ಹೊಸಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಾಲೂಕು ಸಮಿತಿ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು ತಹಶೀಲ್ದಾರ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ದೇವದಾಸಿ ಮಹಿಳೆಯರಿಗೆ ಶೀಘ್ರವೇ ನಿವೇಶನ ಹಂಚಿಕೆ ಮಾಡಬೇಕು. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಎಲ್ಲ ಕುಟುಂಬಗಳಿಗೆ ಮಾಸಿಕ 7500 ರೂ ಸಹಾಯ ಧನ ಕನಿಷ್ಠ ಆರು ತಿಂಗಳ ಕಾಲ ನೀಡಬೇಕು. ಪ್ರತಿ ಕುಟುಂಬದ ತಲಾ ಸದಸ್ಯರಿಗೆ ಮಾಸಿಕ ಕನಿಷ್ಠ 10 ಕೆಜಿ ಸಮಗ್ರ ಆಹಾರ ಮತ್ತು ಆರೋಗ್ಯ ಸಾಮಾಗ್ರಿ ಕಿಟ್ ಒದಗಿಸಬೇಕು. ಗ್ರಾಮೀಣ ಪ್ರದೇಶದ ಎಲ್ಲಾ ನಾಗರಿಕರ ಉಚಿತ ಆರೋಗ್ಯ ತಪಾಸಣೆಗೆ ಸಾರ್ವಜನಿಕ ಆರೋಗ್ಯ ಇಲಾಖೆಯ ಮೂಲಕ ಕ್ರಮವಹಿಸಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು 600 ರೂಗಳಿಗೆ ಹೆಚ್ಚಿಸಿ, ನಗರ ಪ್ರದೇಶದ ಜನರಿಗೂ ಉದ್ಯೋಗ ಖಾತ್ರಿ ಕೆಲಸವನ್ನು ನೀಡಬೇಕು.
ದೇವದಾಸಿ ಮಹಿಳೆಯರಿಗೆ ನೀಡಲಾದ ಸಹಾಯಧನದ ಸಾಲ ಹಾಗೂ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲಗಳನ್ನು ಮನ್ನಾ ಮಾಡಬೇಕು. ದೇವದಾಸಿ ಮಹಿಳೆಯರ ಮಾಸಿಕ ಪಿಂಚಣಿ, ಸಹಾಯಧನವನ್ನು ಬಾಕಿ ಸಮೇತ ಮೂರು ತಿಂಗಳ ಮೊತ್ತವನ್ನು ಮುಂಗಡವಾಗಿ ನೀಡಬೇಕು. ವಯೋ ಭೇಧವಿಲ್ಲದೇ ಎಲ್ಲಾ ದೇವದಾಸಿ ಮಹಿಳೆಯರಿಗೆ ಪಿಂಚಣಿ, ಸಹಾಯಧನವನ್ನು ಕೂಡಲೆ ವಿಸ್ತರಿಸಿ ಜಾರಿಗೊಳಿಸಬೇಕು. ಎಲ್ಲ ದೇವದಾಸಿ ಮಹಿಳೆಯರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ತಲಾ ಐದು ಎಕರೆ ಜಮೀನು ಉಚಿತವಾಗಿ ನೀಡಬೇಕು.
ಅದೇ ರೀತಿ, ಹಿತ್ತಲು ಹಾಗೂ ನಿವೇಶನ ಸಹಿತ 10 ಲಕ್ಷ ರೂ ಮೌಲ್ಯದ ಮನೆಯನ್ನು ಉಚಿತವಾಗಿ ಒದಗಿಸಬೇಕು. ಭೂಸುಧಾರಣಾ ತಿದ್ದುಪಡಿ ಕಾಯ್ದೆ-2020 ಹಾಗೂ ಕಾರ್ಪೊರೇಟ್ ಕಂಪನಿಗಳ ಗುತ್ತಿಗೆ ಬೇಸಾಯ ಕಾಯ್ದೆ ಹಾಗೂ ಅವರಿಗೆ ಗುತ್ತಿಗೆಗೆ ಜಮೀನು ಒದಗಿಸುವ ಕೇಂದ್ರದ ಕಾಯ್ದೆಗಳನ್ನು ವಾಪಾಸು ಪಡೆಯಬೇಕು. ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಹಾಗೂ ವಿದ್ಯುತ್ಛಕ್ತಿ ತಿದ್ದುಪಡಿ ಮಸೂದೆ-2020 ಗಳನ್ನು ವಾಪಾಸು ಪಡೆಯ ಬೇಕು ಮತ್ತು ಕಾರ್ಮಿಕರ ಕಾಯ್ದೆ ಜಾರಿಯ ತಡೆಯನ್ನು ವಾಪಾಸು ಪಡೆಯಬೇಕು. ಯಾವುದೇ ಕಾರಣಕ್ಕೆ ದುಡಿಮೆಯ ಅವಧಿಯನ್ನು ಈಗಿರುವ 8 ತಾಸುಗಳಿಗಿಂತ ಹೆಚ್ಚಿಸಬಾರದು. ಸಾರ್ವಜನಿಕ ರಂಗದ ಕೈಗಾರಿಕೆಗಳನ್ನು ಖಾಸಗೀಕರಣ ಮಾಡಬಾರದು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.