ಕನ್ನಡದಲ್ಲಿ ಕರಾವಳಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಸಾಗುವ ಚಿತ್ರಗಳು ಬಂದಿವೆಯಾದರೂ, ಅದರೊಂದಿಗೆ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಬೆರೆತು ಪತ್ತೆದಾರಿ ಮಾದರಿಯ ಸಿನಿಮಾ ಈವರೆಗೆ ಬಂದಿಲ್ಲ. “ಅನುಕ್ತ’ ಎಂಬ ಹೊಸಬರ ಚಿತ್ರ ಅಂಥದ್ದೊಂದು ಅನುಭವ ಕಟ್ಟಿಕೊಡಲು ಅಣಿಯಾಗಿದೆ. ಈ ಚಿತ್ರದ ಮೂಲಕ ಅಶ್ವತ್ಥ್ ಸ್ಯಾಮ್ಯುಯೆಲ್ ನಿರ್ದೇಶಕರಾಗುತ್ತಿದ್ದಾರೆ. ಸಿನಿಮಾ ಈಗಾಗಲೇ ಪೂರ್ಣಗೊಂಡಿದ್ದು ಬಿಡುಗಡೆಯ ತಯಾರಿಯಲ್ಲಿದೆ.
“ಕನಸುಗಳು ಎಷ್ಟರ ಮಟ್ಟಿಗೆ ನಿಜವಾಗುತ್ತವೆ. ಆ ಕನಸಿನ ಮೇಲೆ ನಡೆಯುವ ಘಟನೆಗಳು ಏನೆಲ್ಲಾ ಸೃಷ್ಟಿಸುತ್ತವೆ ಎಂಬುದರ ಮೇಲೆ ಕಥೆ ಸಾಗುತ್ತದೆ’ ಎಂದು ಚಿತ್ರದ ವಿವರ ಕೊಡುತ್ತಾರೆ ನಿರ್ದೇಶಕ ಅಶ್ವತ್ಥ್. ಚಿತ್ರದಲ್ಲಿ ತುಳುನಾಡಿನ ಧಾರ್ಮಿಕ ಆಚರಣೆಯಾದ ದೈವಾರಾಧನೆಯ ಶಕ್ತಿ ಅನ್ಯಾಯ ನಡೆದಾಗ, ಹೇಗೆ ನ್ಯಾಯ ದೊರಕಿಸಿಕೊಡುತ್ತದೆ ಎಂಬ ನಂಬಿಕೆಯನ್ನು ತಿಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಇಲ್ಲಿನ ಮತ್ತೂಂದು ವಿಶೇಷವೆಂದರೆ, ಸುಮಾರು 500 ವರ್ಷಗಳ ಹಳೆಯ ದೊಡ್ಡ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಒಂದು ಕ್ರೈಮ್ ಹಿನ್ನೆಲೆಯ ಸಸ್ಪೆನ್ಸ್ ಥ್ರಿಲ್ಲರ್ ಕಥೆಯಲ್ಲಿ ಕನ್ನಡತನ ಮೇಳೈಸಿದೆ. ಅನು ಪ್ರಭಾಕರ್, ಸಂಪತ್‌ರಾಜ್, ಶ್ರೀಧರ್, ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್ ಚಿತ್ರದ ಆಕರ್ಷಣೆ. ಬಹುತೇಕ ಬೆಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಇಲ್ಲಿ ಮತ್ತೂಂದು ವಿಶೇಷವೆಂದರೆ, ಹಿನ್ನೆಲೆ ಸಂಗೀತ’ ಎಂದು ವಿವರ ಕೊಡುತ್ತಾರೆ ನಿರ್ದೇಶಕ ಅಶ್ವತ್ಥ್.
ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಹಣ ಮಾಡಿದ್ದಾರೆ. ಅವರಿಗೆ ನಿರ್ದೇಶಕರು ಕಥೆ ಹೇಳಿದಾಗ, ಹೊಸ ಪ್ರಯೋಗ ಎನಿಸಿತಂತೆ. “ಬಹುತೇಕ ಕರಾವಳಿ ಭಾಗದ ಚಿತ್ರಣ ಕಟ್ಟಿಕೊಡಬೇಕಿದ್ದರಿಂದ ಅದೊಂದು ರೀತಿಯ ಚಾಲೆಂಜ್ ಆಗಿತ್ತು. ನಿರ್ದೇಶಕರಿಗೆ ಎಲ್ಲಾ ವಿಭಾಗದ ಕೆಲಸವೂ ಗೊತ್ತು. ಹಾಗಾಗಿ ನಮ್ಮ ಕೆಲಸ ಸುಲಭವಾಗಿದೆ. ಇನ್ನು, 28 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ರಾತ್ರಿ ದಿನಗಳನ್ನು ಕಳೆದದ್ದೇ ಹೆಚ್ಚು. ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗುವುದು ಅಂದರೆ ಅದು ಹಿನ್ನೆಲೆ ಸಂಗೀತ. ಅದೇ ಚಿತ್ರದ ಶಕ್ತಿ’ ಎಂದರು ಮನೋಹರ್ ಜೋಶಿ.
ಸಂಗೀತ ನಿರ್ದೇಶಕ ನೊಬೀನ್ ಪಾಲ್ ಅವರಿಲ್ಲಿ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರಂತೆ. ಇಲ್ಲಿ ಭೂತಕೋಲ ದೃಶ್ಯಕ್ಕೆ ಕೊಟ್ಟಿರುವ ಹಿನ್ನೆಲೆ ಸಂಗೀತ ನನಗೆ ಹೊಸ ಅನುಭವ ಕೊಟ್ಟಿದೆ ಎಂಬುದು ನೊಬೀನ್ ಪಾಲ್ ಮಾತು.
ನಿರ್ಮಾಪಕ ಹರಿ ಬಂಗೇರ ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. “ಕಾಲೇಜು ದಿನಗಳಲ್ಲೇ ನಾನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. ಈ ಹಿಂದೆಯೇ ನನಗೆ ಸಿನಿಮಾ ನಿರ್ಮಿಸುವ ಆಸೆ ಇತ್ತು. ಆಗ ಎರಡು ಕಥೆ ಕೇಳಿದ್ದೆ. ಆದರೆ, ನನಗೆ ಆ ಕಥೆಯಲ್ಲಿ ಅಷ್ಟೊಂದು ಗಟ್ಟಿತನ ಇದೆ ಅನಿಸಲಿಲ್ಲ. ಅಶ್ವತ್ಥ್ ಹೇಳಿದ ಕಥೆಯಲ್ಲಿ ಹೊಸತನವಿತ್ತು. ಕರಾವಳಿ ಸೊಗಡು ತುಂಬಿತ್ತು. ಕನ್ನಡಕ್ಕೆ ಹೊಸ ಸಿನಿಮಾ ಕೊಡಬಹುದು ಅಂತ “ಅನುಕ್ತ’ ಚಿತ್ರ ನಿರ್ಮಿಸಿದ್ದಾಗಿ ಹೇಳಿಕೊಂಡರು ಅವರು.
ನಾಯಕ ಕಾರ್ತಿಕ್ ಅತ್ತಾವರ್‌ಗೆ ಇಲ್ಲಿ ನಟನೆಗೆ ಹೆಚ್ಚು ಅವಕಾಶ ಇರುವಂತಹ ಪಾತ್ರ ಸಿಕ್ಕಿದೆಯಂತೆ. “ಇದು ಕ್ರೈಮ್ ಬ್ರೇಸ್ಡ್ ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಗಿರುವುದರಿಂದ ನನಗೂ ಒಂದು ಕಡೆ ಭಯ ಮತ್ತು ಸಂತಸವಿದೆ. ಜನರ ಹೇಗೆ ಸ್ವೀರಿಸುತ್ತಾರೋ ಎಂಬ ಭಯ ಒಂದು ಕಡೆಯಾದರೆ, ಇಂಥದ್ದೊಂದು ಹೊಸ ಪ್ರಯತ್ನದಲ್ಲಿ ನಾನಿದ್ದೇನೆ ಎಂಬ ಸಂತಸ ಇನ್ನೊಂದು ಕಡೆ’ ಅಂದರು ಕಾರ್ತಿಕ್.
ಸಂತೋಷ್ ಕುಮಾರ್ ಕೊಂಚಾಡಿ ಮತ್ತು ಕಾರ್ತಿಕ್ ಕಥೆ ಬರೆದರೆ, ನವೀನ್ ಶರ್ಮ ಸಂಭಾಷಣೆ ಇದೆ. ವಿಶ್ವ ಸಂಕಲನ ಮಾಡಿದ್ದಾರೆ.