ಬೆಂಗಳೂರು: ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಆಸ್ಪತ್ರೆ) ಸ್ಟಾಫ್ ನರ್ಸ್‌ಗಳ ಗುತ್ತಿಗೆ ನೇಮಕಾತಿ ಅವಧಿ ಮುಕ್ತಾಯಗೊಳಿಸುವ ಸಂಬಂಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ನೀಡಿದೆ.
ಈ ಕುರಿತಂತೆ ಎನ್.ಆರ್.ಆಶಾ ಸೇರಿ 38 ಸ್ಟಾಫ್ ನರ್ಸ್‌ಗಳು ಸಲ್ಲಿಸಿದ ತರಕಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜಿ.ನರೇಂದರ್ ಅವರಿದ್ದ ರಜಾ ಕಾಲದ ಏಕಸದಸ್ಯ ನ್ಯಾಯಪೀಠ, ಅರ್ಜಿಯ ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮಕ್ಕೆ ಮುಂದಾಗದಂತೆ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು
ಸಂಶೋಧನಾ ಸಂಸ್ಥೆ (ಆಸ್ಪತ್ರೆ) ನಿರ್ದೇಶಕರಿಗೆ ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿತು.
ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಎಲ್ಲ ವಿಭಾಗಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸ್ಟಾಫ್ ನರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವವರ ಗುತ್ತಿಗೆ ಅವಧಿಯನ್ನು ಡಿ.31ರಿಂದ ಅನ್ವಯವಾಗುವಂತೆ ಮುಕ್ತಾಯಗೊಳಿಸಲು ಸೂಚಿಸಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು. ಅದನ್ನು ರದ್ದುಪಡಿಸುವಂತೆ ಕೋರಿ ಎನ್.ಆರ್.ಆಶಾ ಸೇರಿ 38 ಸ್ಟಾಫ್ ನರ್ಸಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸುತ್ತೋಲೆ ರದ್ದು ಕೋರಿ ಅರ್ಜಿ ಸಲ್ಲಿಕ ಅರ್ಜಿದಾರರು 2008ರಿಂದ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿಸ್ಟಾಫ್ ನರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಮಧ್ಯೆ 104 ಸ್ಟಾಫ್ ನರ್ಸ್‌ಗಳ ನೇರ ನೇಮಕಾತಿಗೆ 2018ರ ಆ.7ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆಗ ಸೆ.9ರಂದು ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದ ಅರ್ಜಿದಾರರು, ನೇಮಕಾತಿ ಪ್ರಕ್ರಿಯೆಯಲ್ಲಿ ತಮಗೆ ಆದ್ಯತೆ ಹಾಗೂ ವಯೋಮಿತಿ ವಿನಾಯಿತಿ ನೀಡುವಂತೆ ಕೋರಿದ್ದರು.
ಈ ಮಧ್ಯೆ ಡಿ.31ರಿಂದ ಅನ್ವಯವಾಗುವಂತೆ ಸ್ಟಾಫ್ ನರ್ಸ್‌ಗಳ ಗುತ್ತಿಗೆ ಅವಧಿ ಮುಕ್ತಾಯಗೊಳಿಸುವಂತೆ ಡಿ.17ರಂದು ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು. ಹಾಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸ್ಟಾಫ್ ನಸ್ìಗಳು ನಿಯಮಿತ ನೇಮಕಾತಿ ಪ್ರಕ್ರಿಯೆ ಮೂಲಕ ಹೊಸದಾಗಿ ಅರ್ಜಿ ಸಲ್ಲಿಸಬಹುದು ಎಂದೂ ಸುತ್ತೋಲೆಯಲ್ಲಿ ಹೇಳಲಾಗಿತ್ತು. ಆದರೆ, ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ 38 ಸ್ಟಾಫ್ ನರ್ಸ್‌ಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಗುತ್ತಿಗೆ ಅವಧಿ ಮುಕ್ತಾಗೊಳಿಸುವ ಸಂಬಂಧ ಹೊರಡಿಸಿರುವ ಸುತ್ತೋಲೆ ರದ್ದುಪಡಿಸುವಂತೆ ಕೋರಿದ್ದಾರೆ. ಜತೆಗೆ, ನೇಮಕಾತಿಯಲ್ಲಿ ತಮಗೆ ಮೊದಲ ಆದ್ಯತೆ ನೀಡುವಂತೆ ಈ ಹಿಂದೆ ನೀಡಿರುವ ಮನವಿಯನ್ನು ಪರಿಗಣಿಸಲು ನಿರ್ದೇಶಕರಿಗೆ ಸೂಚಿಸುವಂತೆ ಕೋರಿದ್ದಾರೆ