Advertisement

Aadhar Card: ಆಧಾರ್‌ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!

12:13 PM Dec 21, 2024 | Team Udayavani |

ಉಡುಪಿ: 10 ವರ್ಷಗಳ ಹಿಂದೆ ಆಧಾರ್‌ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರೂ ಗುರುತಿನ ಹಾಗೂ ವಿಳಾಸ ದಾಖಲೆಯನ್ನು ಸಮೀಪದ ಆಧಾರ್‌ ಕೇಂದ್ರದಲ್ಲಿ ಮರು ಅಪ್ಲೋಡ್‌ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ ಈ ನಿಟ್ಟಿನಲ್ಲಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊಸ ನೋಂದಣಿ, ಮರು ನೋಂದಣಿ ಹಾಗೂ ಬಯೋ ಮೆಟ್ರಿಕ್‌ ನೀಡಿ, ಆಧಾರ್‌ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಆಧಾರ್‌ ಮಾನಿಟರಿಂಗ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯ ಆಧಾರ್‌ ನೋಂದಣಿ ಪ್ರಾಧಿಕಾರದ ಸೂಚನೆಯಂತೆ ಜಿಲ್ಲೆಯ ಆಯ್ದ ಬ್ಯಾಂಕ್‌ಗಳು, ಅಂಚೆ ಕಚೇರಿಗಳಲ್ಲಿ ಆಧಾರ್‌ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದ್ದು, ಕಚೇರಿ ಸಮಯದಲ್ಲಿ ಸಾರ್ವಜನಿಕರು ಆಧಾರ್‌ ಸೇವೆಯನ್ನು ಪಡೆಯಬಹುದು ಎಂದರು.

ನಿಷ್ಕ್ರಿಯಗೊಳ್ಳುವ ಅಪಾಯ

10 ವರ್ಷಗಳ ಹಿಂದೆ ಆಧಾರ್‌ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬರೂ ಮರು ನೋಂದಣಿ ಮಾಡಬೇಕಾಗಿದ್ದು, ಇದನ್ನು ಆಧಾರ್‌ ಕೇಂದ್ರಗಳಲ್ಲಿ ಇಲ್ಲವೇ myAadhaar.uidai.gov.in. portal ಮೂಲಕ ನೇರವಾಗಿ ನವೀಕರಿಸಲು ಅವಕಾಶವಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು. ಒಂದೊಮ್ಮೆ ನವೀಕರಿಸದಿದ್ದಲ್ಲಿ ಆಧಾರ್‌ ಕಾರ್ಡ್‌ ನಿಷ್ಕ್ರಿಯಯಗೊಳ್ಳುತ್ತದೆ. ಇದರಿಂದ ಸೌಲಭ್ಯ ಅಥವಾ ಸೇವೆ ಪಡೆಯಲು ಅನಾನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Advertisement

ಮಕ್ಕಳ ಆಧಾರ್‌ ನೋಂದಣಿ

5 ವರ್ಷದೊಳಗಿನ ಮಕ್ಕಳು ಹೊಸದಾಗಿ ಆಧಾರ್‌ ಕಾರ್ಡ್‌ ನೋಂದಣಿಯನ್ನು ಸಮೀಪದ ಅಂಚೆ ಕಚೇರಿ, ತಾಲೂಕು ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಆಧಾರ್‌ ಕಾರ್ಡ್‌ ಹೊಂದಿದವರು ಮರಣ ಹೊಂದಿದ್ದಲ್ಲಿ ಅವರ ಕಾನೂನು ಬದ್ಧ ವಾರಸುದಾರರು ಅವರ ಮರಣ ಪ್ರಮಾಣ ಪತ್ರವನ್ನು ನೀಡಿ, ಆಧಾರ್‌ ಕಾರ್ಡ್‌ ಅನ್ನು ತಪ್ಪದೇ ರದ್ದುಪಡಿಸಬೇಕು. ರದ್ದುಪಡಿಸದಿದ್ದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಇದರ ಉಪಯೋಗವಾಗುವ ಸಾಧ್ಯತೆಗಳಿದ್ದು, ಈ ರೀತಿಯಾದರೆ ವಾರಸುದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮರುನೋಂದಣಿ ಬಗ್ಗೆ ಹೆಚ್ಚಿನಪ್ರಚಾರ ನೀಡಿ ನವೀಕರಣಗೊಳಿಸಲು ಉತ್ತೇಜಿಸಬೇಕು. ಶಾಲಾ ವಿದ್ಯಾರ್ಥಿಗಳಿದ್ದಲ್ಲಿ ಕ್ಲಸ್ಟರ್‌ ಮಟ್ಟದಲ್ಲಿ ಕ್ಯಾಂಪ್‌ಗ್ಳನ್ನು ನಿಯೋಜಿಸಿ, ಬಯೋಮೆಟ್ರಿಕ್‌ ಮಾಡಿಸಬೇಕು ಎಂದು ಡಿಸಿ ಸೂಚನೆ ನೀಡಿದರು.

ನಕಲಿ ಆಧಾರ್‌ ಪರಿಶೀಲನೆಯಾಗಲಿ

ಹೊರದೇಶಗಳಿಂದ ಬಂದಿರುವ ಜನರು ಸಹ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಆಧಾರ್‌ ನೋಂದಣಿಗೆ ಮುಂದಾಗುವ ಸಾಧ್ಯತೆಗಳಿರುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಕೆಲವರು ನಕಲಿ ಆಧಾರ್‌ ಪ್ರತಿಗಳನ್ನು ಹೊಂದಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿವೆ. ಇವುಗಳ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಡಿಸಿ ಸೂಚಿಸಿದರು.

ಯುಐಡಿಎಐ ಡೈರೆಕ್ಟರ್‌ ಮನೋಜ್‌ ಕುಮಾರ್‌, ಯುಐಡಿಎಐ ಅಸಿಸ್ಟೆಂಟ್‌ ಮ್ಯಾನೇಜರ್‌ ಮೊಹಮ್ಮದ್‌ ಮೂಸಾಬ್‌, ರಿಕೇಶ್‌, ಡಿಡಿಪಿಯು ಗಣಪತಿ, ಡಿಡಿಪಿಐ ಮಾರುತಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್‌ ಬಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next