Advertisement

ಇ-ಕಾಮರ್ಸ್ ಕಾಡುವ ಆತಂಕ ‌

12:36 AM Mar 09, 2020 | Lakshmi GovindaRaj |

ಬೆರಳ ತುದಿಯಲ್ಲಿ ಗುಂಡಿ ಒತ್ತಿದರೆ ಸಾಕು, ಮನೆಗೆ ತರಕಾರಿ ಬಂದು ಬೀಳುತ್ತಿದೆ. ಊಟ ಬರುತ್ತದೆ. ಅದೇ ಗುಂಡಿ ಒತ್ತಿದರೆ, ನಾವಿದ್ದಲ್ಲಿಗೇ ಅಪರಿಚಿತನೊಬ್ಬ ಬಂದು ನಾವು ಸೂಚಿಸಿದಲ್ಲಿಗೆ ಕರೆದೊಯ್ದು ಬಿಡುತ್ತಾನೆ. ಇದು ತಂತ್ರಜ್ಞಾನದ ಚಮತ್ಕಾರ. ಹೌದು, ಇತ್ತೀಚಿನ ವರ್ಷಗಳಲ್ಲಿ ಇ-ಕಾಮರ್ಸ್‌ ವಹಿವಾಟು ಉಚ್ಛಾಯ ಸ್ಥಿತಿಗೆ ಏರಿದೆ. ಆದರ ಬೆನ್ನಲ್ಲೇ ಆಗಾಗ್ಗೆ ನಡೆಯುವ ಆತಂಕಕಾರಿ ಘಟನೆಗಳು ಈ ಉದ್ಯಮವನ್ನು ಹಲವು ವರ್ಷಗಳ ನಂತರವೂ ಅನುಮಾನದಿಂದಲೇ ನೋಡುವಂತೆ ಮಾಡುತ್ತಿವೆ. ಇ-ಕಾಮರ್ಸ್‌ ನಿಂದ ಇಂದು ಎದುರಿಸುತ್ತಿರುವ ಸವಾಲುಗಳ ಸುತ್ತ ಈ ಬಾರಿಯ ಸುದ್ದಿ ಸುತ್ತಾಟ….

Advertisement

ಘಟನೆ ಸಮಯ ರಾತ್ರಿ 10 ಗಂಟೆ. ಮೆಜೆಸ್ಟಿಕ್‌ನಿಂದ ಫ‌ುಡ್‌ಗಾಗಿ ಆರ್ಡರ್‌ ಬರುತ್ತದೆ. ಅದನ್ನು ಪ್ಯಾಕ್‌ ಮಾಡಿಸಿಕೊಂಡು, ಡೆಲಿವರಿ ಬಾಯ್‌ ಮುಬಾರಕ್‌ ಊಟ ತೆಗೆದುಕೊಂಡು ಸ್ಥಳಕ್ಕೆ ಧಾವಿಸುತ್ತಾರೆ. ಆದರೆ, ಆರ್ಡರ್‌ ಮಾಡಿದವರ ಬಳಿ ದುಡ್ಡು ಇರಲಿಲ್ಲ. ಇದನ್ನು ಆಕ್ಷೇಪಿಸಿದ್ದಕ್ಕೆ, ಫ‌ುಡ್‌ ಕಿತ್ತುಕೊಂಡು ಡೆಲಿವರಿ ಬಾಯ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಆರೋಪಿಗಳು ಪರಾರಿಯಾಗುತ್ತಾರೆ.

ಘಟನೆ ಈಚೆಗೆ ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ ರಾತ್ರಿ 10ರ ಸುಮಾರಿಗೆ ಡೆಲಿವರಿ ಬಾಯ್‌ ಊಟ ತೆಗೆದುಕೊಂಡು ಹೋಗುತ್ತಿದ್ದ. ಅಲ್ಲಿದ್ದ ಯುವತಿಗೆ ತನ್ನ ಮೊಬೈಲ್‌ ತೋರಿಸಿ, ಆರ್ಡರ್‌ ಮಾಡಿದ ಗ್ರಾಹಕನ ವಿಳಾಸ ಕೇಳಲು ಮುಂದಾದ. ಆ ವಿಳಾಸ ಓದುವ ಸಂದರ್ಭದಲ್ಲಿ ಡೆಲಿವರಿ ಬಾಯ್‌ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿಬಿಟ್ಟ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಇ-ಕಾಮರ್ಸ್‌ ವಹಿವಾಟು ಹೊಸ ಅಲೆ ಸೃಷ್ಟಿಸುತ್ತಿದೆ.

ನಾವಿದ್ದಲ್ಲಿಯೇ ತರಕಾರಿಯಿಂದ ಹಿಡಿದು ಎಲ್ಲವೂ ಕೈಗೆಟಕುವ ದರದಲ್ಲಿ ಬಂದು ಬೀಳುತ್ತದೆ. ಜತೆಗೆ ಆರ್ಥಿಕ ಬೆಳವಣಿಗೆಗೂ ದೊಡ್ಡ ಕೊಡುಗೆ ನೀಡುತ್ತಿದೆ. ಇದೆಲ್ಲವೂ ತಂತ್ರಜ್ಞಾನದ ಚಮತ್ಕಾರ. ಆದರೆ, ತಡರಾತ್ರಿ 1 ಗಂಟೆಯಾದರೂ ಕ್ರಿಯಾಶೀಲವಾಗಿರುವ ಈ ಉದ್ಯಮದಲ್ಲಿ ಸುರಕ್ಷತೆಯ ಪ್ರಶ್ನೆಗೆ ಮಾತ್ರ ಉತ್ತರ ಸಿಗುತ್ತಿಲ್ಲ. ಈ ಸುರಕ್ಷತೆ ಪ್ರಶ್ನೆ ಆರ್ಡರ್‌ ಮಾಡುವ ಗ್ರಾಹಕ ಮತ್ತು ಅದನ್ನು ಆರ್ಡರ್‌ ತಲುಪಿಸುವ ಡೆಲಿವರಿ ಬಾಯ್‌ ಇವರಿಬ್ಬರನ್ನೂ ಅನುಮಾನದಿಂದಲೇ ನೋಡುವಂತೆ ಮಾಡುತ್ತಿದೆ.

ಅಮೆಜಾನ್‌, ಫ್ಲಿಪ್‌ಕಾರ್ಟ್‌, ಝೊಮ್ಯಾಟೊ, ಸ್ವಿಗ್ಗಿ, ಬೈಕ್‌ ಟ್ಯಾಕ್ಸಿ, ಊಬರ್‌, ಓಲಾ, ಡೆಂಝೊ ಹೀಗೆ ನಿತ್ಯ ಕೋಟ್ಯಂತರ ವಹಿವಾಟು ನಡೆಸುವಂತಹ ಹತ್ತಾರು ಕಂಪನಿಗಳು ನಗರದಲ್ಲಿವೆ. ಅವರ ಕೆಳಗೆ 20-25 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪ್ರತಿ ಚಲನ-ವಲನಗಳು ಮಾಲಿಕರಿಗೆ ಜಿಪಿಎಸ್‌ ಮೂಲಕ ಗೊತ್ತಾಗುತ್ತಿರುತ್ತದೆ. ಅವರಿಗೂ ಒಂದು ರೇಟಿಂಗ್‌ ನೀಡಲಾಗಿದೆ.

Advertisement

ಇದೆಲ್ಲದರ ನಡುವೆಯೂ ಆಗಾಗ್ಗೆ ಒಂದಿಲ್ಲೊಂದು ಅಹಿತಕರ ಘಟನೆಗಳು ವರದಿ ಆಗುತ್ತಿವೆ. ಆಗಾಗ್ಗೆ ನಡೆಯುವ ಇಂತಹ ಘಟನೆಗಳು ಉದ್ಯಮಕ್ಕೆ ಕಪ್ಪುಚುಕ್ಕೆ. ವಾಸ್ತವವಾಗಿ ಈ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳೇನು? ಇದಕ್ಕೆ ಕಡಿವಾಣ ಹಾಕುವಲ್ಲಿ ಕಂಪನಿಗಳು ಮತ್ತು ಪೊಲೀಸ್‌ ಇಲಾಖೆ ಏನು ಮಾಡಿವೆ? ಗ್ರಾಹಕರು ಮತ್ತು ಡೆಲಿವರಿ ಬಾಯ್‌ಗಳ ಕತೆ ಏನು? ಎಂಬುದೇ ತಿಳಿಯುವುದಿಲ್ಲ ಹೀಗಾಗಿ ಅನುಮಾನ ಅನಿವಾರ್ಯ.

ಯಾರು ಎಷ್ಟು ಸುರಕ್ಷಿತ?: ರಾತ್ರಿ 1ರ ಸುಮಾರಿಗೆ ಬರುವ ಕರೆಯನ್ನು ಸ್ವೀಕರಿಸಿ, ಗ್ರಾಹಕ ಇದ್ದಲ್ಲಿಗೇ ಹೋಗಿ, ಆತ ಸೂಚಿಸಿದ ಆಹಾರ ಅಥವಾ ಇತರ ವಸ್ತುವನ್ನು ತಲುಪಿಸುವುದು ಸವಾಲು. 50-100 ರೂ. ಗಳಿಕೆಗಾಗಿ ನಗರದ ಹೊರವಲಯದ ರಸ್ತೆಯಲ್ಲಿ ಕಿಡಿಗೇಡಿಗಳ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕ್ಯಾಶ್‌ ಆ್ಯಂಡ್‌ ಕ್ಯಾರಿ ಮೂಲಕ ಖರೀದಿಸುವ ಗ್ರಾಹಕರು ಹಣ ಕೊಡದೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ದಾಖಲಾಗಿವೆ.

ಅದರಲ್ಲೂ ಮೆಜೆಸ್ಟಿಕ್‌, ಸೋಲದೇವನಹಳ್ಳಿ, ಎಲೆಕ್ಟ್ರಾನಿಕ್‌ ಸಿಟಿ, ಹೊಸೂರು ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ಪೀಣ್ಯ, ಬ್ಯಾಟರಾಯನಪುರ, ಬ್ಯಾಡರಹಳ್ಳಿ ಹೀಗೆ ಕೆಲವೊಂದು ಪ್ರದೇಶಗಳ ಕಡೆಗೆ ಹೋಗಲು ಡೆಲಿವರಿ ಬಾಯ್‌ಗಳು ಹಿಂದೇಟು ಹಾಕುವ ಸ್ಥಿತಿ ಇದೆ.ಫ‌ುಡ್‌ ಡೆಲಿವರಿ ಮಾಡಿ ವಾಪಸ್‌ ಬರುವ ಸಂದರ್ಭದಲ್ಲಿ ಕಿಡಿಗೇಡಿಗಳು ಆಹಾರ ಪದಾರ್ಥಕ್ಕಾಗಿಯೇ ಅಡ್ಡಗಟ್ಟಿ ಹಲ್ಲೆ ನಡೆಸಿ ಫ‌ುಡ್‌ ಕಸಿದುಕೊಂಡಿದ್ದಾರೆ. ಘಟನೆ ನಡೆದ ನಂತರ ಕಂಪನಿಯು ವಿಮೆಯಂತಹ ನೆರವಿಗೆ ಧಾವಿಸುತ್ತಿರಬಹುದು. ಆದರೆ, ಸಿಬ್ಬಂದಿ ಸುರಕ್ಷತೆ ಏನು ಎಂಬುದಕ್ಕೆ ಕಂಪನಿ ಮೌನವೇ ಉತ್ತರ ಎನ್ನುತ್ತಾರೆ ಫ‌ುಡ್‌ ಡೆಲಿವರಿ ಬಾಯ್‌ ಪ್ರವೀಣ್‌.

ಭಯದಲ್ಲಿ ಚಾಲಕರು: ಸಾರ್ವಜನಿಕರನ್ನು ಒಂದೆಡೆಯಿಂದ ಮತ್ತೂಂದೆಡೆ ಕರೆದೊಯ್ಯುವ ಬೈಕ್‌ ಟ್ಯಾಕ್ಸಿಗಳು, ಕ್ಯಾಬ್‌ಗಳು ನಗರದಲ್ಲಿ ಸಕ್ರಿಯವಾಗಿವೆ. ಅವುಗಳ ಚಾಲಕರ ಬದುಕು ದುಸ್ತರವಾಗಿದೆ. ಬೈಕ್‌ ಟ್ಯಾಕ್ಸಿಯ ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು, “ಸಂಜೆ ಏಳು ಗಂಟೆ ನಂತರ ಅಥವಾ 20-30 ಕಿ.ಮೀ. ದೂರದ ಪ್ರದೇಶಗಳಿಗೆ ಕರೆದೊಯ್ಯುವಾಗ ಭಯದಲ್ಲಿಯೇ ಹೋಗುತ್ತೇವೆ. ಕೆಲವರು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ನಡೆಸಿದ ಘಟನೆಗಳು ಸಹೋದ್ಯೋಗಿಯೊಂದಿಗೇ ನಡೆದಿದೆ. ಎಲ್ಲಿಯೂ ಪ್ರಕರಣ ದಾಖಲಿಸಿಲ್ಲ. ಇನ್ನು ಪೊಲೀಸರ ಪ್ರತಿಕ್ರಿಯೆಯೂ ಅಷ್ಟಕ್ಕಷ್ಟೇ. ಹಲ್ಲೆ ಮಾಡುವವರಿಗೂ ಇದರಿಂದ ಇನ್ನಷ್ಟು ಕುಮ್ಮಕ್ಕು ಸಿಕ್ಕಂತಾಗಿದೆ.

ಪೊಲೀಸ್‌ ಇಲಾಖೆ ಕ್ರಮಗಳೇನು?: ಈ ಮೊದಲು ನಗರದಲ್ಲಿ ನಡೆದ ಇ-ಕಾಮರ್ಸ್‌ ಸಿಬ್ಬಂದಿ ಮತ್ತು ಗ್ರಾಹಕರ ಮೇಲಿನ ಹಲ್ಲೆ ಹಾಗೂ ದೌರ್ಜನ್ಯ ಸಂಬಂಧ ನಗರ ಪೊಲೀಸರು ಕೆಲವೊಂದು ಎಚ್ಚರಿಕೆಯ ಕ್ರಮ ಕೈಗೊಂಡಿದ್ದರು. ಸಿಬ್ಬಂದಿ ನೇಮಕ ಸಂದರ್ಭದಲ್ಲಿ ಸಂಸ್ಥೆಗಳು ಆತನ ಪೂರ್ವಪರ ಪರಿಶೀಲಿಸಿ ದಾಖಲೆ ಪಡೆಯಬೇಕು. ಅಗತ್ಯಬಿದ್ದಲ್ಲಿ ಪೊಲೀಸರಿಂದ ಎನ್‌ಒಸಿ ಪಡೆಯಬೇಕು ಎಂಬ ಇತ್ಯಾದಿ ಅಂಶಗಳ ಮಾರ್ಗಸೂಚಿಗಳನ್ನು ನೀಡಿತ್ತು. ಆದರೆ, ಈ ಸೂಚನೆಗಳು ಪರಿಣಾಮಕಾರಿ ಅನುಷ್ಠಾನವಾಗಿಲ್ಲ. ಇನ್ನು ಗ್ರಾಹಕರು ತಮ್ಮ ಮೇಲಿನ ಹಲ್ಲೆ ಸಂಬಂಧ ಸಮೀಪದ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅನಧಿಕೃತ ಸಂಸ್ಥೆಗಳು: ಇ-ಕಾಮರ್ಸ್‌ ಸಂಸ್ಥೆಗಳ ಪೈಕಿ ಕೆಲವೊಂದು ಅನಧಿಕೃತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ಬೈಕ್‌ ಟ್ಯಾಕ್ಸಿ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಗಳೇ ಅಧಿಕ. ಅವುಗಳ ಪತ್ತೆಗೆ ನಿರಂತರವಾಗಿ ವಿಶೇಷ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಗ್ರಾಹಕರನ್ನು ಕರೆದೊಯ್ಯುವ ಸಂಸ್ಥೆಯ ಉದ್ಯೋಗಿ, ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು ತಡೆದು ತಪಾಸಣೆ ನಡೆಸಿದಾಗ ತನ್ನ ಸಂಬಂಧಿ ಅಥವಾ ಸ್ನೇಹಿತ ಎಂದು ಹೇಳಿಕೊಂಡು ವಂಚನೆ ಮಾಡುತ್ತಿದ್ದಾರೆ. ಇನ್ನು ಕೊರಿಯರ್‌ ಮಾದರಿ ಕೆಲಸ ಮಾಡುವ ಸಂಸ್ಥೆಗಳು ಕೂಡ ಅನಧಿಕೃತವಾಗಿ ನಡೆಯುತ್ತವೆ ಎನ್ನುತ್ತಾರೆ ನಗರ ಪೊಲೀಸರು.

ಕಂಪನಿಯಿಂದ ಮುನ್ನೆಚ್ಚರಿಕಾ ಕ್ರಮಗಳಿಲ್ಲ: ಘಟನೆಗಳು ಸಂಭವಿಸಿದಾಗ, ಕಂಪನಿಗೆ ಮಾಹಿತಿ ನೀಡಲಾಗುತ್ತದೆ. ಆಗ, ಹತ್ತಿರದ ಮತ್ತೂಬ್ಬ ಡೆಲಿವರಿ ಬಾಯ್‌ ಅನ್ನು ನಮ್ಮ ಮೇಲಧಿಕಾರಿಗಳು ಸ್ಥಳಕ್ಕೆ ಕಳುಹಿಸುತ್ತಾರೆ. ಘಟನೆ ಗಂಭೀರವಾಗಿದ್ದರೆ, ಸ್ವತಃ ಧಾವಿಸಿ ಚಿಕಿತ್ಸೆ ಕೊಡಿಸುತ್ತಾರೆ. ಠಾಣೆಯಲ್ಲಿ ಪ್ರಕರಣ ದಾಖಲಿಸಿ, ನಂತರದಲ್ಲಿ ವಿಮೆ ದೊರೆಯುವಂತೆ ಮಾಡುತ್ತಾರೆ. ಆದರೆ, ಇದೆಲ್ಲವೂ ಘಟನೆ ನಡೆದ ನಂತರದ ಪರಿಹಾರ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇನ್ನೂ ಯಾರೂ ಮುಂದಾಗಿಲ್ಲ ಎಂದು ಎಂ.ಜಿ. ರಸ್ತೆ-ಎಲೆಕ್ಟ್ರಾನಿಕ್‌ ಸಿಟಿ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಡೆಲಿವರಿ ಬಾಯ್‌ ಸಂಜಯ್‌ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ನಕಲಿ ಫ‌ುಡ್‌ ಆರ್ಡರ್‌: ಕೆಲವರು ಹಣ ಇಲ್ಲದಿದ್ದರೂ ಆನ್‌ಲೈನ್‌ನಲ್ಲಿ ಫ‌ುಡ್‌ ಆರ್ಡರ್‌ ಮಾಡಿರುತ್ತಾರೆ. ಅದನ್ನು ಕೊಂಡೊಯ್ದ ಸಿಬ್ಬಂದಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿ ಆಹಾರ ಪದಾರ್ಥ ಕಸಿದುಕೊಂಡಿದ್ದಲ್ಲದೆ, ದರೋಡೆ ಮಾಡಿರುವ ಘಟನೆಗಳು ನಡೆಯುತ್ತವೆ. ಇಂತಹ ಘಟನೆಗಳು ರಾತ್ರಿ ಸಂದರ್ಭ ಅಥವಾ ಹೊರವಲಯದ ಪ್ರದೇಶದಲ್ಲಿ ನಡೆಯುತ್ತವೆ. ಅವುಗಳನ್ನು ನಕಲಿ ಫ‌ುಡ್‌ ಆರ್ಡರ್‌ ಎಂದು ಪರಿಗಣಿಸಲಾಗುತ್ತದೆ ಎಂದು ಫ‌ುಡ್‌ ಡೆಲವರಿ ಬಾಯ್‌ವೊಬ್ಬರು ಮಾಹಿತಿ ನೀಡಿದರು.

ಗ್ರಾಹಕರ ಸುರಕ್ಷತೆಯೂ ಮುಖ್ಯ: ಇನ್ನು ಇ-ಕಾಮರ್ಸ್‌ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಬಗ್ಗೆಯೂ ಗ್ರಾಹಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಫ‌ುಡ್‌ ಡೆಲವರಿ, ವಸ್ತುಗಳನ್ನು ಗ್ರಾಹಕರಿಗೆ ತಲುಪಿಸಲು ಬರುವ ಸಿಬ್ಬಂದಿ, ಮಹಿಳಾ ಗ್ರಾಹಕರ ಜತೆ ಅಸಭ್ಯವಾಗಿ ವರ್ತಿಸಿರುವ ಘಟನೆಗಳು ಸಾಕಷ್ಟಿವೆ. ಜತೆಗೆ ಕೆಲ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆಗಳು ವರದಿಯಾಗಿವೆ. ಹೀಗಾಗಿ ಇ-ಕಾಮರ್ಸ್‌ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾತ್ರವಲ್ಲದೆ, ಗ್ರಾಹಕರ ಸುರಕ್ಷತೆ ಕೂಡ ಬಹಳ ಮುಖ್ಯವಾಗಿದೆ.

ಗ್ರಾಹಕರ ಮೇಲೆ ದೌರ್ಜನ್ಯ
* ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಡೆಲಿವರಿ ಬಾಯ್‌ನಿಂದ ಮನೆಗೆ ನುಗ್ಗಿ ದರೋಡೆ.
* ಬಂಡೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಬೊಗಳುತ್ತಿದ್ದ ನಾಯಿ ಕೊಂದಿದ್ದ ಫ‌ುಡ್‌ ಡೆಲವರಿ ಬಾಯ್‌.
* ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ವಿಳಾಸ ಕೇಳುವ ನೆಪದಲ್ಲಿ ಫ‌ುಡ್‌ ಡೆಲವರಿ ಬಾಯ್‌ನಿಂದ ಮಹಿಳೆಗೆ ಲೈಂಗಿಕ ದೌರ್ಜನ್ಯ.

ಸಿಬ್ಬಂದಿ ಮೇಲೆ ಹಲ್ಲೆ
* 2018-ನಕಲಿ ಪುಡ್‌ ಆರ್ಡರ್‌- ಶೇಷಾದ್ರಿಪುರದಲ್ಲಿ ಫ‌ುಡ್‌ ಡೆಲಿವರಿ ಬಾಯ್‌ ಮುಬಾರಕ್‌ ಸೇರಿ ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ.
* 2019-ತಲ್ಲಘಟ್ಟಪುರದಲ್ಲಿ ಏಕಮುಖ ಸಂಚಾರದಲ್ಲಿ ಬಂದ ಯುವಕರನ್ನು ಪ್ರಶ್ನಿಸಿದ್ದಕ್ಕೆ ಫ‌ುಡ್‌ ಡೆಲವರಿ ಬಾಯ್‌ ಶರತ್‌ ಮೇಲೆ ಹಲ್ಲೆ.
* 2020-ಸುಬ್ರಹ್ಮಣ್ಯಪುರದ ನಿರ್ಜನ ಪ್ರದೇಶದಲ್ಲಿ ಸಚಿನ್‌ ಎಂಬಾತನ ಮೇಲೆ ಹಲ್ಲೆ.
* 2020-ಕಾಟನ್‌ಪೇಟೆಯಲ್ಲಿ ಮಧು ಎಂಬಾತನ ಮೇಲೆ ಹಲ್ಲೆ.

ಫ‌ುಡ್‌ ಡೆಲಿವರಿ ಬಾಯ್‌ಗಳ ಮೇಲಿನ ಹಲ್ಲೆ ನಡೆಯುತ್ತಿರುತ್ತವೆ. ಅಂಕಿ-ಅಂಶಗಳ ಪ್ರಕಾರ ಫ‌ುಡ್‌ ಡೆಲಿವರಿ ಬಾಯ್‌ಗಳ ಮೇಲೆ ಗಂಭೀರ ಸ್ವರೂಪದ ಹಲ್ಲೆಗಳು ಇದುವರೆಗೆ ವರದಿಯಾಗಿಲ್ಲ. ಒಂದು ವೇಳೆ ನಡೆದರೆ ಸೂಕ್ತ ರಕ್ಷಣೆ ಹಾಗೂ ಕಾನೂನು ತರುವಂತೆ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗುವುದು.
-ವೆಂಕಟೇಶ್‌ ಎಸ್‌. ಅರಬಟ್ಟಿ, ವಿಎಚ್‌ವಿಕೆ ಕಾನೂನು ಪಾಲುದಾರರು

ಇ-ಕಾಮರ್ಸ್‌ ಉದ್ಯೋಗ ಸೃಷ್ಟಿ ಜತೆಗೆ ಆರ್ಥಿಕ ವೃದ್ಧಿಗೆ ಕಾರಣವಾಗುತ್ತಿದ್ದರೂ, ಆಗಾಗ್ಗೆ ನಡೆಯುವ ಘಟನೆಗಳು ಈ ಕ್ಷೇತ್ರದ ಮೇಲಿನ ವಿಶ್ವಾಸವನ್ನು ಪ್ರಶ್ನಿಸುವಂತೆ ಮಾಡುತ್ತದೆ. ಡೆಲಿವರಿ ಬಾಯ್‌ಗಳ ಹಿನ್ನೆಲೆಯನ್ನು ಪೊಲೀಸರಿಂದ ದೃಢಪಡಿಸಿಕೊಳ್ಳಬೇಕು. ಘಟನೆ ನಿವಾರಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಶೋಧನೆಗಳೂ ನಡೆಯಬೇಕು.
-ಡಾ.ಅನಂತ್‌ ಆರ್‌. ಕೊಪ್ಪರ, ಅಧ್ಯಕ್ಷ ಮತ್ತು ಸಿಇಒ, ಕೆಟು ಟೆಕ್ನಾಲಜಿ ಸಲುಷನ್ಸ್‌

* ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next