ್ವಿ ಸಂಘಟನಾ ಚಾತುರ್ಯತೆ ಮೆರೆದ ಕುಮ್ಮನಂ ಇದೀಗ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿ ಹೊರಲು ಹೊರಟು ನಿಂತಿದ್ದಾರೆ. ಕೇರಳದ ಚೆಂಗನ್ನೂರು ಕ್ಷೇತ್ರದ ಉಪಚುನಾವಣೆ ಹೊತ್ತಲ್ಲೇ ಈ ನೇಮಕಾತಿ ಆಗಿರುವುದರ ಹಿಂದಿನ ರಾಜಕೀಯ ಕಾರಣದ ಲೆಕ್ಕಾಚಾರವೂ ನಡೆದಿದೆ.

ರಾಮಚಂದ್ರ ಮುಳಿಯಾಲ

Advertisement

Udayavani is now on Telegram. Click here to join our channel and stay updated with the latest news.

Next